ಟಿಕೆಟ್ ವಂಚಿತರ ಬಂಡಾಯಪುರಾಣ

7

ಟಿಕೆಟ್ ವಂಚಿತರ ಬಂಡಾಯಪುರಾಣ

Published:
Updated:

ಹಾಸನ: ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲೆಗ ಬಂಡಾಯ ಬಾವುಟ,  ಆರೋಪ- ಪ್ರತ್ಯಾರೋಪ, ಒತ್ತಾಯಗಳ ರಾಜಕೀಯ ಆರಂಭವಾಗಿದೆ. ಟಿಕೆಟ್ ಇನ್ನೂ ಘೋಷಣೆ ಮಾಡಿರದ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಆಗ್ರಹ ನಡೆಯುತ್ತಿದ್ದರೆ, ಟಿಕೆಟ್ ಘೋಷಣೆಯಾದವರಿಗೆ ಬಂಡಾಯದ ಬಿಸಿ ತಾಕುತ್ತಿದೆ.ಈ ನಡುವೆ ಕೆಲವರು ಟಿಕೆಟ್ ಘೋಷಣೆಯಾಗುವುದಕ್ಕೂ ಮೊದಲೇ ಪ್ರಚಾರ ಆರಂಭಿಸಿ `ಹೈಕಮಾಂಡ್'ಗೆ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಸೋಮವಾರ ವಿವಿಧ ಪಕ್ಷಗಳ ಪುಢಾರಿಗಳು, ವಿಶೇಷವಾಗಿ ಕಾಂಗ್ರೆಸ್‌ನ ಸಕಲೇಶಪುರದ ಕಾರ್ಯಕರ್ತರು, ಪದಾಧಿಕಾರಿಗಳು ಹಾಸನದಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಇಂಥ ಪರ-ವಿರೋಧ ಆಗ್ರಹಗಳನ್ನು ಮಾಡಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ, ಈ ಕ್ಷೇತ್ರದಿಂದ ಇಂಥವರೇ ಎಂಬ ಗಾಳಿ ಸುದ್ದಿಗಳು ಹರಡಿವೆ. ಅಂಥ ಸುದ್ದಿಗಳಲ್ಲಿ ಸಕಲೇಶಪುರ ಕ್ಷೇತ್ರದಿಂದ ಡಿ. ಮಲ್ಲೇಶ್ ಅಭ್ಯರ್ಥಿ ಎಂಬುದೂ ಒಂದು ಸುದ್ದಿ. ಇದರ ಜತೆ ಯಲ್ಲೇ ಮೋಟಮ್ಮ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುತ್ತಿರುವ ಕೆಲವು ಕಾರ್ಯಕರ್ತರು, ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಚಾರ ಏನೇ ಇದ್ದರೂ ಡಿ.ಮಲ್ಲೇಶ್ ಹೆಸರಿನಿಂದಾಗಿ ಕ್ಷೇತ್ರದಲ್ಲಿ ಪರ- ವಿರೋಧ ಧ್ವನಿಗಳು ಎದ್ದಿವೆ.ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಇಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಲವತ್ತಿ ಸೋಮಶೇಖರ್ `ಮಲ್ಲೇಶ್ ಅಭ್ಯರ್ಥಿಯಾದರೆ ನಾವೆಲ್ಲರೂ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿ ವಿರೋಧ ವ್ಯಕ್ತಪಡಿಸುತ್ತೇವೆ' ಎಂದಿದ್ದಾರೆ.ಇದಾಗುತ್ತಿದ್ದಂತೆ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಲೋಹಿತ್ ಪತ್ರಿಕಾಗೋಷ್ಠಿ ನಡೆಸಿ ಮಲ್ಲೇಶ್ ಅವರೇ ಕ್ಷೇತ್ರಕ್ಕೆ ಸರಿಯಾದ ಅಭ್ಯರ್ಥಿ ಎಂದು ಮಲ್ಲೇಶ್ ಪರ ವಾದ ಮಾಡಿದ್ದಾರೆ. ಆದರೆ ಮೋಟಮ್ಮ ಬರುವುದಾದರೆ ಯಾರ ಆಕ್ಷೇಪವೂ ಇಲ್ಲ ಎಂದು ಎಲ್ಲರೂ ಹೇಳಿದ್ದಾರೆ.ಈ ನಡುವೆ ಶ್ರವಣಬೆಳಗೊಳ ಕ್ಷೇತ್ರದಿಂದ ಪುಟ್ಟೇಗೌಡರಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಅಲ್ಲಿ ಪ್ರಬಲ ಆಕಾಂಕ್ಷಿಯೊಬ್ಬರು ಪ್ರಚಾರವನ್ನೂ ಆರಂಭಿಸಿದ್ದಾರೆ.  ಆ ಮೂಲಕ `ನನಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿಯಾದರೂ ಕಣಕ್ಕೆ ಇಳಿಯುತ್ತೇನೆ' ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.ವೀರಶೈವರಿಗೆ ಟಿಕೆಟ್ ಕೊಡಿ

ಪಕ್ಷಗಳು ಟಿಕೆಟ್ ಅಭ್ಯರ್ಥಿ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಇತ್ತ ಅಖಿಲಭಾರತ ವೀರಶೈವ ಮಹಾ ಸಭಾದವರೂ ಪತ್ರಿಕಾಗೋಷ್ಠಿ ನಡೆಸಿ ಬೇಲೂರು ಹಾಗೂ ಅರಸೀಕೆರೆ ಕ್ಷೇತ್ರಗಳಲ್ಲಿ ವೀರಶೈವ ಸಮುದಾಯದವರಿಗೇ ಟಿಕೆಟ್ ನೀಡಬೇಕು  ಎಂದು ಎಲ್ಲ ಪಕ್ಷಗಳವರನ್ನು ಒತ್ತಾಯಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಸಂಗಮ್ ಅವರು, `ಅರಸೀಕೆರೆಯಲ್ಲಿ 72 ಸಾವಿರ ಹಾಗೂ ಬೇಲೂರಿನಲ್ಲಿ 58ಸಾವಿರ ವೀರಶೈವರಿದ್ದಾರೆ. ಇದಲ್ಲದೆ ಅರಕಲಗೂಡಿನಲ್ಲಿ 32ಸಾವಿರ, ಸಕಲೇಶಪುರದಲ್ಲಿ 35ಸಾವಿರ, ಚನ್ನರಾಯಪಟ್ಟಣದಲ್ಲಿ 11ಸಾವಿರ ಆಲೂರಿನಲ್ಲಿ 9ಸಾವಿರ, ಹಾಸನದಲ್ಲಿ 20ಸಾವಿರ ಹಾಗೂ ಹೊಳೆನರಸೀಪುರದಲ್ಲಿ 16ಸಾವಿರ ವೀರಶೈವರಿದ್ದಾರೆ. ಇಷ್ಟು ದೊಡ್ಡ ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಕನಿಷ್ಠ ಬೇಲೂರು ಹಾಗೂ ಅರಸೀಕೆರೆಗಳಲ್ಲಿ ವೀರಶೈವರಿಗೇ ಟಿಕೆಟ್  ನೀಡಬೇಕು' ಎಂದು ಒತ್ತಾಯಿಸಿದ್ದಾರೆ.ನಾವು ಬೆಂಬಲಿಸುವ ಪಕ್ಷಗಳಿಂದ ವೀರಶೈವರಿಗೆ ಟಿಕೆಟ್ ನೀಡದಿದ್ದರೆ ಸಮುದಾ ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಣದಲ್ಲಿರುವ ಯಾವುದೇ ಪಕ್ಷದ ವೀರಶೈಕ ಅಭ್ಯರ್ಥಿಯನ್ನು ಮಹಾಸಭೆ ಬೆಂಬಲಿಸಬೇಕಾಗುತ್ತದೆ. ಯಾರೂ ಇಲ್ಲದಿದ್ದರೆ ಮಹಾಸಭೆಯ  ಕಡೆಯಿಂದಲೇ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು' ಎಂದರು.ಒಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆಗೂ ಮೊದಲೇ ಜಿಲ್ಲೆಯಲ್ಲಿ ಹಲವು ಬಂಡಾಯ ಬಾವುಟಗಳು ಎದ್ದಿರುವುದು ಕಾಣಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry