ಟನ್ ಕಬ್ಬಿಗೆ ರೂ 2502 ನಿಗದಿ

7

ಟನ್ ಕಬ್ಬಿಗೆ ರೂ 2502 ನಿಗದಿ

Published:
Updated:

ಹಾವೇರಿ: ರೈತರ ವಿರೋಧದ ನಡುವೆಯೂ ಪ್ರತಿ ಟನ್ ಕಬ್ಬಿಗೆ ರೂ. 2,502 ನಿಗದಿ ಮಾಡಿರುವ ಸಂಗೂರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸಾಗಾಣೆ ವೆಚ್ಚವನ್ನು ತಾನೆ ಭರಿಸಲು ನಿರ್ಧರಿಸಿದೆ.ಪ್ರತಿ ಟನ್‌ಗೆ 3000 ರೂ. ನಿಗದಿ ಮಾಡಬೇಕು. ಸಾಗಾಣೆ ವೆಚ್ಚವನ್ನು ಕಾರ್ಖಾನೆಯೇ ವಹಿಸಿಕೊಳ್ಳಬೇಕೆಂದು ಜಿಲ್ಲೆಯ ಕಬ್ಬು ಬೆಳೆಗಾರರು ಪಟ್ಟು ಹಿಡಿದ, ಬೆಳೆಗಾರರ ಬೇಡಿಕೆ ಈಡೇರಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅದರಿಂದ ಕಾರ್ಖಾನೆಗೆ ಸಾಕಷ್ಟು ಹೊರೆಯಾಗಲಿದೆ. ಪ್ರತಿಟನ್ ಕಬ್ಬಿಗೆ 2,502 ರೂ. ಹಾಗೂ ಸಾಗಾಣೆ ವೆಚ್ಚವನ್ನು ಕಾರ್ಖಾನೆ ನೀಡಲಿದೆ ಎಂದು ಸಂಗೂರಿನ ಜಿ.ಎಂ. ಶುಗರ್ಸ್‌ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.ಭಾನುವಾರ ಕಾರ್ಖಾನೆಯಲ್ಲಿ ನಡೆದ ಆಡಳಿತ ಮಂಡಳಿ ಹಾಗೂ ರೈತ ಮುಖಂಡರ ಸಭೆಯಲ್ಲಿ ಆಡಳಿತ ಮಂಡಳಿ ಈ ನಿರ್ಧಾರ ಪ್ರಕಟಿಸಿತು. ಆದರೆ, ಕಾರ್ಖಾನೆ ನಿಗದಿಪಡಿಸಿದ ಈ ಬೆಲೆಗೆ ಕಬ್ಬು ಪೂರೈಸಲು ಸಾಧ್ಯವಿಲ್ಲ. ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತಾವು ಒಪ್ಪುವುದಿಲ್ಲ ಎಂದು ಹೇಳಿರುವ ರೈತ ಮುಖಂಡರು, ಪ್ರತಿ ಟನ್ ಕಬ್ಬಿಗೆ ಕನಿಷ್ಠ 3000 ರೂ. ನೀಡಿದರೆ ಮಾತ್ರ ಕಬ್ಬು ಪೂರೈಸುವುದಾಗಿ ಹೇಳಿದರು.ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ಕಬ್ಬಿನ ಇಳುವರಿ ಸಾಕಷ್ಟು ಕಡಿಮೆಯಾಗಿದೆ. ಇದರಿಂದ ಸಕ್ಕರೆ ದರ ಈಗಿರುವ ದರಕ್ಕಿಂತ ಬಹಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿ ಟನ್‌ಗೆ ಕಬ್ಬಿಗೆ 3 ಸಾವಿರ ರೂ. ನೀಡಿ ಕಾರ್ಖಾನೆಯೇ ಸಾಗಣೆ ವೆಚ್ಚ ಭರಿಸಬೇಕು ಎಂದು ಸಭೆಯಲ್ಲಿದ್ದ ರೈತರು ಒತ್ತಾಯಿಸಿದರು.ಸಭೆಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚಿನ ಸಮಯ ಬೆಲೆ ನಿಗದಿಗಾಗಿಯೇ ರೈತರು ಹಾಗೂ ಆಡಳಿತ ಮಂಡಳಿ ನಡುವೆ ವಾದ-ಪ್ರತಿವಾದ ನಡೆದರೂ ಬೆಲೆ ನಿಗದಿಗೆ ಒಮ್ಮತ ಮಾತ್ರ ಮೂಡಲಿಲ್ಲ. ಕೊನೆಗೆ ಕಾರ್ಖಾನೆ ಆಡಳಿತ ಮಂಡಳಿಯೇ ಪ್ರತಿ ಟನ್ ಕಬ್ಬಿಗೆ 2501 ರೂ. ನೀಡುವ ಹಾಗೂ ಸಾಗಣೆ ವೆಚ್ಚ ಭರಿಸುವುದಾಗಿ ಪ್ರಕಟ ಮಾಡಿದರು.ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ಒಪ್ಪದ ರೈತರು ಸಭೆಯಿಂದ ಹೊರ ಬಂದು ತಾವು ಈ ಬೆಲೆಗೆ ಯಾವುದೇ ಕಾರಣಕ್ಕೂ ಕಬ್ಬು ಪೂರೈಸಲು ಸಾಧ್ಯವಿಲ್ಲ. ಆಡಳಿತ ಮಂಡಳಿ ತನ್ನ ನಿಲುವು ಬದಲಿಸಿ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಶಿವಾನಂದ ಗುರುಮಠ, ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಜಶೇಖರ ಬೆಟಗೇರಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿ ಪ್ರಭುದೇವ, ನಿರ್ದೇಶಕ ಬಸವರಾಜ ಬಣಕಾರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry