ಗುರುವಾರ , ಜನವರಿ 30, 2020
19 °C

ಜ.20ರಂದು ಮೈಸೂರು ದರ್ಶನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬಹು ನಿರೀಕ್ಷಿತ `ಮೈಸೂರು ದರ್ಶನ~ದ ಮೊದಲ ಎರಡು ಸಂಪುಟಗಳು ಜ.20 ರಂದು ಲೋಕಾರ್ಪಣೆಗೊಳ್ಳಲಿವೆ.ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಸಾರಾಂಗದ ಗೌರವ ನಿರ್ದೇಶಕ ಡಾ.ಡಿ.ಕೆ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಾಂಸ್ಕೃತಿಕ ನಗರಿ ಮೈಸೂರಿನ ಗತ ವೈಭವ, ಐತಿಹಾಸಿಕ ಮಹತ್ವವನ್ನು ಸಾರುವ ಉದ್ದೇಶದಿಂದ `ಮೈಸೂರು ದರ್ಶನ~ ಹೊರತರಲು  ಕರಾಮುವಿವಿ ನಿರ್ಧರಿಸಿತ್ತು. ಡಾ.ಬಿ.ವಿ.ವಿವೇಕ ರೈ ಅವರು ಕುಲಪತಿಗಳಾಗಿದ್ದಾಗ ಆರಂಭ ವಾದ ಈ ಕಾರ್ಯ ಎರಡು ಸಂಪುಟಗಳಾಗಿ ಹೊರಬರುತ್ತಿದೆ. ವರ್ಷಾಂತ್ಯಕ್ಕೆ ಇನ್ನೂ ಎರಡು ಸಂಪುಟಗಳು ಬಿಡುಗಡೆಯಾಗುವ ನಿರೀಕ್ಷೆಯೂ ಇದೆ.ಮೈಸೂರಿನ ಇತಿಹಾಸ, ಪರಂಪರೆ, ಆಡಳಿತ ನಿರ್ವಹಣೆ, ಸಾರಿಗೆ ಸಂಪರ್ಕ, ವಾಣಿಜ್ಯ, ಬ್ಯಾಂಕಿಂಗ್, ಉದ್ಯಮ, ಆರೋಗ್ಯ, ಸಾಮಾಜಿಕ ಬೆಳವಣಿಗೆ, ಸಂಘ- ಸಂಸ್ಥೆಗಳು, ಧರ್ಮ, ಉತ್ಸವ, ಹಬ್ಬ, ಶಿಲ್ಪ, ಚಿತ್ರಕಲೆ, ನೃತ್ಯ, ಸಂಗೀತ, ಗಮಕ, ಹರಿಕಥೆ, ಜಾನಪದ, ರಂಗಭೂಮಿ, ಚಲನಚಿತ್ರ, ಕ್ರೀಡೆ, ಶಿಕ್ಷಣ, ಭಾಷೆ, ಸಾಹಿತ್ಯ, ಸಮೂಹ ಮಾಧ್ಯಮ, ವಸ್ತು ಸಂಗ್ರಹಾಲಯ, ಹಿರಿಯರ ನೆನಪುಗಳು ನಾಲ್ಕು ಸಂಪುಟಗಳಾಗಿ ಹೊರಬರಲಿವೆ. ಮೊದಲ ಸಂಪುಟ 850, 2ನೇ ಸಂಪುಟ 650 ಪುಟ ಹೊಂದಿವೆ. ಪಾರಂಪರಿಕ ನಗರದ ಹಿರಿಮೆಯನ್ನು ಸಾರುವ ನೂರಾರು ಫೋಟೋಗಳು ಸಹ ಸಂಪುಟದಲ್ಲಿವೆ.ಮೊದಲ ಸಂಪುಟದ ಬೆಲೆ ರೂ.1000 ಹಾಗೂ 2ನೇ ಸಂಪುಟದ ಬೆಲೆ ರೂ.800 ಎಂದು ನಿಗದಿಪಡಿಸ ಲಾಗಿದೆ. ಆದರೆ ಸಂಪುಟಗಳು ಲೋಕಾರ್ಪಣೆಯಾಗಲಿರುವ ಜ.20 ರಂದು ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)