ಶನಿವಾರ, ಫೆಬ್ರವರಿ 27, 2021
29 °C
ಉಪಚುನಾವಣೆ: ಗರಿಗೆದರಿದ ಚಟುವಟಿಕೆ

ಟಿಕೆಟ್‌ ಗಿಟ್ಟಿಸಲು ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಕೆಟ್‌ ಗಿಟ್ಟಿಸಲು ಪೈಪೋಟಿ

ಬೆಂಗಳೂರು/ರಾಯಚೂರು/ ಬೀದರ್: ವಿಧಾನಸಭೆ ಉಪಚುನಾವಣೆ ನಡೆಯಲಿರುವ ಹೆಬ್ಬಾಳ, ಬೀದರ್‌ ಮತ್ತು ದೇವದುರ್ಗ ಕ್ಷೇತ್ರಗಳ ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಪೈಪೋಟಿ ತೀವ್ರಗೊಂಡಿದೆ.ಉಪ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಮೂರು ಪಕ್ಷಗಳಲ್ಲೂ ಚಟುವಟಿಕೆ ಚುರುಕುಗೊಂಡಿದೆ. ಕಾಂಗ್ರೆಸ್‌ ಪಕ್ಷವು ಅಭ್ಯರ್ಥಿಗಳ ಆಯ್ಕೆಗಾಗಿ ಸಮಿತಿಯನ್ನು ರಚಿಸಿದೆ. ಈ ಸಮಿತಿ ನೀಡುವ ವರದಿಯ ಆಧಾರದಲ್ಲಿ ಸೂಕ್ತ ವ್ಯಕ್ತಿಗೆ ಟಿಕೆಟ್‌ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಲುವಾಗಿ ಬಿಜೆಪಿ ಮುಖಂಡರು ಸೋಮವಾರ ಸಭೆ ಸೇರಲಿದ್ದಾರೆ. ಇದೇ 20 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.ಹೆಬ್ಬಾಳ: ಬಿಜೆಪಿಯ ಜಗದೀಶಕುಮಾರ್ ಅವರ ನಿಧನದಿಂದ ತೆರವಾದ ಹೆಬ್ಬಾಳ ಕ್ಷೇತ್ರಕ್ಕೆ ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ.ಆಡಳಿತಾರೂಢ ಕಾಂಗ್ರೆಸ್‌ನಲ್ಲಂತೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಿಧಾನ ಪರಿಷತ್‌ ಸದಸ್ಯರಾದ ಬೈರತಿ ಸುರೇಶ ಹಾಗೂ ಎಚ್‌.ಎಂ.ರೇವಣ್ಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದ  ರೆಹಮಾನ್‌ ಷರೀಫ್‌ (ಜಾಫರ್‌ ಷರೀಫ್‌ ಅವರ ಮೊಮ್ಮಗ), ಪರಿಷತ್‌ ಸದಸ್ಯ ಆರ್‌.ವಿ.ವೆಂಕಟೇಶ, ಮುಖಂಡರಾದ ನಜೀರ್‌ ಅಹಮದ್‌, ರವಿಶಂಕರಶೆಟ್ಟಿ, ರಿಜ್ವಾನ್‌ ಅರ್ಷಾದ್‌, ಮೆಹಬೂಬ್‌ ಪಾಷಾ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಚಂದ್ರಪ್ಪ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಬಿಜೆಪಿಯ ಮುಖಂಡರು ಜಗದೀಶ ಕುಮಾರ್‌ ಅವರ ಪತ್ನಿ ಆರ್‌.ಲಲಿತಾ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಜಯನಗರ ಶಾಸಕ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುಬ್ಬ ನರಸಿಂಹ ಅವರು ಇತ್ತೀಚೆಗೆ ಲಲಿತಾ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಚುನಾವಣೆ ಎದರಿಸಲು ತಮ್ಮ ಬಳಿ ಹಣ ಇಲ್ಲ. ಪಕ್ಷವೇ ‘ಎಲ್ಲ’ವನ್ನೂ ನೋಡಿಕೊಳ್ಳುವುದಾದರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಲಲಿತಾ ಹೇಳಿದರು ಎನ್ನಲಾಗಿದೆ. ಈ ನಡುವೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಮಗೆ ಇಲ್ಲವೇ ತಮ್ಮ ಸೊಸೆಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆಯೂ ಪಕ್ಷದ ವರಿಷ್ಠರು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.ಜೆಡಿಎಸ್‌ ಟಿಕೆಟ್‌ಗಾಗಿ  ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್‌ ಗೌಡ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಹನುಮಂತೇಗೌಡ ಅವರು ಪ್ರಯತ್ನ ನಡೆಸಿದ್ದಾರೆ.ದೇವದುರ್ಗ–ಅನುಕಂಪದ ಲಾಭ ಪಡೆಯಲು ಯತ್ನ: ಕಾಂಗ್ರೆಸ್‌ ಶಾಸಕರಾಗಿದ್ದ ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಅನುಕಂಪದ  ಲಾಭ ಪಡೆಯಲು ಅವರ ಕುಟುಂಬದವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ. ವೆಂಕಟೇಶ ನಾಯಕ ಪತ್ನಿ ಸಾವಿತ್ರಿದೇವಿ ಇಲ್ಲದಿದ್ದರೆ ಕಿರಿಯ ಪುತ್ರ ರಾಜಶೇಖರ ನಾಯಕ ಅಭ್ಯರ್ಥಿ ಆಗುವ ನಿರೀಕ್ಷೆ ಇದೆ.ಬಿಜೆಪಿಯು ಮಾಜಿ ಸಚಿವ ಕೆ.ಶಿವನಗೌಡ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಕಾಂಗ್ರೆಸ್‌ನಿಂದ ಸಾವಿತ್ರಿದೇವಿ ಕಣಕ್ಕಿಳಿದರೆ, ಶಿವನಗೌಡ ಅವರ ತಾಯಿ ಮಹಾದೇವಮ್ಮ  ಅವರನ್ನು ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.ಜೆಡಿಎಸ್‌ ಕಳೆದ ಬಾರಿ ಸ್ಪರ್ಧೆ ಮಾಡಿರಲಿಲ್ಲ. ಈ ಸಲ ಮೂವರು ಆಕಾಂಕ್ಷಿಗಳಿದ್ದಾರೆ. ಕರಿಯಮ್ಮ ಗೋಪಾಲಕೃಷ್ಣ, ವಿ.ಎಂ.ಮೇಟಿ, ಶಾಂತಗೌಡ ಚನ್ನಪಟ್ಟಣ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೆಗೌಡ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ  ಕರಿಯಮ್ಮ ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಒಲುವು ತೋರಿದ್ದರು ಎನ್ನಲಾಗಿದೆ.ಬೀದರ್‌–ರಹೀಂ ಖಾನ್‌ಗೆ ಕಾಂಗ್ರೆಸ್ ಟಿಕೆಟ್!: ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಬೀದರ್ ವಿಧಾನಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಕಾರ್ಯತಂತ್ರ ಹಣೆದಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಗುರುಪಾದಪ್ಪ ಅವರ ಎದುರು ಪರಾಭವಗೊಂಡಿರುವ ಮಾಜಿ ಶಾಸಕ ರಹೀಂ ಖಾನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ. ಗುರುಪಾದಪ್ಪ 60,125, ರಹೀಂ ಖಾನ್ 57,890 ಮತ ಪಡೆದಿದ್ದರು. ಗುರುಪಾದಪ್ಪ 2,335 ಮತಗಳಿಂದ ಜಯ ಗಳಿಸಿದ್ದರು.‘ಈ ಬಾರಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಹೆಚ್ಚು ಇದೆ. ಹಾಗಾಗಿ ರಹೀಂ ಖಾನ್‌ ಅವರಿಗೇ ಟಿಕೆಟ್‌ ಕೊಡಬೇಕು’ ಎಂದು ಪಕ್ಷದ ಮುಖಂಡ ಧರ್ಮಸಿಂಗ್‌ ಅವರು ವರಿಷ್ಠರ ಮೇಲೆ ಒತ್ತಡ ಹಾಕಿರುವುದಾಗಿ ತಿಳಿದು ಬಂದಿದೆ.ಬಿಜೆಪಿ ಇದುವರೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಕೆಜೆಪಿಯಿಂದ ಗೆಲುವು ಸಾಧಿಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ನಂತರ ಬಿಜೆಪಿ ಸೇರಿದ್ದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್‌ ನೀಡದ ಕಾರಣ ಬಿಜೆಪಿ ಮುಖಂಡರ ಜತೆಗೆ ಅವರ ಸಂಬಂಧ ಹಳಸಿತ್ತು. ಹೀಗಾಗಿ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಗುರುಪಾದಪ್ಪ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಆರ್‌. ಅಶೋಕ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ ಪಕ್ಷದ ಜಿಲ್ಲೆಯ ಮುಖಂಡರ ಜತೆ ಅವರ ಸಂಬಂಧ ಅಷ್ಟಕಷ್ಟೇ ಎಂದು ಮೂಲಗಳು ತಿಳಿಸಿವೆ.ಜೆಡಿಎಸ್ ಕೂಡಾ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಜೆಡಿಎಸ್‌ನ ಪ್ರಭಾವಿ ನಾಯಕರಾಗಿರುವ ಬಂಡೆಪ್ಪ ಕಾಶೆಂಪುರ ಅವರು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸಿಲ್ಲ.ಪಕ್ಷದ ಜಿಲ್ಲಾ ಘಟಕದಲ್ಲಿ ಪ್ರಭಾವಿಗಳ ಕೊರತೆ ಇರುವುದರಿಂದ ಪಕ್ಷದಲ್ಲಿರುವವರನ್ನು ಸೆಳೆದು ಕಣಕ್ಕಿಳಿಸುವ ಚಿಂತನೆ ನಡೆಸಿದೆ.ಖರ್ಗೆ - ಎಚ್.ಎಂ. ರೇವಣ್ಣ ಭೇಟಿ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.‘ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್‌ ಕೊಡಿಸಬೇಕು’ ಎಂದು ರೇವಣ್ಣ ಅವರು ಖರ್ಗೆ ಅವರಲ್ಲಿ ಮನವಿ ಮಾಡಿದರು.‘ಭೈರತಿ ಬಸವರಾಜು ಅವರು ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅಹಮದ್‌ ಸರಡಗಿ ಅವರ ಸೋಲಿಗೆ ಕಾರಣರಾಗಿದ್ದರು. ಅಂತಹವರಿಗೆ ಟಿಕೆಟ್‌ ನೀಡುವು ದನ್ನು ಬೆಂಬಲಿಸಬಾರದು’ ಎಂದು ರೇವಣ್ಣ  ಖರ್ಗೆ ಅವರನ್ನು ಒತ್ತಾ ಯಿಸಿದರು ಎಂದು ಗೊತ್ತಾಗಿದೆ.‘ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ  ನಾನೂ ಟಿಕೆಟ್‌ ಆಕಾಂಕ್ಷಿ. ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ. ಅವರು ನನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ’ ಎಂದು ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.