ಮಂಗಳವಾರ, ಏಪ್ರಿಲ್ 20, 2021
27 °C

ಟಿಕೆಟ್: ಧೋರಣೆ ಕೈಬಿಟ್ಟ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷಕ್ಕೆ ಮುಜುಗರ ಆಗುವಂತೆ ನಡೆದುಕೊಂಡ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ನಿಲುವಿನಿಂದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಿಂದಕ್ಕೆ ಸರಿದಿದ್ದಾರೆ. ತಪ್ಪು ತಿದ್ದಿಕೊಂಡವರ ವಿರುದ್ಧ ಕ್ರಮ ಇಲ್ಲ ಎಂದೂ ಪ್ರಕಟಿಸಿದ್ದಾರೆ.ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸಂವಾದದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, `ಕೆಲವು ಶಾಸಕರ ನಡವಳಿಕೆಗಳು ಮತ್ತು ಹೇಳಿಕೆಗಳಿಂದ ಬಿಜೆಪಿಗೆ ಮುಜುಗರ ಆಗಿದ್ದು ನಿಜ. ಅಂತಹವರನ್ನು ಗುರುತಿಸಿ ಟಿಕೆಟ್ ನಿರಾಕರಿಸಲು ಯೋಚಿಸಲಾಗಿತ್ತು. ಆದರೆ, ಈಗ ಬಹಳ ಮಂದಿ ತಪ್ಪು ತಿದ್ದಿಕೊಂಡಿದ್ದಾರೆ. ಮುಂದೆಯೂ ತಪ್ಪು ನಡವಳಿಕೆ ಅನುಸರಿಸುವವರ ವಿರುದ್ಧವಷ್ಟೇ ಕ್ರಮದ ಕುರಿತು ಯೋಚಿಸಬಹುದು~ ಎಂದರು.`ಚುನಾವಣೆ ನಡೆದಾಗ ಸ್ವತಂತ್ರವಾಗಿ ಸರ್ಕಾರ ರಚಿಸುವಂತಹ ಸಂಖ್ಯಾಬಲ ನಮ್ಮ ಬಳಿ ಇರಲಿಲ್ಲ. ಇದರಿಂದಾಗಿ ಕೆಲವು ಶಾಸಕರ ತಪ್ಪು ನಡವಳಿಕೆಗಳನ್ನೂ ಸಹಿಸಿಕೊಳ್ಳುವುದು ಅನಿವಾರ್ಯ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಶಾಸಕರು ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾರೆ. ತಪ್ಪು ತಿದ್ದಿಕೊಳ್ಳುವವರಿಗೆ ಅವಕಾಶ ನೀಡಬೇಕಲ್ಲವೇ~ ಎಂದು ಮರುಪ್ರಶ್ನೆ ಹಾಕಿದರು.ಶೀಘ್ರದಲ್ಲಿ ಖಾತೆ ಮರುಹಂಚಿಕೆ: `ಈಗ ನನ್ನ ಬಳಿ ಎರಡು ಖಾತೆಗಳಿವೆ. ಶೀಘ್ರದಲ್ಲಿ ಖಾತೆಗಳ ಮರುಹಂಚಿಕೆ ಆಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಬೇರೊಬ್ಬ ಸಚಿವರಿಗೆ ನೀಡಲಾಗುತ್ತದೆ. ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯೂ ವಾರದೊಳಗೆ ಪೂರ್ಣಗೊಳ್ಳಲಿದೆ. ಸಚಿವ ಸ್ಥಾನ ವಂಚಿತ ಶಾಸಕರು ಮತ್ತು ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸಲಾಗುತ್ತದೆ~ ಎಂದರು.

ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಪಕ್ಷದಲ್ಲಿ ಜಾರಿಯಲ್ಲಿದೆ. ಅದರಂತೆ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆ ಶೀಘ್ರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರು ಯಾರು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಬಿಜೆಪಿಯಲ್ಲಿ ಇದ್ದ ಗೊಂದಲಗಳಿಗೆಲ್ಲ ತೆರೆ ಬಿದ್ದಿದೆ. ಈಗ ಎಲ್ಲ ನಾಯಕರೂ ಒಗ್ಗಟ್ಟಾಗಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಗುರಿ ಬಿಜೆಪಿ ಮುಂದಿದೆ ಎಂದು ಹೇಳಿದರು.`ಮುಂದಿನ ಚುನಾವಣೆಯನ್ನು ಯಾರ ನಾಯಕತ್ವದಲ್ಲಿ ಎದುರಿಸಬೇಕು ಎಂಬುದನ್ನು ಬಿಜೆಪಿ ಇನ್ನೂ ನಿರ್ಧರಿಸಿಲ್ಲ. ಸಾಮೂಹಿಕ ನಾಯಕತ್ವ ಹಾಗೂ ಒಬ್ಬರ ನಾಯಕತ್ವ ಎರಡೂ ಆಯ್ಕೆಗಳು ಬಿಜೆಪಿ ಮುಂದಿವೆ. ಚುನಾವಣೆ ಸಮಯದಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು~ ಎಂದು ಈಶ್ವರಪ್ಪ ತಿಳಿಸಿದರು.ಪಶ್ಚಿಮ ಘಟ್ಟಗಳಿಗೆ `ಯುನೆಸ್ಕೊ~ ಮಾನ್ಯತೆ ಪರವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿಕೆ ನೀಡಿರುವ ಕುರಿತು ಗಮನ ಸೆಳೆದಾಗ, `ಅದು ಅವರ ವೈಯಕ್ತಿಕ ನಿಲುವು. ಪಕ್ಷ ಅಥವಾ ಸರ್ಕಾರದ ನಿಲುವು ಅಲ್ಲ~ ಎಂದರು.

`ಅವರೂ ಒಬ್ಬ ನಾಯಕ~

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, `ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ಯಡಿಯೂರಪ್ಪ ಅವರೊಬ್ಬರೇ ನಾಯಕರಲ್ಲ. ಅವರೂ ಒಬ್ಬ ನಾಯಕ~  -ಕೆ.ಎಸ್.ಈಶ್ವರಪ್ಪ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.