ಟಟ್ರಾ ಟ್ರಕ್ ಹಗರಣ: ತೇಜಿಂದರ್ ವಿರುದ್ಧ ಸಿಬಿಐ ಮೊಕದ್ದಮೆ

7

ಟಟ್ರಾ ಟ್ರಕ್ ಹಗರಣ: ತೇಜಿಂದರ್ ವಿರುದ್ಧ ಸಿಬಿಐ ಮೊಕದ್ದಮೆ

Published:
Updated:

ನವದೆಹಲಿ: ಕಳಪೆ ಗುಣಮಟ್ಟದ ಬಿಇಎಂಎಲ್ `ಟಟ್ರಾ~ ಟ್ರಕ್ಕುಗಳ ಖರೀದಿಗೆ ಅನುಮತಿ ಪಡೆಯಲು ಮಾಜಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರಿಗೆ ಲಂಚದ ಆಮಿಷವೊಡ್ಡಿದ ಆರೋಪ ಎದುರಿಸುತ್ತಿರುವ ನಿವೃತ್ತ ಲೆ.ಜ. ತೇಜಿಂದರ್ ಸಿಂಗ್ ಮೇಲೆ ಮೊಕದ್ದಮೆ ದಾಖಲಿಸಿರುವ ಸಿಬಿಐ, ದೆಹಲಿ ಮತ್ತು ಮುಂಬೈನ ಏಳು ಸ್ಥಳಗಳ ಮೇಲೆ ಶನಿವಾರ ದಾಳಿ ನಡೆಸಿದೆ.ಮಾಜಿ ಸೇನಾ ಮುಖ್ಯಸ್ಥರ ಆರೋಪ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ ಆರು ತಿಂಗಳ ಬಳಿಕ ತೇಜಿಂದರ್ ಸಿಂಗ್ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ಹೂಡಲು ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ ಎಂದು ತನಿಖಾ ದಳದ ಮೂಲಗಳು ಸ್ಪಷ್ಟಪಡಿಸಿವೆ.ತೇಜಿಂದರ್‌ಸಿಂಗ್ ಪ್ರತಿಕ್ರಿಯೆ ಬಯಸಿ ಕಳುಹಿಸಿದ್ದ ಪತ್ರಗಳಿಗೆ ಅವರು ಉತ್ತರಿಸಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 12ರ ಅಡಿ ಮೊಕದ್ದಮೆ ದಾಖಲಿಸಿದ ಬಳಿಕ ಸಿಬಿಐ, ಎಲ್ಲ ಟ್ರಕ್ಕುಗಳನ್ನು ಬಿಇಎಂಎಲ್‌ಗೆ ಪೂರೈಸುವ `ಟಟ್ರಾ ಸೈಪಕ್ಸ್~ ಯುಕೆ ನಿರ್ದೇಶಕ ಹಾಗೂ ವೆಕ್ಟ್ರಾ ಅಧ್ಯಕ್ಷ ರವೀಂದರ್ ರಿಷಿ ಅವರಿಗೆ ಸೇರಿದ ಸ್ಥಳ, ವೆಕ್ಟ್ರಾದ ಮುಂಬೈ ಮತ್ತು ನೊಯ್ಡಾ ಕಚೇರಿ ಹಾಗೂ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.ಮಾಜಿ ಸೇನಾ ಮುಖ್ಯಸ್ಥರಿಂದ ಲಂಚದ ಆಮಿಷದ ದೂರು ಸ್ವೀಕರಿಸಿದ ಬಳಿಕ ಏಪ್ರಿಲ್‌ನಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಸೆಪ್ಟೆಂಬರ್ 2010ರಲ್ಲಿ 1676 ಟಟ್ರಾ ಟ್ರಕ್ಕುಗಳ ಖರೀದಿಗೆ ಅನುಮತಿ ಪಡೆಯುವುದಕ್ಕೆ ತಮಗೆ 14 ಕೋಟಿ ಲಂಚದ ಆಮಿಷ ತೋರಲಾಯಿತು. ಈ ಸಂಗತಿಯನ್ನು ರಕ್ಷಣಾ ಸಚಿವ ಎ.ಕೆ. ಆಂಟನಿ ಗಮನಕ್ಕೆ ತಂದಿದ್ದಾಗಿ ವಿ.ಕೆ. ಸಿಂಗ್ ಹೇಳಿದ್ದರು. ಈ ಆರೋಪ ಅಲ್ಲಗೆಳೆದ ತೇಜಿಂದರ್‌ಸಿಂಗ್ ಮಾಜಿ ಸೇನಾ ಮುಖ್ಯಸ್ಥರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.ವಿ.ಕೆ.ಸಿಂಗ್ ದೂರಿನ ಮೇಲೆ ಪ್ರಾಥಮಿಕ ತನಿಖೆ ನಡೆಸಿದ ಸಿಬಿಐ, ವೆಕ್ಟ್ರಾ ಸಂಸ್ಥೆ ಜತೆ ತೇಜಿಂದರ್ ಹೊಂದಿರುವ ಸಂಬಂಧ ಕುರಿತು ಪರಿಶೀಲಿಸಿದೆ.ರಿಷಿ ಸೇರಿದಂತೆ ಸಶಸ್ತ್ರ ಪೂರೈಕೆದಾರರ ಜತೆ ಸಿಂಗ್ ಹೊಂದಿರುವ ಸಂಬಂಧ ಕುರಿತು ಅವರ ವಿಚಾರಣೆ ವೇಳೆ ಪ್ರಶ್ನಿಸಲಾಗಿದೆ. ಸೇನೆಗೆ ಟಟ್ರಾ ಟ್ರಕ್ಕುಗಳನ್ನು ಪೂರೈಸಿರುವ ಮತ್ತೊಂದು ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲೂ ರಿಷಿ ಆರೋಪಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry