ಜ್ಯೋತಿಷ ನಿಷೇಧಕ್ಕೆ ಕುಂವೀ ಒತ್ತಾಯ

ಬೆಂಗಳೂರು: ‘ಸರ್ಕಾರ ಜ್ಯೋತಿಷಿಗಳನ್ನು ಭಯೋತ್ಪಾದಕರೆಂದು ಘೋಷಿಸಿ, ಜ್ಯೋತಿಷವನ್ನು ನಿಷೇಧಿಸಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಶುಕ್ರವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಗ ರಸ್ತೆಗೊಂದು ದೇವಸ್ಥಾನ ನಿರ್ಮಾಣವಾಗಿವೆ. ಅಲ್ಲಿ ಕಂದಾಚಾರ, ಮೂಢನಂಬಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಜ್ಯೋತಿಷಿಗಳು ಇಂದು ನಮ್ಮ ದಿನಚರಿಯನ್ನೇ ನಿರ್ದೇಶನ ಮಾಡುವಷ್ಟು ಬೆಳೆದಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಬಸವಣ್ಣ, ಅಂಬೇಡ್ಕರ್, ಮಹಾತ್ಮಗಾಂಧಿ ವಿಶ್ವಮಾನವರು. ವೀರಶೈವ ಕೇವಲ ಒಂದು ಜಾತಿಯಲ್ಲ. ಲಿಂಗಧಾರಿಗಳ ಅಥವಾ ಪುರೋಹಿತರ ಸ್ವತ್ತಲ್ಲ. ಬಸವಣ್ಣ ಇಡೀ ಮಾನವ ಧರ್ಮವನ್ನು ಪೋಷಿಸುವ ತತ್ವವನ್ನು ಬೋಧಿಸಿದ್ದಾರೆ. ಅಂತಹ ಬಸವಣ್ಣನನ್ನು ಕುದುರೆ ಮೇಲೆ ಕೂರಿಸಿ, ಒಂದು ಕಿರೀಟವಿಟ್ಟು ವೈಭವೀಕರಿಸುತ್ತಿರುವುದು ದುರದೃಷ್ಟವಾಗಿದೆ’ ಎಂದು ವಿಷಾದಿಸಿದರು.
‘ಇಂದಿನ 21 ನೇ ಶತಮಾನದ ಆಧುನಿಕ ಕಾಲದಲ್ಲಿಯೂ ನಮ್ಮ ಸಾಮಾಜಿಕ ಪರಂಪರೆ ಬದಲಾಗಿಲ್ಲ. ಮೂಢನಂಬಿಕೆ, ಜಾತಿ ವ್ಯವಸ್ಥೆ ಹೆಚ್ಚಾಗಿ, ಸಮಾಜದಲ್ಲಿ ಭಯಾನಕವಾದ ಪರಿಸ್ಥಿತಿಯಿದೆ. ನಮ್ಮ ಸ್ವಾಭಿಮಾನ, ಆತ್ಮಾಭಿಮಾನವನ್ನು ಕೆಣಕುವಂತಹ ಪದ್ಧತಿಗಳು ಆಚರಣೆಯಲ್ಲಿವೆ’ ಎಂದರು.
‘ನಮ್ಮ ಸಮಾಜದಲ್ಲಿ ನಾಯಿ, ಹಂದಿಯಂತಹ ಪ್ರಾಣಿಗಳಿಗೆ ನೀಡಿದ ಸ್ಥಾನವನ್ನು ಮನುಷ್ಯನಿಗೆ ನೀಡುತ್ತಿಲ್ಲ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡದೆ, ಅತ್ಯಂತ ಕೀಳು ರೀತಿಯಲ್ಲಿ ನೋಡಲಾಗುತ್ತಿದೆ. ದಲಿತರ ಸ್ಪರ್ಶದಿಂದ ಎಲ್ಲವೂ ಅಪವಿತ್ರಗೊಳ್ಳುತ್ತದೆ ಎಂಬ ಭಾವನೆ ಅನಾದಿಕಾಲದಿಂದ ಇಂದಿನವರೆಗೂ ನಡೆದುಕೊಂಡು ಬಂದಿರುವುದು ನಮ್ಮ ಸಮಾಜದ ದುರಂತವಾಗಿದೆ’ ಎಂದು ಹೇಳಿದರು.
‘ಕಾಯಕ, ದಾಸೋಹ ತತ್ವ ಬಸವಣ್ಣ ಬೋಧಿಸಿದ ಎರಡು ಅದ್ಭುತ ಪರಿಕಲ್ಪನೆಗಳು. ಯಾವ ಕೆಲಸವೂ ಕೀಳಲ್ಲ. ಸಮಾಜದ ಎಲ್ಲ ಕೆಲಸಗಳೂ ಪವಿತ್ರವಾದವು ಹಾಗೂ ತನ್ನಲ್ಲಿರುವುದನ್ನು ದೀನ, ದುರ್ಬಲರಿಗೆ ದಾನ ಮಾಡಬೇಕೆಂದು ಹೇಳಿದ ತತ್ವಗಳು ಅನುಕರಣೀಯ’ ಎಂದರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಬಸವಣ್ಣ ಮಹಾನ್ ಮಾನವತಾವಾದಿ. ಆದರೆ, ಬಸವಣ್ಣನ ವಚನಗಳು ಹೆಚ್ಚು ಪರಿಚಿತವಾಗಿಲ್ಲ ಎಂಬುದು ದುಃಖಕರ ಸಂಗತಿ’ ಎಂದು ಹೇಳಿದರು.
‘ಬಸವಣ್ಣ ಮತ್ತು ಇತರೆ ಶರಣರ ಇತಿಹಾಸವನ್ನು ಪರಿಚಯಿಸುವ ಕೃತಿಗಳನ್ನು ಎಲ್ಲ ಭಾಷೆಗಳಲ್ಲಿ ಮುದ್ರಿಸಬೇಕಾದ ಅಗತ್ಯವಿದೆ. ಸಮಗ್ರ ವಚನ ಸಾಹಿತ್ಯವು ಎಲ್ಲ ಭಾಷೆಗಳಲ್ಲಿಯೂ ಅನುವಾದವಾಗಬೇಕು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.