ಟರ್ಪಾಲ್, ಸೋಗೆ ಮನೆಗೂ ವಿದ್ಯುತ್ ಸೌಲಭ್ಯ

7

ಟರ್ಪಾಲ್, ಸೋಗೆ ಮನೆಗೂ ವಿದ್ಯುತ್ ಸೌಲಭ್ಯ

Published:
Updated:

ಬಂಟ್ವಾಳ: ತಾಲ್ಲೂಕಿನ ಗ್ರಾಮೀಣ ಪ್ರದೇಶವಾಗಿರುವ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ನೂರು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಬೆಳಕು ನೀಡಲು ಇಲ್ಲಿನ ರೋಟರಿ ಕ್ಲಬ್ ಮುಂದಾಗಿದೆ.ಕಾವಳಪಡೂರು ಮತ್ತು ಕಾಡಬೆಟ್ಟು ಎರಡು ಗ್ರಾಮಗಳನ್ನು ಹೊಂದಿರುವ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ತೀರಾ ಬಡವರು. ಉಳಿದಂತೆ ಅಡಿಕೆ, ತೆಂಗು, ಬಾಳೆ, ಭತ್ತ, ಕರಿಮೆಣಸು, ರಬ್ಬರ್ ಮತ್ತಿತರ ಕೃಷಿ ಅವಲಂಬಿತರೂ ಇದ್ದಾರೆ. ಇಲ್ಲಿ ರೋಟರಿ ಕ್ಲಬ್ ನಡೆಸಿದ ಸಮೀಕ್ಷೆ ಪ್ರಕಾರ, ನೂರಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇನ್ನೂ ಕೆಲವೆಡೆ ವಾಸಕ್ಕೆ ಯೋಗ್ಯ ಮನೆಯಿಲ್ಲ, ದಿನವೊಂದಕ್ಕೆ ಒಂದೇ ಬಾರಿ ಅಡುಗೆ ಮಾಡಿ ಉಣ್ಣುವಂತಹ ಬಡತನ ಕಾಡುತ್ತಿರುವುದು ಬೆಳಕಿಗೆ ಬಂದಿದೆ.ಇದರಿಂದಾಗಿ ಈ ವರೆಗೆ ಆಳ್ವಿಕೆ ನಡೆಸಿದ ಇಲ್ಲಿನ ‘ಜನಸೇವಕ’ರೆಂದು ಕರೆಸಿಕೊಳ್ಳುವ ಜನಪ್ರತಿನಿಧಿಗಳು ಮಾಡಿದ್ದಾದರೂ ಏನು...? ಎಂಬ ಪ್ರಶ್ನೆ ಜನರಲ್ಲಿ ಇದೀಗ ಕಾಡತೊಡಗಿದೆ.ಈಗಾಗಲೇ ಇಲ್ಲಿನ ಗ್ರಾ.ಪಂ.ಸಹಿತ ಸ್ಥಳೀಯ ಜನಪ್ರತಿನಿಧಿಗಳನ್ನು ಕೂಡಿಸಿಕೊಂಡು ರೋಟರಿ ಕ್ಲಬ್ ಪದಾಧಿಕಾರಿಗಳು ಸಭೆ, ಸರ್ವೆ, ಮಾತುಕತೆ ನಡೆಸಿದ್ದಾರೆ. ಸರಿಯಾಗಿ ರಸ್ತೆ ಸಂಪರ್ಕ ಇಲ್ಲ, ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಆಶ್ರಯ ಮತ್ತಿತರ ಯೋಜನೆ ಬಗ್ಗೆ ಮಾಹಿತಿಯಿಲ್ಲ ಎಂಬ ಆರೋಪವೂ ಇವರಿಗೆ ಸ್ಥಳೀಯರಿಂದ ಎದುರಾಗಿದೆ. ಕೆಲವೆಡೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ಬಿಲ್ ಪಾವತಿ ಬಾಕಿ ನೆಪದಲ್ಲಿ ಕಡಿತಗೊಳಿಸಲಾಗಿದೆ.

ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ 50 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇನ್ನೂ 75 ವಿದ್ಯುತ್ ಕಂಬಗಳನ್ನು ಉಚಿತವಾಗಿ ನೀಡುವ ಭರವಸೆ ಮೆಸ್ಕಾಂನಿಂದ ದೊರೆತಿದೆ.ಕೂಲಿ ಮಾಡಿ ಬದುಕು ಸಾಗಿಸುವ ಇಲ್ಲಿನ ಜನರ ಕಷ್ಟಕ್ಕೆ ನೆರವಾಗಲು ದಾನಿಗಳು ಸಹಿತ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಮಾತ್ರವಲ್ಲದೆ ಇದೇ ಮಾದರಿಯಲ್ಲಿ ಎಲ್ಲೆಡೆ ಸಂಘ ಸಂಸ್ಥೆಗಳು ಜನಪರ ಕಾಳಜಿ ವ್ಯಕ್ತಪಡಿಸಿದಾಗ ಮಾತ್ರ ಒಟ್ಟು ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ರೋಟರಿ ಕ್ಲಬ್ ಪದಾಧಿಕಾರಿಗಳದ್ದು.ಈ ಗ್ರಾಮ ಪಂಚಾಯಿತಿಯಲ್ಲಿ ‘ಸಂಪೂರ್ಣ ವಿದ್ಯುತ್ ಗ್ರಾಮ’ ರೂಪಿಸುವ ಯೋಜನೆಯನ್ನು ರೋಟರಿ ಕ್ಲಬ್ ಹಾಕಿಕೊಂಡಿದೆ. ಕೆಲವೆಡೆ ಟರ್ಪಾಲ್, ಸೋಗೆ ಮನೆಗೂ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಶೀಘ್ರವೇ ಇವರಿಗೆ ಮಾಡು ಸಹಿತ ಗೋಡೆ ನಿರ್ಮಿಸುವುದಾಗಿ ರೋಟರಿ ಕ್ಲಬ್ ಅಧ್ಯಕ್ಷ, ವಕೀಲ ಅಶ್ವಿನಿ ಕುಮಾರ್ ರೈ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಸ್ತಿ ಮಾಧವ ಶೆಣೈ, ವಸಂತ ಪ್ರಭು, ಪ್ರಕಾಶ ಕಾರಂತ್, ಸ್ಟ್ಯಾನಿ ಪಿಂಟೊ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry