ಮಂಗಳವಾರ, ಮೇ 11, 2021
26 °C

ಟಿಪಿಎಸ್ ಕಚೇರಿ ಎಂಬ ಪಾರ್ಕಿಂಗ್ ಸ್ಥಳ !

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾಯಿತಿ ಕಚೇರಿ ಎದುರು `ನೋ ಪಾರ್ಕಿಂಗ್~ ಎಂಬ ಫಲಕವಿದೆ. ಅಲ್ಲಿಂದ ಸ್ವಲ್ಪ ದೂರದಲ್ಲೇ `ಕಚೇರಿ ಕೆಲಸಕ್ಕೆ ಬಂದ ವಾಹನ ಮಾತ್ರ~ ಎಂಬ ಸೂಚನೆಯುಳ್ಳ ಮತ್ತೊಂದು ಫಲಕವಿದೆ.   `ನೋ ಪಾರ್ಕಿಂಗ್~ ಎಂಬ ಫಲಕವಿದ್ದರೂ ಅದರ ಬದಿಯಲ್ಲೇ ದ್ವಿಚಕ್ರ ವಾಹನಗಳನ್ನು ನಿರಾತಂಕವಾಗಿ ನಿಲುಗಡೆ ಮಾಡಲಾಗುತ್ತದೆ. ಕಚೇರಿಗೆ ಸಂಬಂಧಿಸಿದ ಕಾರ್ಯಗಳು ಇಲ್ಲದಿದ್ದರೂ ಮತ್ತೊಂದು ಫಲಕದ ಸುತ್ತಲೂ ದ್ವಿಚಕ್ರ ವಾಹನ ನಿಲುಗಡೆಯಾಗಿರುತ್ತವೆ.ಕಚೇರಿಗೆ ಭೇಟಿ ನೀಡುವವರ ವಾಹನ ಹೊರತುಪಡಿಸಿದರೆ ಇತರ ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಮತ್ತು ಬೇರೆ ವಾಹನಗಳ ನಿಲುಗಡೆಯನ್ನು ಇಲ್ಲಿ ನಿಷೇಧಿಸಲಾಗಿದೆ. ಕಚೇರಿ ಆವರಣದಲ್ಲಿ ವಿನಾಃ ಕಾರಣ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ ಎಂದು ಮೌಖಿಕವಾಗಿ ಸೂಚನೆಯನ್ನು ನೀಡಿದ್ದರೂ ವಾಹನಗಳ ನಿಲುಗಡೆ ವಿಷಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಸುಮಾರು 10 ರಿಂದ 30 ವಾಹನ ನಿಲುಗಡೆಯಾಗುತ್ತಿದ್ದ ಸ್ಥಳದಲ್ಲಿ ಈಗ ಪ್ರತಿ ದಿನ ನೂರಕ್ಕೂ ಹೆಚ್ಚು ವಾಹನ ನಿಲುಗಡೆಯಾಗುತ್ತಿವೆ.ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಾಹನ ನಿಲುಗಡೆಯಾಗಿರುತ್ತವೆ. ವಾಹನಗಳನ್ನು ಮನಸ್ಸೋಇಚ್ಛೆ ನಿಲ್ಲಿಸಲಾಗಿರುತ್ತದೆ. ಅವು ಯಾರ‌್ಯಾರಿಗೆ ಸೇರಿವೆ ಎಂಬುದು ಗೊತ್ತಿರುವುದಿಲ್ಲ. ಸಂಜೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ತಮ್ಮ ವಾಹನಗಳೊಂದಿಗೆ ಆವರಣದಿಂದ ಹೊರಗಡೆ ಹೊರಡುತ್ತಾರೆ. ಇಲ್ಲಿ ವಾಹನ ನಿಲುಗಡೆ ಮಾಡುವ ಬಹುತೇಕ ಮಂದಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬರುವುದಿಲ್ಲ. ಪಕ್ಕದ ಉಪವಿಭಾಗಾಧಿಕಾರಿ ಕಚೇರಿಗೆ ಹೋಗುವುದಿಲ್ಲ.`ಬೇರೆ ಬೇರೆ ಕಾರಣಗಳಿಗಾಗಿ ದೂರದೂರದ ಗ್ರಾಮಗಳಿಂದ ಮತ್ತು ಹೋಬಳಿಗಳಿಂದ ಜನರು ಪ್ರತಿ ದಿನ ಚಿಕ್ಕಬಳ್ಳಾಪುರಕ್ಕೆ ಬರುತ್ತಾರೆ. ರಸ್ತೆ ಬದಿಯಲ್ಲಿ ಅಥವಾ ಬೇರೆ ಕಡೆ ನಿಲುಗಡೆ ಮಾಡುವ ಬದಲು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸುರಕ್ಷಿತವಾಗಿ ವಾಹನ ನಿಲುಗಡೆ ಮಾಡಬಹುದು ಎಂಬ ಭಾವನೆ ಅವರಲ್ಲಿದೆ.

ಇಲ್ಲಿ ಪೊಲೀಸರ ಕಾಟ ಮತ್ತು ಯಾರ ಕಿರಿಕಿರಿಯೂ ಇರುವುದಿಲ್ಲ. ಪಾರ್ಕಿಂಗ್ ಶುಲ್ಕ ನೀಡುವಂತಹ ಪ್ರಸಂಗವೂ ಬರುವುದಿಲ್ಲ~ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಕಚೇರಿ ಕಾರ್ಯಕ್ಕೆ ಸಂಬಂಧಿಸದ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಲುಗಡೆಯಾಗುವುದನ್ನು ನಿಯಂತ್ರಿಸಲೆಂದೇ ಕಚೇರಿ ಆವರಣದ ಪ್ರವೇಶದ್ವಾರಕ್ಕೆ ಕೆಲ ತಿಂಗಳುಗಳ ಹಿಂದೆ ಗೇಟು ಅಳವಡಿಸಲಾಯಿತು. ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ಗೇಟು ಮುಚ್ಚಿರಲಾಗಿರುತ್ತದೆ. ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ವಾಹನಗಳ ಪ್ರವೇಶ ಮತ್ತು ನಿಲುಗಡೆಗೆ ಮುಕ್ತ ಅವಕಾಶ ಇರುತ್ತದೆ.

ಆದರೆ ಅನಗತ್ಯ ವಾಹನಗಳ ನಿಲುಗಡೆಯನ್ನೂ ಯಾರೂ ಪ್ರಶ್ನಿಸುವುದಿಲ್ಲ~ ಎಂದು ಅವರು ತಿಳಿಸಿದರು.`ಆವರಣದಲ್ಲಿರುವ ಶಾಸಕರ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಉಪವಿಭಾಗಾಧಿಕಾರಿ ಕಚೇರಿ ಎದುರು ವಿಶಾಲವಾದ ಮೈದಾನವಿದೆ. ಉದ್ಯಾನ ಅಭಿವೃದ್ಧಿಪಡಿಸಿ ಇಡೀ ಆವರಣವನ್ನು ಹಸಿರು ವಾತಾವರಣ ಆಗಿಸಬಹುದು. ಪ್ರವೇಶದ್ವಾರದಿಂದ ಕಚೇರಿವರೆಗೆ ಇರುವ ರಸ್ತೆಯ ಎರಡೂ ಬದಿಗಳಲ್ಲಿ ಕೆಲ ತಿಂಗಳುಗಳ ಹಿಂದೆಯೇ ತೆಗ್ಗುಗಳನ್ನು ತೆಗೆಯಲಾಯಿತು. ಆದರೆ ತೆಗ್ಗು ತೆಗೆಯಲು ಕಾರಣಗಳೇನು ಎಂಬುದು ಇದುವರೆಗೆ ಗೊತ್ತಾಗಿಲ್ಲ~ ಎಂದು ಮಳಿಗೆಯೊಂದರ ಮಾಲೀಕ ನಾಗರಾಜ್ ಹೇಳಿದರು.`ಸಾಮಾನ್ಯವಾಗಿ ಸರ್ಕಾರಿ ಕಚೇರಿ ಎದುರು ಅನಗತ್ಯವಾಗಿ ವಾಹನ ನಿಲುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಯಾರಿಗೂ ಭಯವಿಲ್ಲ. ಸರ್ಕಾರಿ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿದರೆ, ವಾಹನಗಳು ಸುರಕ್ಷಿತವಾಗಿರುತ್ತದೆ. ಯಾರೂ ಕದಿಯುವುದಿಲ್ಲ ಎಂದು ಜನರು ನಂಬಿದ್ದಾರೆ. ಸರ್ಕಾರಿ ಅಧಿಕಾರಿಗಳು ಈ ಎಲ್ಲ ಅಂಶಗಳನ್ನು ಗಮನಿಸಬೇಕಾದ ಅಗತ್ಯವಿದೆ~ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.