ಟಿಕೆಟ್ ಹಂಚಿಕೆ: ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ

7

ಟಿಕೆಟ್ ಹಂಚಿಕೆ: ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ

Published:
Updated:

ನವದೆಹಲಿ: ಆಡಳಿತಾರೂಢ ಬಿಜೆಪಿ, ಮಂಗಳವಾರ 36 ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ 48 ಕ್ಷೇತ್ರಗಳನ್ನು ಖಾಲಿ ಉಳಿಸಿಕೊಂಡಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅತೃಪ್ತಿ- ಅಸಮಾಧಾನದ ಲಾಭ ಪಡೆಯಲು ಕಮಲ ಪಾಳೆಯ ಕಾದುಕುಳಿತಿದ್ದು, ಆ ಪಕ್ಷದ ಕೆಲ `ನಿರಾಶ್ರಿತರಿಗೆ ಆಶ್ರಯ' ನೀಡುವ ಉದ್ದೇಶ ಹೊಂದಿದೆ.ಬಿಜೆಪಿ ಸಂಜೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಚಿವ ಸೋಮಣ್ಣ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಸ್ಥಾನ ಪಡೆದಿದ್ದಾರೆ. ಗೋವಿಂದರಾಜ ನಗರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಸೋಮಣ್ಣ ಅವರಿಗೆ ವಿಜಯನಗರ, ಮೋಹನ್ ಅವರಿಗೆ ಗಾಂಧಿನಗರದಿಂದ ಟಿಕೆಟ್ ನೀಡಲಾಗಿದೆ. ಮಂಗಳವಾರ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ದತ್ತಾತ್ರೇಯ ಚಂದ್ರಶೇಖರ ಪಾಟೀಲ ರೇವೂರ ಅವರಿಗೆ ಗುಲ್ಬರ್ಗ ದಕ್ಷಿಣದಿಂದ ಟಿಕೆಟ್ ನೀಡಲಾಗಿದೆ.ಕೆಲವು ಕ್ಷೇತ್ರಗಳ ಅಭ್ಯರ್ಥಿಗಳಿಗಾಗಿ ಬಿಜೆಪಿ ಪರದಾಡುತ್ತಿದ್ದು, ಕಾಂಗ್ರೆಸ್ ಅತೃಪ್ತರು ವಲಸೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಕಾಂಗ್ರೆಸ್ ಕಸರತ್ತು: ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಕಗ್ಗಂಟಾಗಿರುವ 47 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕಸರತ್ತನ್ನು ಗೋವಾ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದ ಆಯ್ಕೆ ಸಮಿತಿ ಮುಂದುವರಿಸಿತು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ರಾಜ್ಯದ ಉಸ್ತುವಾರಿ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆಯಲ್ಲಿ ಭಾಗವಹಿಸಿದ್ದರು.ತೀವ್ರ ಗೊಂದಲ ಸೃಷ್ಟಿಸಿರುವ 47 ಕ್ಷೇತ್ರಗಳ ಪ್ರಬಲ ಆಕಾಂಕ್ಷಿಗಳ ಪಟ್ಟಿಯನ್ನು `ಅಭ್ಯರ್ಥಿಗಳ ಆಯ್ಕೆ ಸಮಿತಿ' ಸಿದ್ಧಪಡಿಸಿದೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಪ್ರತಿಯೊಂದು ಹೆಸರನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕ ಅಧಿಕೃತವಾಗಿ ಪಟ್ಟಿ ಬಿಡುಗಡೆ ಆಗಲಿದೆ.ಈ ಸಮಿತಿ ಅಧ್ಯಕ್ಷರು, ಸದಸ್ಯರ ಜತೆ ಚುನಾವಣಾ ಸಮಿತಿ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ನಾಳೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವರು. `ಟಿಕೆಟ್ ಹಂಚಿಕೆ ಅಕ್ರಮ ಆರೋಪ'ದ ಹಿನ್ನೆಲೆಯಲ್ಲಿ ಫೆಲೆರೊ ಸಮಿತಿ ಮಂಗಳವಾರ ಸಮಗ್ರವಾಗಿ ಚರ್ಚಿಸಿತು.ಕಾಂಗ್ರೆಸ್ ಕಳೆದ ವಾರ ಬಿಡುಗಡೆ ಮಾಡಿದ 177ಕ್ಷೇತ್ರಗಳ ಪಟ್ಟಿಯಲ್ಲಿರುವ ಕೆಲ ಹೆಸರುಗಳ ಕುರಿತು ಫೆಲೆರೊ ಸಮಿತಿ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಈ ಪಟ್ಟಿಯಲ್ಲಿ ಏನೇ ಬದಲಾವಣೆ ಮಾಡುವ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡಲಾಯಿತು.ಈಗಾಗಲೇ ಪ್ರಕಟವಾಗಿರುವ ಪಟ್ಟಿಯಲ್ಲಿ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಆದ್ದರಿಂದ ಅದರ ತಂಟೆಗೆ ಹೋಗುವುದು ಬೇಡ ಎಂದು ಕೆಲವರು ಅಭಿಪ್ರಾಯಪಟ್ಟರು.ಇನ್ನೂ ಕೆಲವರು ಸಮಸ್ಯೆ ಆಗಿರುವ ಬೆರಳೆಣಿಕೆ ಸಂಖ್ಯೆ ಹೆಸರುಗಳನ್ನು ಬದಲಾವಣೆ ಮಾಡಬಹುದು. ಈ ವಿಷಯದಲ್ಲಿ ಪಕ್ಷದ ಅಧ್ಯಕ್ಷರೇ ಅಂತಿಮ ನಿರ್ಧಾರ ಕೈಗೊಳ್ಳಲಿ. ಪಟ್ಟಿಗೆ ಅವರೇ ಒಪ್ಪಿಗೆ ನೀಡಿರುವುದರಿಂದ ತೀರ್ಮಾನ ಅವರಿಗೆ ಬಿಡೋಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಿಗ್ಗೆ 11ಕ್ಕೆ ಆರಂಭವಾದ ಸಮಿತಿ ಸಭೆ ಸಂಜೆ 6ರವರೆಗೂ ನಡೆಯಿತು.ಸಭೆಗೆ ಮೊದಲು ಟಿಕೆಟ್ ವಂಚಿತರು, ಆಕಾಂಕ್ಷಿಗಳು ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್, ಮಧುಸೂದನ ಮಿಸ್ತ್ರಿ ಮತ್ತು ಬಿ.ಕೆ. ಹರಿಪ್ರಸಾದ್ ಮೊದಲಾದ ನಾಯಕರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ದುಂಬಾಲು ಬಿದ್ದರು. ರಾಜಾಜಿನಗರದಿಂದ ಟಿಕೆಟ್ ಕೇಳಿದ್ದ ಮಾಜಿ ಸಚಿವೆ ರಾಣಿ ಸತೀಶ್, ಮಿಸ್ತ್ರಿ ಜತೆ  ವಾಗ್ವಾದ ನಡೆಸಿದರು.ತಮಗೆ ಟಿಕೆಟ್ ನಿರಾಕರಿಸಲು ಕಾರಣವೇನೆಂದು ರಾಣಿ ಸತೀಶ್ ಪ್ರಶ್ನೆ ಮಾಡಿದರು. ಮಂಜುಳಾ ನಾಯ್ಡು ಅವರ ಹೆಸರನ್ನು ಬದಲಾವಣೆ ಮಾಡಿ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷದ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ವಿ.ಆರ್. ಸುದರ್ಶನ್, ವಿ.ಎಸ್. ಉಗ್ರಪ್ಪ, ಎಲ್. ಹನುಮಂತಯ್ಯ ಅವರಿಗೆ ಟಿಕೆಟ್ ಕೊಡದೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದರು.`ನಿಮ್ಮ ನಾಯಕರೇ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ' ಎಂದು ಮಿಸ್ತ್ರಿ ವಿವರಿಸಿದರು. ಈ ಮಾತು ಒಪ್ಪದ ರಾಣಿ ಸತೀಶ್, `ನೀವು ಹೀಗೆ ಹೇಳಿ ನುಣುಚಿಕೊಳ್ಳಬೇಡಿ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ನಿಮ್ಮ ಬಳಿ ಸಂಪೂರ್ಣ ಮಾಹಿತಿ ಇರಬೇಕು. ಯಾರು? ಏನು? ಎಂಬುದರ ಅರಿವಿರಬೇಕು. ನಿಷ್ಠಾವಂತರಿಗೆ ಅನ್ಯಾಯವಾದ ಸಮಯದಲ್ಲಿ ಸರಿಪಡಿಸಬೇಕು' ಎಂದು ಪ್ರತಿಪಾದಿಸಿದರು.ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ನಾಯಕಿ ಲೋಕೇಶ್ವರಿ ವಿನಯಚಂದ್ರ, ಆಸ್ಕರ್ ಅವರನ್ನು ಭೇಟಿ ಮಾಡಿ ಬೆಳ್ತಂಗಡಿ ಅಥವಾ ಪುತ್ತೂರಿನಿಂದ ಟಿಕೆಟ್ ಕೊಡಿ ಎಂದು ಮನವಿ ಮಾಡಿದರು. ಮಾಜಿ ಶಾಸಕಿ ಮಲ್ಲಾಜಮ್ಮ ದಲಿತ ಮಹಿಳೆಯರು ಟಿಕೆಟ್‌ನಿಂದ ವಂಚಿತರಾಗಿದ್ದಾರೆ ಎಂದು ದೂರಿದರು.ಮೊದಲ ಪಟ್ಟಿಯಲ್ಲಿ ಒಬ್ಬರು ಲಿಂಗಾಯತರು, ಒಬ್ಬರು ಒಕ್ಕಲಿಗರು ಸೇರಿದಂತೆ ಏಳು ಮಹಿಳೆಯರು ಟಿಕೆಟ್ ಪಡೆದಿದ್ದಾರೆ. ಇವರಲ್ಲಿ ಐವರು ಹಿಂದುಳಿದ ವರ್ಗದವರು. ಪಟ್ಟಿಯಲ್ಲಿ ಒಬ್ಬರೂ ದಲಿತ ಮಹಿಳೆಯರಿಲ್ಲ. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವಂತೆ ಸೋನಿಯಾ ಗಾಂಧಿ ಹೇಳಿದ ಬಳಿಕವೂ ರಾಜ್ಯದ ನಾಯಕರು ತಮ್ಮನ್ನು ಕಡೆಗಣಿಸಿದ್ದಾರೆಂದು ಮಲ್ಲಾಜಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry