ಮಂಗಳವಾರ, ಏಪ್ರಿಲ್ 13, 2021
28 °C

ಜ್ಯಾಮಿತಿ ಮೀರಿದ ಜಮಿನಿ

ಡಿ. ಗರುಡ Updated:

ಅಕ್ಷರ ಗಾತ್ರ : | |

ಜ್ಯಾಮಿತಿ ಮೀರಿದ ಜಮಿನಿ

ಮನಸ್ಸು ಚಡಪಡಿಸಿತ್ತು. ವಿದೇಶಿ ಪ್ರಭಾವದ ನಗ್ನರೂಪಗಳನ್ನು ತೈಲವರ್ಣದಲ್ಲಿ ತೀಡಿ ತೀಡಿ ಸಾಕಾಗಿತ್ತು. ಕಲಾ ಶಾಲೆಯಲ್ಲಿ ಹೇಳಿಕೊಟ್ಟಿದ್ದು ಅದೇ ಪಾಠ. ಪಾಶ್ಚಾತ್ಯ ಕಲೆಯನ್ನು ಕಾರ್ಬನ್ ಕಾಪಿ ಇಳಿಸುವಂಥ ಶಿಕ್ಷಣ ಅದಾಗಿತ್ತು. ಕಲಾ ಶಿಕ್ಷಣ ಮುಗಿದ ನಂತರವೂ ಕಲೆಯನ್ನು ಮಾರಿಕೊಂಡು ಹೊಟ್ಟೆ ಹೊರೆಯಲು ಕ್ಯಾನ್ವಾಸ್ ಮೇಲೆ ಕುಂಚ ಇಟ್ಟಾಗಲೂ ಹರಡಿಕೊಂಡಿದ್ದೂ ನುಣುಪು ದೇಹಗಳ ಸಾಲು. ಅಷ್ಟೇ ಅಲ್ಲ ಸ್ವದೇಶಿ ಪ್ರಕೃತಿಯ ಸೊಬಗಿಗೆ ಕೂಡ ವಿದೇಶಿ ನುಣುಪಿನ ಪ್ರಭಾವಳಿ. ಕಲಾಕೃತಿ ಮಾರಾಟ ಆಗಬೇಕೆಂದರೆ ಹೀಗೆ ಮಾಡುವುದೇ ಸರಿ ಎನ್ನುವಂತಹ ಇಕ್ಕಟ್ಟು. ಆದರೆ ಚೌಕಟ್ಟು ಒಡೆದು ಕಲಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರು ಜಮಿನಿ ರಾಯ್. ಸ್ವಾತಂತ್ರ್ಯ ಪೂರ್ವದಲ್ಲಿ ಅದೊಂದು ಕ್ರಾಂತಿಕಾರಿ ಹೆಜ್ಜೆಯೇ ಆಗಿತ್ತು.ನಯವಾದ ತೈಲವರ್ಣ ಲೇಪಿಸಿ ಕಣ್ಣಿಗೆ ತಣ್ಣಗೆ ಎನಿಸುವ ಕುಂಚ ಕೌಶಲ ಮಾತ್ರ ಕಲೆಯಲ್ಲ; ಅದರ ಹೊರತಾಗಿ ನಿಲ್ಲುವ ತನ್ನತನವೇ ನಿಜವಾದ ಕಲೆ ಎನ್ನುವ ಸತ್ಯವನ್ನು ಜಮಿನಿ ಅರಿತರು. ಅಂಥದೊಂದು ಯೋಚನೆ ತೊಂಬತ್ತು ವರ್ಷಗಳ ಹಿಂದೆ ವಿಚಿತ್ರವಾಗಿ ಕಂಡಿರಬಹುದು. ಬಂಗಾಳದ ಈ ಕಲೆಗಾರ ಕ್ಯಾನ್ವಾಸ್ ಮೇಲೆ ಗೆರೆ ಎಳೆದಿಟ್ಟ ಚಿತ್ರಗಳು ಆಗ ಕಲಾ ಪಂಡಿತರಿಗೆ ಅದ್ಭುತ ಎನಿಸಲೂ ಇಲ್ಲ. ಆದ್ದರಿಂದ ಇದೇ ನಿಜವಾದದೇಶಿ ಸೊಬಗೆಂದು ಒಪ್ಪಿಕೊಳ್ಳಲು ಬಹುಕಾಲವೇ ಬೇಕಾಯಿತು.ವಿಕ್ಟೋರಿಯನ್ ನಾಜೂಕಿನ ಕುಂಚ ಲಾಲಿತ್ಯಕ್ಕೆ ಮರುಳಾಗಿದ್ದ ಸ್ವದೇಶಿಯರೇ ಇವರ ಚಿತ್ರಗಳು ಒರಟೆಂದು ಮೂಗು ಮುರಿದರು. ಆದರೆ ರಾಯ್ ಅವರು ಬಣ್ಣಕ್ಕೆ ಅದ್ದಿದ ಕುಂಚವು `ಸಂಥಾಲಿ~ ಸಾಂಪ್ರದಾಯಿಕ ನೃತ್ಯದ ಲಯ ಹಿಡಿದು ಕ್ಯಾನ್ವಾಸ್ ಮೇಲೆ ನಲಿದಿತ್ತು. ಅದೇ ಅವರ ಮನಕ್ಕೆ ಹಿತ ನೀಡಿದ ಸ್ವಂತಿಕೆ. ಭಾರತದ ದೇಶಿ ಮಣ್ಣಿನ ಗುಣ ಅಲ್ಲಿದ್ದರಿಂದ ಈ ಚಿತ್ರಗಳನ್ನು ಕಂಡ ಬ್ರಿಟಿಷ್ ಆಡಳಿತದಲ್ಲಿದ್ದ ಕಲಾಸಕ್ತ ಅಧಿಕಾರಿಗಳೂ ಮೆಚ್ಚಿಕೊಂಡರು. ರಾಯ್ ಅವರು ಬಿಗಿದಪ್ಪಿಕೊಂಡ ಸ್ವದೇಶಿ ಭಾವಕ್ಕೆ ಸಿಕ್ಕ ಮೊದಲ ಜಯ ಅದು.ಬಂಕುರಾ ಜಿಲ್ಲೆಯ ಬೆಲಿಯಾತೂರ್ ಗ್ರಾಮದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಮಿನಿ, ಒಂಬತ್ತು ದಶಕಗಳ ಹಿಂದೆಯೇ ಭಾರತದ ಕಲಾ ಸಂಪ್ರದಾಯಕ್ಕೊಂದು ಹೊಸ ಆಯಾಮ ನೀಡಿದರು. ಬಹುಶಃ ಬಂಕುರಾ ಭಾಗದಲ್ಲಿ ಅವರು ಕಂಡಿದ್ದ ಸಾಂಪ್ರದಾಯಿಕ ಜೇಡಿಮಣ್ಣಿನ ಕಲಾಕೃತಿಗಳು ಅವರ ಮೇಲೆ ಪ್ರಭಾವ ಬೀರಿದ್ದು ದೀರ್ಘ ಕಾಲದ ನಂತರ ಮನದಾಳದಿಂದ ಹೊರಹೊಮ್ಮಿರುವ ಸಾಧ್ಯತೆಯೂ ಇದೆ. ಏಕೆಂದರೆ ಅವರ ಅನೇಕ ಕಲಾಕೃತಿಗಳಲ್ಲಿ ಜೇಡಿಮಣ್ಣಿನ ಪ್ರತಿಮೆಗಳ ಛಾಯೆ ಎದ್ದು ಕಾಣಿಸುತ್ತದೆ.ಬಹಳಷ್ಟು ಖ್ಯಾತಿ ಗಳಿಸಿದ ಅವರ `ಕಪ್ಪು ಕುದುರೆ~ಯಂತೂ ಸ್ಪಷ್ಟವಾಗಿ ಟೆರ‌್ರಾಕೋಟಾ ಕಲೆಯ ಬಿಂಬ. ಆದರೆ ಕೆಮ್ಮಣ್ಣಿಗೆ ಹೋಲುವ ವರ್ಣದ ಬದಲಿಗೆ ಅದನ್ನು ಕಪ್ಪು ಬಣ್ಣಕ್ಕೆ ಇಳಿಸಿದ್ದು ವಿಶೇಷ. ಇಂಥ ಅಚ್ಚರಿ ಎನಿಸುವ ವರ್ಣ ಪ್ರಯೋಗಕ್ಕಾಗಿ ಇವರನ್ನು ನವ್ಯ ಕಲಾವಿದರ ಸಾಲಿನಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಹೇಳಲು ಬಯಸಿದ್ದನ್ನು ಸ್ಪಷ್ಟವಾಗಿ ಕೃತಿಯ ಮೂಲಕ ವ್ಯಕ್ತಪಡಿಸಿರುವ ರೀತಿ. ಇಂದಿನವರೆಗೂ ಪ್ರಶಂಸೆಗೆ ಪಾತ್ರವಾಗಿರುವ ಅವರ `ತಾಯಿ-ಮಗು~ ಚಿತ್ರಣವು ಎಂಥವರನ್ನೂ ತಡೆದು ನಿಲ್ಲಿಸಿ ನೋಡುತ್ತಲೇ ಇರುವಂತೆ ಮಾಡುತ್ತದೆ. ಈ ಕೃತಿಯ ಅನುಕರಣೆಯನ್ನು ಆನಂತರ ಅನೇಕ ಕುಂಚ ಕಲಾವಿದರು ಮಾಡಿದ್ದಾರೆ.1887ರಲ್ಲಿ ಜನಿಸಿದ ಜಮಿನಿ ರಾಯ್ ಕಲೆಯಲ್ಲಿನ ಆಸಕ್ತಿಯು ಹದಿನಾರನೇ ವಯಸ್ಸಿನಲ್ಲಿಯೇ ಕೋಲ್ಕತ್ತದ ಸರ್ಕಾರಿ ಕಲಾಶಾಲೆ ಸೇರುವಂತೆ ಮಾಡಿತು. 1908ರಲ್ಲಿ ಶಿಕ್ಷಣ ಮುಗಿಸಿದಾಗ ಪದವಿ ಪಡೆದ ಸಮಾಧಾನ ಇದ್ದರೂ, ಒಬ್ಬ ಕಲಾವಿದನಾಗಿ ತಾವಿನ್ನೂ ರೂಪುಗೊಂಡಿಲ್ಲ ಎನ್ನುವ ಕೊರತೆ ಕಾಡುತ್ತಲೇ ಇತ್ತು. ತಾವು ಬರೆದ ಚಿತ್ರಗಳಲ್ಲಿ ವಿದೇಶಿ ಪ್ರಭಾವವೇ ಹೆಚ್ಚೆಂದು ಮನಸ್ಸಿಗೆ ಚುಚ್ಚುತಿತ್ತು. ಆಗಲೇ ಅವರು ಕೋಲ್ಕತ್ತದ `ಕಾಳಿ ಘಾಟ್~ಗೆ ಸಾಗುವ ಗಲ್ಲಿಗಳಲ್ಲಿ ಹೊಸ ಯೋಚನೆಯ ಹೊಳಪಿನ ಕಿರಣ ಕಾಣುವವರೆಗೆ ಸುತ್ತಿದರು. ಬೀದಿ ಬದಿಯ ಕಟ್ಟೆಗಳ ಮೇಲೆ ಕುಳಿತು ಕಳೆದ ಕಾಲವೂ ಅದೆಷ್ಟೋ ಲೆಕ್ಕವಿಲ್ಲ. ಈ ಅವಧಿಯಲ್ಲಿಯೇ ನಿಧಾನವಾಗಿ ದೇಶಿ ಕಲೆಗಳ ಜೊತೆಗೆ ಜಮಿನಿ ಅವರ ಆಶಯದ ಸಂಗಮವಾಯಿತು. ಆನಂತರ ಬಣ್ಣಕ್ಕೆ ಕುಂಚದ ಸ್ಪರ್ಶವಾದಾಗ ಪ್ರಭಾವಿ ಗೆರೆಗಳು ಮೂಡಿದವು.ಸಾಂಪ್ರದಾಯಿಕ ಕಲೆಗೆ ಹೊಸ ಹೊಳಪು ನೀಡಿದ ರಾಯ್ ಕಲಾಕೃತಿಗಳನ್ನು ಕಂಡ ಬ್ರಿಟಿಷ್ ಅಧಿಕಾರಿಗಳೂ ಬೆರಗಾದರು. ಭಾರತದ ಕಲಾವಿದನೊಬ್ಬನ ವಿಭಿನ್ನ ಯೋಚನೆ ಅವರನ್ನೂ ಅಚ್ಚರಿಗೊಳಿಸಿತ್ತು. ಪರಿಣಾಮವಾಗಿ 1934ರಲ್ಲಿಯೇ `ವೈಸ್‌ರಾಯ್ ಸ್ವರ್ಣ ಪದಕ~ ಗೌರವವೂ ಸಂದಿತು. ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು `ಪದ್ಮ ಭೂಷಣ~ ನೀಡಿತು. ಪ್ರಶಸ್ತಿಗಳಿಂದ ಕಲಾವಿದ ದೊಡ್ಡವನಾಗುವುದಿಲ್ಲ ಕಲಾಕೃತಿಗಳಿಂದ ದೊಡ್ಡವನಾಗುತ್ತಾನೆಂದು ಹೇಳುತ್ತಿದ್ದ ಅವರು ಕೊನೆಯವರೆಗೂ ಕುಂಚದ ಸಾಂಗತ್ಯ ಬಿಡಲಿಲ್ಲ.ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಜಮಿನಿ ಅವರ ಖ್ಯಾತಿ ಹರಡಲು ಕಾರಣವಾಗಿದ್ದು `ಹಕ್ಕಿ ಮತ್ತು ಜೋಡಿಗಾರರು~ ಹಾಗೂ `ತಾಯಿ-ಮಗು~ ಕಲಾಕೃತಿಗಳು. ಘಾಡ ವರ್ಣಗಳ ಗೆರೆಗಳಿಂದ ಭಾವಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಈ ಮಹಾ ಕಲಾವಿದನನ್ನು ಈಗಲೂ ಅನೇಕರು ಅನುಕರಣೆ ಮಾಡುತ್ತಾರೆ. ಅನೇಕ ಕಾರ್ಟೂನ್ ಪಾತ್ರಗಳ ಸೃಷ್ಟಿಯಲ್ಲಿಯೂ ಇದೇ ಕುಂಚ ಕಲಾವಿದ ರೂಪಿಸಿದ ಮುಖಗಳ ಛಾಯೆ ಸ್ಪಷ್ಟವಾಗಿ ಕಾಣಿಸುತ್ತದೆ.ವಿಶೇಷವೆಂದರೆ ಹಿರಿಯರು ಯೋಚನೆ ಮಾಡುವಂತೆ ಮಾಡುವ ರಾಯ್ ಕಲಾಕೃತಿಗಳು ಮಕ್ಕಳಿಗೂ ಭಾರಿ ಇಷ್ಟ. ಸರಳ ಎನ್ನಿಸುವ ಗೆರೆಗಳಲ್ಲಿ ಇಷ್ಟಗಲ ಕಣ್ಣರಳಿಸಿರುವ ಪಾತ್ರಗಳನ್ನು ಕಾಣುವ ಮುದ್ದು ಮಗುವಿನ ಮೊಗದಲ್ಲಿ ಮಂದಹಾಸ ಮೂಡುವುದು ಖಚಿತ. ಅಂಥ ಆಪ್ತವೆನ್ನಿಸುವ ಚಿತ್ರಗಳನ್ನು ಬರೆದ ಜಮಿನಿ ರಾಯ್ 1972ರಲ್ಲಿ ನಿಧನರಾದರೂ, ಈಗಲೂ ಅವರು ಪ್ರಸ್ತುತ ಎನಿಸುವ ಕಲಾಚೈತನ್ಯ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.