ಮಂಗಳವಾರ, ಜೂನ್ 22, 2021
28 °C

ಟಿಕೆಟ್‌ ಹಂಚಿಕೆ: ಕಾಂಗ್ರೆಸ್‌ನಲ್ಲಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಟಿಕೆಟ್‌ ನಿರಾಕರಿಸಿರುವುದು ಸೇರಿ­ದಂತೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯದ ಹಲವು ಕ್ಷೇತ್ರ­ಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅಸಮಾಧಾನ ಕೇಳಿ­ಬಂದಿದೆ. ಕೆಲವೆಡೆ ತೀವ್ರ ಪ್ರತಿರೋಧವೂ ವ್ಯಕ್ತವಾಗತೊಡಗಿದೆ.ಷರೀಫ್‌ ಅವರಿಗೆ ಟಿಕೆಟ್‌ ನೀಡುವಂತೆ ಮುಸ್ಲಿಂ ಸಮುದಾಯದ ಹಲವು ಶಾಸ­ಕರು, ವಿಧಾನ ಪರಿಷತ್‌ ಸದಸ್ಯರು ರಾಜ್ಯ ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ತಂದಿ­ದ್ದರು. ಆದರೆ, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ.ರೆಹಮಾನ್‌ ಖಾನ್‌ ನೇತೃತ್ವದ ಷರೀಫ್‌ ವಿರೋಧಿ ಬಣ ಮಾತ್ರ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರನ್ನು ಬೆಂಬಲಿಸಿತ್ತು. ಕೊನೆಗೂ ರಿಜ್ವಾನ್‌ ಅವರಿಗೆ ಟಿಕೆಟ್‌ ದೊರೆತಿದೆ.ಷರೀಫ್‌ ಅವರಂಥ ಹಿರಿಯ ನಾಯಕನಿಗೆ ಟಿಕೆಟ್‌ ನಿರಾಕರಿಸಿರುವ ಕಾರಣ ಮುಸ್ಲಿಂ ಮತದಾರರು ಕಾಂಗ್ರೆಸ್‌ ಮೇಲೆ ಮುನಿಸಿಕೊಳ್ಳಬಹುದು ಎಂದು ಸಮು­ದಾಯದ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಈ ವಿಷಯವನ್ನು ಕೆಪಿ­ಸಿಸಿ ವರಿಷ್ಠರು ಮತ್ತು ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿ­ದ್ದಾರೆ ಎನ್ನಲಾಗಿದೆ.ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಟಿಕೆಟ್‌ ಹಂಚಿಕೆಯ ಬಗ್ಗೆಯೂ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದ ವಿರೋಧ ವ್ಯಕ್ತ­ವಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಮತ್ತೆ ಕಣಕ್ಕಿಳಿಸುವ ನಿರ್ಧಾರದಿಂದ ಪಕ್ಷದ ಕೆಲವು ಶಾಸಕರೇ ಬೇಸರ ಹೊರ­ಹಾಕಿ­ದ್ದಾರೆ ಎನ್ನಲಾಗಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯ­ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಣಕ್ಕಿಳಿಯುತ್ತಿದ್ದಾರೆ. ಅಲ್ಲಿ ಎಐಸಿಸಿ ಸದಸ್ಯ ಮಂಜು­­ನಾಥ ಭಂಡಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಪ್ರಕಟಿಸಿದೆ. ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರನ್ನು ಕಣಕ್ಕಿಳಿಸಬೇಕೆಂಬ ಇಂಗಿತ ಸ್ಥಳೀಯರಿಂದ ವ್ಯಕ್ತ­ವಾಗಿತ್ತು. ಆದರೂ, ಭಂಡಾರಿ ಅವರಿಗೆ ಟಿಕೆಟ್‌ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.