ಮಂಗಳವಾರ, ನವೆಂಬರ್ 12, 2019
28 °C

ಟಿಕೆಟ್ ಹಂಚಿಕೆ ಬೇವು ಜಾಸ್ತಿ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ  ಅಂತಿಮಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಇದೆ.ಇದೇ 5ರಂದು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 177 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ ಇರುವ 47 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಪಕ್ಷದ ನಾಯಕರು ಕಸರತ್ತು ನಡೆಸುತ್ತಲೇ ಇದ್ದಾರೆ. ಬಿಜೆಪಿ ಎರಡು ಹಂತದಲ್ಲಿ 176 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್‌ನಂತೆ ಕಮಲ ಪಾಳೆಯಕ್ಕೆ 48 ಕ್ಷೇತ್ರಗಳು ಬಿಸಿ ತುಪ್ಪವಾಗಿ ಪರಿಣಮಿಸಿವೆ. ಎರಡೂ ಪಕ್ಷಗಳ ನಡೆಯ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಇನ್ನೂ 102 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಇರಿಸಿಕೊಂಡಿದೆ.ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಏಪ್ರಿಲ್ 17 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಮಧ್ಯದಲ್ಲಿ ಎರಡು ಸರ್ಕಾರಿ ರಜಾ ದಿನಗಳಿವೆ. ನಾಮಪತ್ರ ಸಲ್ಲಿಕೆಗೆ ಐದು ದಿನಗಳು ಮಾತ್ರ ಲಭ್ಯವಾಗುತ್ತವೆ. ಗಡುವು ಸಮೀಪಿಸುತ್ತಿರುವ ಹೊತ್ತಿನಲ್ಲೂ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಆಗದೇ ಇರುವುದು ಎಲ್ಲ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ.ಬರಿಗೈಲಿ ವಾಪಸ್: ಬಾಕಿ ಉಳಿದಿರುವ 47 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ ತೆರಳಿದ್ದರು. ಗೋವಾದ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ಅಧ್ಯಕ್ಷತೆಯ ಅಭ್ಯರ್ಥಿಗಳ ಆಯ್ಕೆ ಪರಿಶೀಲನಾ ಸಮಿತಿ ಮಂಗಳವಾರ ಮತ್ತು ಬುಧವಾರ ಸಭೆ ನಡೆಸಿದ್ದು, 47 ಕ್ಷೇತ್ರಗಳ ಆಕಾಂಕ್ಷಿಗಳ ಕುರಿತು ಪರಿಶೀಲನೆ ನಡೆಸಿದೆ.`ಪರಿಶೀಲನಾ ಸಮಿತಿಯು 30 ಕ್ಷೇತ್ರಗಳಿಗೆ ತಲಾ ಒಬ್ಬರ ಹೆಸರನ್ನು ಅಂತಿಮಗೊಳಿಸುವಲ್ಲಿ ಯಶಸ್ಸು ಕಂಡಿದೆ. ಆದರೆ, 17 ಕ್ಷೇತ್ರಗಳಿಗೆ ಒಂದೇ ಹೆಸರು ಶಿಫಾರಸು ಮಾಡಲು ಸಾಧ್ಯವಾಗಿಲ್ಲ. ಈ ಎಲ್ಲ ವಿವರಗಳನ್ನೂ ಹೈಕಮಾಂಡ್ ಮುಂದೆ ಮಂಡಿಸಿದ್ದು, ಅಂತಿಮ ನಿರ್ಣಯ ಕೈಗೊಳ್ಳುವುದನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ ಬಿಡಲಾಗಿದೆ' ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಬುಧವಾರ ಸಂಜೆಯೇ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿದೇಶ ಪ್ರವಾಸಕ್ಕೆ ತೆರಳಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಗೆ ವಾಪಸಾಗಿಲ್ಲ. ಆದ್ದರಿಂದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿಲ್ಲ. ಶುಕ್ರವಾರಕ್ಕೆ ಸಭೆ ನಿಗದಿಯಾಗಿದೆ. ಈ ಕಾರಣದಿಂದ ಪರಮೇಶ್ವರ್, ಸಿದ್ದರಾಮಯ್ಯ ಬುಧವಾರ ರಾತ್ರಿ ಬೆಂಗಳೂರಿಗೆ ವಾಪಸಾದರು.ಇನ್ನೂ ಅಭ್ಯರ್ಥಿಗಳ ಹೆಸರು ಘೋಷಣೆಯಾಗದ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಪೈಪೋಟಿ ಹೆಚ್ಚುತ್ತಲೇ ಇದೆ. ಮೊದಲ ಪಟ್ಟಿಯಲ್ಲಿರುವ ಕ್ಷೇತ್ರಗಳ ಟಿಕೆಟ್ ವಂಚಿತರು, ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ನುಸುಳಲು ಪ್ರಯತ್ನ ಆರಂಭಿಸಿದ್ದಾರೆ. ಬೆಂಗಳೂರಿನ ಹತ್ತು ಕ್ಷೇತ್ರಗಳಂತೂ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಂತಾಗಿವೆ. ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಸುಳಿವು ದೊರೆತಿರುವುದರಿಂದ ಅಭ್ಯರ್ಥಿಯ ಆಯ್ಕೆ ಮತ್ತು ಟಿಕೆಟ್ ವಂಚಿತರನ್ನು ಸಮಾಧಾನಗೊಳಿಸುವ ಕೆಲಸವನ್ನು  ಏಕಕಾಲಕ್ಕೆ ನಿರ್ವಹಿಸಬೇಕಾದ ಇಕ್ಕಟ್ಟಿಗೆ ಕಾಂಗ್ರೆಸ್ ನಾಯಕರು ಸಿಲುಕಿದ್ದಾರೆ.ಬಿಜೆಪಿಯಲ್ಲೂ ಗೊಂದಲ: 47 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿಯ ಪ್ರಮುಖರು ಬುಧವಾರವೂ ಸಭೆ ನಡೆಸಿದರು. ಚುನಾವಣಾ ಕಾರ್ಯತಂತ್ರ ರೂಪಿಸಲು ಮಾರ್ಗದರ್ಶನ ನೀಡುವುದಕ್ಕಾಗಿ ಬಂದಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಒಂದೆಡೆ ಚರ್ಚೆಯಲ್ಲಿ ನಿರತರಾಗಿದ್ದರು. ಮತ್ತೊಂದೆಡೆ ಅಭ್ಯರ್ಥಿಗಳ ಆಯ್ಕೆಯಲ್ಲಿನ ಸಿಕ್ಕು ಬಿಡಿಸಲು ಬಿಜೆಪಿ ರಾಜ್ಯ ಘಟಕದ ಪ್ರಮುಖರು ಪ್ರಯತ್ನ ನಡೆಸಿದರು.

ಜೇಟ್ಲಿ ಅವರು ಮಧ್ಯಾಹ್ನದವರೆಗೂ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ನಂತರ ಸಭೆ ಖಾಸಗಿ ಹೋಟೆಲ್‌ಗೆ ಸ್ಥಳಾಂತರವಾಯಿತು. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸಭೆಯಲ್ಲಿದ್ದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸಂಜೆ ಸಭೆಗೆ ಬಂದರು.ಚುನಾವಣಾ ಸಿದ್ಧತೆ, ವಿವಿಧ ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕ, ಪ್ರಣಾಳಿಕೆ ರಚನೆ, ಪಕ್ಷದ ಪರ ಜಾಹೀರಾತುಗಳ ಪ್ರಕಟಣೆ, ಪ್ರಚಾರದ ಸ್ವರೂಪ ಮತ್ತಿತರ ವಿಷಯಗಳ ಕುರಿತು ಜೇಟ್ಲಿ ಮಾರ್ಗದರ್ಶನ ನೀಡಿದರು. ಪಕ್ಷ ಬಲಿಷ್ಠವಾಗಿರುವ ಕಡೆಗಳಲ್ಲಿ ಹಾಗೂ ಪ್ರಾಬಲ್ಯ ಇಲ್ಲದ ಕಡೆಗಳಲ್ಲಿ ಅನುಸರಿಸಬೇಕಿರುವ ಸೂತ್ರಗಳ ಕುರಿತೂ ಅವರು ಸಲಹೆಗಳನ್ನು ನೀಡಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಜೇಟ್ಲಿ ಜೊತೆಗಿನ ಚರ್ಚೆಯ ನಡುವೆಯೇ ಪ್ರತ್ಯೇಕ ಸಭೆ ನಡೆಸಿದ ಶೆಟ್ಟರ್, ಜೋಶಿ, ಅನಂತಕುಮಾರ್ ಮತ್ತಿತರರು 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಪ್ರಯತ್ನಿಸಿದರು. ಆದರೆ, ಹೆಬ್ಬಾಳ ಕ್ಷೇತ್ರದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಲೂರಿನಲ್ಲಿ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಕೆಜಿಎಫ್‌ನಲ್ಲಿ ವೈ.ಸಂಪಂಗಿ ಅವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.ಶೆಟ್ಟರ್, ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಆರ್.ಅಶೋಕ, ಈ ಮೂವರಿಗೂ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಜೋಶಿ ಮತ್ತು ಅನಂತಕುಮಾರ್ ಬಲವಾಗಿ ವಿರೋಧಿಸುತ್ತಿದ್ದಾರೆ. ಇದರಿಂದಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬುಧವಾರವೂ ಸಾಧ್ಯವಾಗಿಲ್ಲ. ಈ ಮೂರು ಕ್ಷೇತ್ರಗಳ ವಿಷಯ ದೆಹಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.ಈ ನಡುವೆ ಸಂಪಂಗಿ ಬೆಂಬಲಿಗರು ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸಿ, ಟಿಕೆಟ್ ನೀಡಬೇಕು ಎಂದು ಆಗ್ರಹಪಡಿಸಿದರು.

ಕಾದು ನೋಡುವ ತಂತ್ರ

ಕಾಂಗ್ರೆಸ್ ಮತ್ತು ಬಿಜೆಪಿಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಸುಮಾರು ಅರ್ಧದಷ್ಟು ಕ್ಷೇತ್ರಗಳ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಬಹುತೇಕ ಎರಡೂ ಪಕ್ಷಗಳ ಪಟ್ಟಿ ಪ್ರಕಟವಾದ ಬಳಿಕವೇ ಜೆಡಿಎಸ್ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಇನ್ನೂ 81 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಮಾಜಿ ಸಚಿವ ಬಿ.ಶ್ರೀರಾಮುಲು ನಾಯಕತ್ವದ ಬಿಎಸ್‌ಆರ್ ಕಾಂಗ್ರೆಸ್ ಕೂಡ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಎಲ್ಲ ಪಕ್ಷಗಳಿಗೂ ಅಭ್ಯರ್ಥಿಗಳ ಆಯ್ಕೆ ಬಿಸಿ ತುಪ್ಪದಂತಾಗಿದೆ.

ಪ್ರತಿಕ್ರಿಯಿಸಿ (+)