ಟಾಪ್ ಪ್ರಯಾಣಕ್ಕೆ ಯಾರು ಹೊಣೆ?

7
ಗ್ರಾಮೀಣ ಮಕ್ಕಳಿಗೆ ದಕ್ಕದ ಬಸ್ ಪಾಸ್ ಸೌಲಭ್ಯ

ಟಾಪ್ ಪ್ರಯಾಣಕ್ಕೆ ಯಾರು ಹೊಣೆ?

Published:
Updated:

ಲಿಂಗಸುಗೂರ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜು ಮಕ್ಕಳಿಗೆ ಸರ್ಕಾರ ಬಸ್ ಪಾಸ್ ಸೌಲಭ್ಯ ಒದಗಿಸಿಕೊಟ್ಟಿದೆ. ಸರ್ಕಾರದ ಯೋಜನೆ ಸದ್ಭಳಕೆ ಮಾಡಿಕೊಳ್ಳುವಂತೆ ಪ್ರತಿಯೋರ್ವ ಧುರಿಣರು ಮನವಿ ಮಾಡುತ್ತಾರೆ. ಆದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಬಸ್ ಪಾಸ್ ಸೌಲಭ್ಯ ಸದ್ಭಳಕೆ ಮಾಡಿಕೊಳ್ಳುವಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಳುವವರೆ ಇಲ್ಲದಾಗಿದೆ. ಬಸ್ ಸೌಲಭ್ಯ ಕೊರತೆಯಿಂದ ಖಾಸಗಿ ವಾಹನಗಳಲ್ಲಿ ಟಾಪ್ ಪ್ರಯಾಣ ಮಾಡುವ ಮಕ್ಕಳ ರಕ್ಷಣೆಗೆ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ತಾಲ್ಲೂಕು 192 ಗ್ರಾಮಗಳು ಹಾಗೂ ನೂರಕ್ಕೂ ಹೆಚ್ಚು ತಾಂಡಾಗಳನ್ನು ಅಧಿಕೃತವಾಗಿ ಹೊಂದಿದೆ. ದೊಡ್ಡಿ ಪ್ರದೇಶಗಳ ಸಂಖ್ಯೆಯು ಕೂಡ ನೂರರ ಗಡಿ ದಾಟಿದೆ ಎಂಬುದನ್ನು ಕಂದಾಯ ಮೂಲಗಳು ದೃಢಪಡಿಸಿವೆ.ಇಷ್ಟೊಂದು ಗ್ರಾಮಗಳಿರುವ ತಾಲ್ಲೂಕಿನಾದ್ಯಂತ ಗ್ರಾಮೀಣ ಸಾರಿಗೆ ಗಗನ ಕುಸುಮವಾಗಿದೆ. ಈಶಾನ್ಯ ಸಾರಿಗೆ ಸಂಸ್ಥೆ ಸಾರ್ವಜನಿಕ ಸೇವಾ ಮನೋಭಾವ ದೂರಿಕರಿಸಿ, ಸಂಸ್ಥೆ ಲಾಭದತ್ತ ಕೊಂಡೊಯ್ಯಬೇಕು ಎಂಬ ತವಕದಲ್ಲಿ ಪಟ್ಟಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಮಾಡುತ್ತಿರುವುದು ಗ್ರಾಮೀಣ ಮಕ್ಕಳ ಪಾಲಿಗೆ ಶಾಪವಾಗಿದೆ ಎಂದು ಕರವೇ ಆರೋಪಿಸಿದೆ.ತಾಲ್ಲೂಕಿನ ನಡುಗಡ್ಡೆ ಪ್ರದೇಶಗಳಾದ ಕಡದರಗಡ್ಡಿ, ಯಳಗುಂದಿ, ಹಂಚಿನಾಳ, ಜಲದುರ್ಗ ಹಾಗೂ ಅಂಕನಾಳ, ಉಪನಾಳ, ಗದ್ದಿ, ಟಣಮಕಲ್ಲ, ರಾಯದುರ್ಗ, ಪೈದೊಡ್ಡಿ, ಯರಜಂತಿ, ತೊಡಕಿ, ಕುಮಾರಖೇಡ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ನಿಗದಿತ ಅವಧಿಗೆ ಬಸ್ ಸಂಚಾರ ಸೌಲಭ್ಯ ಕಲ್ಪಿಸದೆ ಹೋಗಿರುವುದು ಖಾಸಗಿ ವಾಹನಗಳಲ್ಲಿ ಟಾಪ್ ಸರ್ವಿಸ್ ಪ್ರಯಾಣ ಅನಿವಾರ್ಯವಾಗಿದೆ. ಬೆಂಗಳೂರು, ಮಂಗಳೂರ, ಹೈದರಬಾದ, ಹಟ್ಟಿ, ಮಸ್ಕಿ, ಮುದಗಲ್ಲನಂತಹ ಪ್ರಮುಖ ಪಟ್ಟಣಗಳಿಗೆ ಮಾತ್ರ ಸಾಕಷ್ಟು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಆರೋಪಗಳಿವೆ.ಸರ್ಕಾರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಎಷ್ಟೆಲ್ಲಾ ಯೋಜನೆ ಅನುಷ್ಠಾನಗೊಂಡಿದ್ದರು ಕೂಡ ಗ್ರಾಮೀಣ ಜನತೆ ಮನೆ ಬಾಗಿಲಿಗೆ ಸೌಲಭ್ಯಗಳು ತಲಪುತ್ತಿಲ್ಲ ಎಂಬುದಕ್ಕೆ ಸಾರಿಗೆ ಅವ್ಯವಸ್ಥೆಯೆ ನಿದರ್ಶನ. ಗ್ರಾಮೀಣ ಪ್ರದೇಶಗಳಿಗೆ ತೆರಳಿದರೆ ಸಾಕು ಪ್ರತಿಯೊಂದು ಖಾಸಗಿ ವಾಹನಗಳು ಕುರಿ ತುಂಬಿದ ಹಾಗೆ ಮಕ್ಕಳನ್ನು ತುಂಬಿಕೊಂಡು ಪ್ರಯಾಣಿಸುವುದು ಕಾಣಸಿಗುತ್ತದೆ. ಈ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ ಕಾಲ್ನಡಿಗೆಯೆ ಗತಿಯಾಗುತ್ತದೆ. ಹೀಗಾಗಿ ಸರ್ಕಾರ ಕಲ್ಪಿಸಿದ ಬಸ್ ಪಾಸ್ ಸೌಲಭ್ಯ ಗ್ರಾ ಮೀಣ ಮಕ್ಕಳಿಗೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರಿಗೆ ಸಂಸ್ಥೆಯಲ್ಲಿನ ಬಸ್‌ಗಳಿಗೆ ಗ್ರಾಮೀಣ ಸಾರಿಗೆ ಎಂದು ಬರೆಯಿಸಿ ಪ್ರತಿಯೊಂದು ಗ್ರಾಮಕ್ಕೂ ಜನತೆ ಅಗತ್ಯತೆಗೆ ತಕ್ಕಷ್ಟು ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲದೆ ಹೋದರೆ ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗದ ಎಂದು ಆಡಳಿತ ವ್ಯವಸ್ಥೆ ಬಗ್ಗೆ ಹನುಮಪ್ಪ, ಫಕೀರಪ್ಪ, ದೊಡ್ಡಹನುಮಂತ, ಶೀಲಪ್ಪ, ದ್ಯಾಮಣ್ಣ, ಶಿವಪ್ಪ, ಮಾಬುಸಾಬ ಮತ್ತಿತರರು ಸಾರಿಗೆ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry