ಗುರುವಾರ , ಅಕ್ಟೋಬರ್ 17, 2019
22 °C

ಜ.8ರಿಂದ ಸಿಪಿಎಂ ರಾಜ್ಯ ಸಮ್ಮೇಳನ

Published:
Updated:

ಚಿಕ್ಕಬಳ್ಳಾಪುರ: ಸಿಪಿಎಂ 20ನೇ ರಾಜ್ಯ ಸಮ್ಮೇಳನ ನಗರದಲ್ಲಿ ಜನವರಿ 8 ರಿಂದ 11ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಮತ್ತು ಸಂಸದ ಸೀತಾರಾಂ ಯೆಚೂರಿ ಅವರು ಸಮ್ಮೇಳ ನಕ್ಕೆ ಚಾಲನೆ ನೀಡಲಿದ್ದಾರೆ. ರಾಷ್ಟ್ರ ಮತ್ತು ರಾಜ್ಯದ ಮುಖಂಡರು ಆಗಮಿಸಲಿದ್ದು, ಬೃಹತ್ ರ‌್ಯಾಲಿಯೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದೆ.



`ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸಿಪಿಎಂ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಸೀತಾರಾಂ ಯೆಚೂರಿ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಮೊದಲ ದಿನದಂದು ನಡೆಯುವ ಬೃಹತ್ ರ‌್ಯಾಲಿಯಲ್ಲಿ 30 ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯ ಕರ್ತರು ಭಾಗವಹಿಸಲಿದ್ದಾರೆ. ಕೆಂಪು ಸಮವಸ್ತ್ರಧಾರಿಗಳು ಸೇರಿದಂತೆ ಇತರು ರ‌್ಯಾಲಿಯಲ್ಲಿ ಭಾಗವಹಿಸಲಿದ್ದು, ಶಿಸ್ತು ಮತ್ತು ಬದ್ಧತೆಯಿಂದ ನಡೆಸಲಾಗುವುದು~ ಎಂದು ಸಿಪಿಎಂ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



`ಪಕ್ಷದ ರಾಷ್ಟ್ರೀಯ ಮುಖಂಡರಾದ ಎಸ್.ರಾಮಚಂದ್ರನ್ ಪಿಳ್ಳೆ ಮತ್ತು ಕೆ.ವರದರಾಜನ್ ಅವರು ನಾಲ್ಕು ದಿನಗಳ ಕಾಲ ಸಮ್ಮೇಳನದಲ್ಲಿ ಉಪಸ್ಥಿತರಿದ್ದು, ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಅಂತಿಮ ದಿನದಂದು ಪಕ್ಷದ ನೂತನ ರಾಜ್ಯ ಘಟಕದ ಕಾರ್ಯದರ್ಶಿಯನ್ನು ಮತ್ತು ಕಾರ್ಯದರ್ಶಿ ಮಂಡಳಿಯನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.



`ಸಮ್ಮೇಳನದ ಸ್ಥಳವನ್ನು ಜ್ಯೋತಿಬಸು ನಗರ, ಕಾರ್ಯಕ್ರಮವು ಹರಿಕಿಷನ್‌ಸಿಂಗ್ ಸುರ್ಜಿತ್ ವೇದಿಕೆ ಮತ್ತು ಸಮ್ಮೇಳನದ ಗೋಷ್ಠಿಗಳು ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ವೇದಿಕೆಯಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳ 410 ಪ್ರತಿನಿಧಿಗಳು ಮತ್ತು 50 ಮಂದಿ ವೀಕ್ಷಕರು ಭಾಗವಹಿಸಲಿದ್ದಾರೆ. ಪಕ್ಷದ ಆಂತರಿಕ ವಿಷಯಗಳನ್ನು ಚರ್ಚಿಸಿ, ವಿಮರ್ಶಿಸಲಾಗುವುದು. ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು~ ಎಂದರು.



`ಸಮ್ಮೇಳನದ ಸಂದರ್ಭದಲ್ಲಿ ಪಕ್ಷದ ಮುಖಂಡ ಎ.ಕೆ.ಗೋಪಾಲನ್ ಅವರ ಕುರಿತು ಚಿತ್ರ-ಬರಹಗಳನ್ನು ಆಧರಿಸಿದ ವಸ್ತುಪ್ರದರ್ಶನ ನಡೆಸಲಾಗುವುದು. ಜಿಲ್ಲೆಯಲ್ಲಿನ ಕಮ್ಯುನಿಸ್ಟ್ ಚಳವಳಿ ಮತ್ತು ಇತರ ಹೋರಾಟಗಳ ಬಗ್ಗೆಯೂ ವಸ್ತು ಪ್ರದರ್ಶನ ನಡೆಸಲಾಗುವುದು~ ಎಂದು ಅವರು ವಿವರಿಸಿದರು.



`ಸಮ್ಮೇಳನದ ಯಶಸ್ಸಿಗಾಗಿ ಜನಸಾಮಾನ್ಯರಿಂದ ಮತ್ತು ಕಾರ್ಮಿಕರಿಂದ ನಿಧಿಯನ್ನು ಸಂಗ್ರಹಿಸಲಾಗಿದ್ದು, ಎಲ್ಲರೂ ಸಂತಸದಿಂದ ನಿಧಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಇದು ಐತಿಹಾಸಿಕ ಸಮ್ಮೇಳನವಾಗಲಿದ್ದು, ರಾಜ್ಯ ಪ್ರಸ್ತುತ ಸ್ಥಿತಿಗತಿಯಲ್ಲಿ ಪರಿಣಾಮಕಾರಿಯಾಗಲಿದೆ~ ಎಂದು ಅವರು ಹೇಳಿದರು. ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮತ್ತು ಖಜಾಂಚಿ ಸಿದ್ದಗಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post Comments (+)