ಭಾನುವಾರ, ಜೂನ್ 13, 2021
24 °C

ಟಿಎಂಸಿ ಪಟ್ಟು: ಕೇಂದ್ರಕ್ಕೆ ಇಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬುಧವಾರ ಮಂಡನೆಯಾದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಹೆಚ್ಚಿಸಿರುವ ವಿಷಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಯುಪಿಎ ನೇತೃತ್ವ ವಹಿಸಿರುವ ಕಾಂಗ್ರೆಸ್ ಸರ್ಕಾರವು `ದಿನೇಶ್ ತ್ರಿವೇದಿ ಅವರು ಇನ್ನೂ ರೈಲ್ವೆ ಸಚಿವರಾಗಿ ಮುಂದುವರಿದಿದ್ದಾರೆ~ ಎಂದು ಹೇಳಿದೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್, ತ್ರಿವೇದಿ ಅವರು ಯಾವುದೇ ಕ್ಷಣ ರಾಜೀನಾಮೆ ನೀಡಬೇಕಾಗಬಹುದು ಎನ್ನುವ ಜತೆಗೆ, ಹೆಚ್ಚಿಸಿರುವ ದರವನ್ನು ವಾಪಸು ಪಡೆಯಬೇಕೆಂಬ ತನ್ನ ನಿಲುವಿನಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

`ತ್ರಿವೇದಿ ರಾಜೀನಾಮೆ ಸಲ್ಲಿಸಿಲ್ಲ. ಆದರೆ ತ್ರಿವೇದಿ ಅವರು ಹೆಚ್ಚಿಸಿರುವ ಪ್ರಯಾಣ ದರವನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸಿ ಮಮತಾ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ~ ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ಸರ್ಕಾರ ಮಗುಮ್ಮಾದ ಹೇಳಿಕೆ ನೀಡಿದೆ. ಮಮತಾ ಅವರು ಬರೆದಿರುವ ಪತ್ರದ ವಿವರಗಳನ್ನು ಸರ್ಕಾರ ಬಹಿರಂಗಗೊಳಿಸಿಲ್ಲವಾದರೂ, ಅದನ್ನು ತೀವ್ರವಾಗಿ ಪರಿಶೀಲಿಸುತ್ತಿರುವುದಾಗಿಯೂ ತಿಳಿಸಿದೆ. ಈ ಬಗ್ಗೆ ಏನಾದರೂ ಕ್ರಮ ಕೈಗೊಂಡರೆ ತಕ್ಷಣವೇ ಸದನಕ್ಕೆ ತಿಳಿಸುವುದಾಗಿಯೂ ಸರ್ಕಾರ ಮಾತು ನೀಡಿದೆ. ಸದನದಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, `ತ್ರಿವೇದಿ ಅವರು ಸಂಸತ್ತಿನಲ್ಲಿ ಮಂಡಿಸಿದ ರೈಲ್ವೆ  ಬಜೆಟ್‌ನ ಪ್ರಸ್ತಾವಗಳನ್ನು ಹಣಕಾಸು ಸಚಿವನಾಗಿ ನಾನು ಅನುಮೋದಿಸಿದ್ದೇನೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಬೇಕಿಲ್ಲ. ಅದೀಗ ಸದನಕ್ಕೆ ಸೇರಿದ ಆಸ್ತಿ~ ಎಂದು   ಬಲವಾಗಿ ಸಮರ್ಥಿಸಿಕೊಂಡರು.

ಆದರೆ ಸಚಿವ ಪ್ರಣವ್ ಮುಖರ್ಜಿ ಅವರ ಜತೆ ಸದನದಲ್ಲಿ ವಿವಾದ ಕುರಿತು ಮಾತುಕತೆ ನಡೆಸಿದ ಟಿಎಂಸಿ ನಾಯಕ ಸುದೀಪ್ ಬಂದೋಪಾಧ್ಯಾಯ ಸರ್ಕಾರದ ಸಮರ್ಥನೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಮುಖರ್ಜಿ ಅವರೊಡನೆ ಚರ್ಚೆ ಮುಗಿದ ಮೇಲೆ ಪಕ್ಷದ ಸಂಸದರ ಸಭೆ ನಡೆಯಿತು. ಅದಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಂದೋಪಾಧ್ಯಾಯ, ದರ ಹೆಚ್ಚಳವನ್ನು ಹೇಗೆ ಹಿಂಪಡೆಯಬೇಕೆಂಬುದನ್ನು ಸರ್ಕಾರವೇ ನಿರ್ಧರಿಸಬೇಕು; ರೈಲ್ವೆ ಬಜೆಟ್ ಬಗೆಗಿನ ಚರ್ಚೆ ನಂತರ ಅಥವಾ ಅದಕ್ಕೂ ಮುನ್ನ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದರು.

ಹಾಗೆಯೇ ತ್ರಿವೇದಿ ಸ್ಥಾನಕ್ಕೆ ಮುಕುಲ್‌ರಾಯ್ ಅವರನ್ನು ನೇಮಿಸಬೇಕೆಂಬುದು ತಮ್ಮ ಪಕ್ಷದ ಸಂಸದರ ಅಪೇಕ್ಷೆಯಾಗಿದೆ ಎಂದು ಒತ್ತಿ ಹೇಳಿದರು.

`ಮಮತಾ ಹೇಳಿದರೆ ರಾಜೀನಾಮೆ~

`ನಾನು ಮಂಡಿಸಿದ ರೈಲ್ವೆ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಸಿಗುವಂತೆ ನೋಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಆದರೆ ನನ್ನ ನಾಯಕಿ ಮಮತಾ ಬ್ಯಾನರ್ಜಿ ಅಥವಾ ಪ್ರಧಾನಿ ಮನಮೋಹನ್ ಸಿಂಗ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ~ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ. ತಮ್ಮನ್ನು ಬದಲಾಯಿಸುವಂತೆ ಮಮತಾ  ಬುಧವಾರ ರಾತ್ರಿ ಪ್ರಧಾನಿಗೆ ಪತ್ರ ಬರೆದ ನಂತರ ತಾನು ರಾಜೀನಾಮೆ ನೀಡಿದ್ದೇನೆಂದು ಕೇಳಿಬರುತ್ತಿರುವ ವರದಿಗಳನ್ನು ತಳ್ಳಿಹಾಕಿರುವ ಅವರು, `ಯಾರೂ ನನ್ನ ರಾಜೀನಾಮೆ ಕೇಳಿಲ್ಲ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.