ಶುಕ್ರವಾರ, ನವೆಂಬರ್ 15, 2019
26 °C

ಟಿಕೆಟ್ ಎಸ್ಸೆಸ್‌ಗೋ, ಅಲ್ಪಸಂಖ್ಯಾತರಿಗೋ?

Published:
Updated:

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ್ನು ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಬೇಕು. ಇಲ್ಲ... ಅಲ್ಪಸಂಖ್ಯಾತ ಅಭ್ಯರ್ಥಿಗೇ ಕೊಡಬೇಕು. ಬೇಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್‌ಗೆ ನೀಡಬೇಕು ಎಂಬ ಒತ್ತಾಯಗಳ ಹಗ್ಗಜಗ್ಗಾಟ ಭಾನುವಾರವೂ ಮುಂದುವರಿದಿದೆ.ಆಯಾ ಬಣಗಳ ಬೆಂಬಲಿಗರು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬೇಡಿಕೆ ಮಂಡಿಸಿದರು.ಎಸ್ಸೆಸ್‌ಗೆ ಟಿಕೆಟ್ ಕೊಡಿಮಾಜಿ ನಗರಸಭಾ ಅಧ್ಯಕ್ಷ ಭೈರಪ್ಪ ಮತ್ತು ಹಾಲಿ, ಮಾಜಿ ಪಾಲಿಕೆ ಸದಸ್ಯರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ದಾವಣಗೆರೆ ದಕ್ಷಿಣಕ್ಕೆ ಶಾಮನೂರು ಶಿವಶಂಕರಪ್ಪ ಅವರಿಗೆ, ಉತ್ತರಕ್ಕೆ ಅವರ ಪುತ್ರ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಬೇಕು. ಇದರಿಂದ ನಗರ ಸಮಗ್ರ ಅಭಿವೃದ್ಧಿ ಆಗುತ್ತದೆ. ಅವರ ಅಧಿಕಾರಾವಧಿಯಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಕೆ, ರಸ್ತೆ, ಕಲ್ಯಾಣ ಮಂಟಪಗಳ ನಿರ್ಮಾಣ ಇತ್ಯಾದಿ ನಡೆದಿದೆ. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವುದರಿಂದ ಆ ಸ್ಥಾನ ಅವರ ಗೆಲುವಿಗೆ ಪೂರಕವಾಗಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸುರೇಂದ್ರ ಮೊಲಿ, ಮುಖಂಡರಾದ ವೀರಭದ್ರಯ್ಯ, ಹುಚ್ಚವ್ವನಹಳ್ಳಿ ಅಜ್ಜಯ್ಯ, ಪಿ. ನಾಗಭೂಷಣ ತೌಡೂರು, ಗಣೇಶ್, ನಾಸಿರ್ ಇದ್ದರು.ಅಲ್ಪಸಂಖ್ಯಾತರಿಗೆ ಕೊಡಿಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ಅಲ್ಪಸಂಖ್ಯಾತ ಯುವಕರ ಸಂಘದ ಅಧ್ಯಕ್ಷ ಸೈಯದ್ ಖಾಲಿದ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡಬೇಕು. ಎಸ್ಸೆಸ್ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಆದ್ದರಿಂದ ದಕ್ಷಿಣ ಕ್ಷೇತ್ರದಲ್ಲಿ ಅವರೇ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೂಚಿಸಿ ಗೆಲ್ಲಿಸಬೇಕು ಎಂದು ಒತ್ತಾಯಿಸಿದರು.ಕೆಲವು ಪಾಲಿಕೆ ಸದಸ್ಯರು ಈ ಕ್ಷೇತ್ರದಿಂದ ಎಸ್ಸೆಸ್‌ಗೆ ಟಿಕೆಟ್ ಕೊಡದಿದ್ದರೆ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕರ್ತವ್ಯ ನಿರ್ವಹಿಸಬೇಕು. ಇವರೆಲ್ಲರೂ ಎಸ್ಸೆಸ್ ಅಭಿಮಾನಿಗಳಾಗಿದ್ದರೂ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಬಂದವರು ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.ಎಸ್ಸೆಸ್ ಅವರು ಈ ಹಿಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸುವ ಭರವಸೆ ನೀಡಿದ್ದರು. ಆ ಮಾತು ಉಳಿಸಿಕೊಳ್ಳಲಿ. ಇಷ್ಟಕ್ಕೂ ಎಸ್ಸೆಸ್ ಅವರು ಉತ್ತರ ಕ್ಷೇತ್ರದಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ? ಅವರಿಗೆ ಮತದಾರರ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದರು.ದಕ್ಷಿಣ ವಲಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಕಬೀರ್, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷೆ ಮುಬೀನಾ ಬಾನು, ನವೀದ್ ಅಹಮದ್, ಸೈಯದ್ ಇರ್ಷಾದ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.ಅಬ್ದುಲ್ ಜಬ್ಬಾರ್‌ಗೆ ಕೊಡಿ

ಮೂರನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಲ್ಜಾರೆ ಆದಂ ಶಿಕ್ಷಣ  ಸಂಸ್ಥೆಯ ಅಧ್ಯಕ್ಷ ಟಿ. ಮಹಮದ್ ಸೈಫುಲ್ಲಾ, ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರು ದೊಡ್ಡ ಮನಸ್ಸು ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಲು ಶಿಫಾರಸು ಮಾಡಬೇಕು. ಈಗಾಗಲೇ ಈ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಗಳಾಗಿರುವವರು (ಸೈಯದ್ ಸೈಫುಲ್ಲಾ) ಬೇರೆ ಪಕ್ಷದಿಂದ ಬಂದವರು. ಅವರ ಬದಲಾಗಿ ಪಕ್ಷದ ನಿರಂತರ ಗೆಲುವಿಗೆ ಆರಂಭದಿಂದಲೂ ಅಧ್ಯಕ್ಷರಾಗಿ ಶ್ರಮಿಸುತ್ತಿರುವ ಅಬ್ದುಲ್ ಜಬ್ಬಾರ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ರಹಮತ್‌ವುಲ್ಲಾ, ಏಜಾಜ್ ಅಹಮದ್, ಪಿ. ಅಬ್ದುಲ್ ಬಶೀರ್ ಸಾಬ್, ಆರ್.ಸಿ. ಚಮನ್ ಸಾಬ್, ಮಹಮದ್ ಅಮ್ಜದ್, ಟಿ. ಜಿಯಾವುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)