ಶನಿವಾರ, ಏಪ್ರಿಲ್ 1, 2023
23 °C

ಟಿಪ್ಪು ಕಾಲದ ಸೂರ್ಯ ಗಡಿಯಾರ!

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಟಿಪ್ಪು ಕಾಲದ ಸೂರ್ಯ ಗಡಿಯಾರ!

ಸಮಯ (ಟೈಮ್)ನೋಡಲು ಈಗಿನಂತೆ ಗಡಿಯಾರ ಇಲ್ಲದ ಕಾಲದಲ್ಲಿ ಟಿಪ್ಪುಸುಲ್ತಾನ್ ಸೂರ್ಯ ಚಲಿಸುವ ದಿಕ್ಕು ಆಧರಿಸಿ ಸಮಯ ತಿಳಿದುಕೊಳ್ಳುವ ಸಲುವಾಗಿ ಗಡಿಯಾರಗಳನ್ನು ಸ್ಥಾಪಿಸಿದ್ದರು.ಶ್ರೀರಂಗಪಟ್ಟಣದಲ್ಲಿ ಟಿಪ್ಪು ನಿರ್ಮಿಸಿರುವ (1784) ಜಾಮಿಯಾ ಮಸೀದಿ ಹಾಗೂ ತಂದೆ ಹೈದರ್ ಅಲಿ ಸಮಾಧಿ ಸ್ಥಳ ಗುಂಬಸ್‌ಗಳಲ್ಲಿ ತಲಾ ಒಂದೊಂದು ಸೂರ್ಯ ಗಡಿಯಾರಗಳಿವೆ. ಕಡುಗಪ್ಪು ಕಲ್ಲಿನಲ್ಲಿ ಈ ಗಡಿಯಾರಗಳನ್ನು ರಚಿಸಲಾಗಿದೆ. ಐದು ಅಡಿ ಎತ್ತರದ ಸ್ತಂಭಗಳ ಮೇಲೆ ಇವುಗಳನ್ನು ಇರಿಸಲಾಗಿದೆ. ಜಾಮಿಯಾ ಮಸೀದಿ ಟೆರೇಸಿನ ಮೇಲಿರುವ ಗಡಿಯಾರ ವೃತ್ತಾಕಾರದಲ್ಲಿದ್ದರೆ, ಗುಂಬಸ್ ಬಳಿಯ ಗಡಿಯಾರ ಚೌಕಾಕಾರದಲ್ಲಿದೆ. ಅರಬ್ ದೇಶಗಳಲ್ಲಿ ಬಳಕೆಯಲ್ಲಿದ್ದ ಗಡಿಯಾರಗಳ ಮಾದರಿಯಲ್ಲೇ ಇಲ್ಲಿ ಸೂರ್ಯ ಗಡಿಯಾರ ಸ್ಥಾಪಿಸಲಾಗಿದೆ. ಪ್ರತಿ ಗಡಿಯಾರದಲ್ಲಿ ಎಂಟು ನೇರ ಗೆರೆಗಳಿವೆ. ಕೊನೆಯಲ್ಲಿ ದಿಕ್ಕು ಸೂಚಕವನ್ನು ಪರ್ಶಿಯನ್ ಭಾಷೆಯಲ್ಲಿ ಕೆತ್ತಲಾಗಿದೆ.ಒಂದೊಂದರಲ್ಲಿ 19 ವೃತ್ತಗಳಿವೆ. ಮಧ್ಯದಲ್ಲಿ ಒಂದು ಅಂಗುಲ ಆಳದಗುಂಡಿ ಇದೆ. ಈ ಗುಂಡಿಯಲ್ಲಿ ಸೂರ್ಯನ ಶಾಖಕ್ಕೆ ಸಂಕುಚಿತ- ವಿಕಸನ (ಫ್ಲೆಕ್ಸಿಬಲ್) ಗುಣವುಳ್ಳ ಲೋಹದ ಕಡ್ಡಿ ಅಳವಡಿಸಲಾಗುತ್ತಿತ್ತು. ಈ ಕಡ್ಡಿಯ ನೆರಳು ಚಲಿಸುವ ದಿಕ್ಕು ಆಧರಿಸಿ ಸಮಯವನ್ನು ಗುರುತಿಸುವ ಹಿಡಿಯುವ ಪದ್ಧತಿ ಚಾಲ್ತಿಯಲ್ಲಿತ್ತು.  ಮುಸ್ಲಿಂ ಸಂಪ್ರದಾಯದ ಪ್ರಕಾರ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಪದ್ಧತಿ ಇದೆ. ಪ್ರಾರ್ಥನಾ ಸಮಯವನ್ನು  ತಿಳಿಯಲು ಈ ಗಡಿಯಾರವನ್ನೇ ಅವಲಂಬಿಸಿದ್ದರು. ಈ ಗಡಿಯಾರ ತೋರಿಸುವ ಸಮಯ ಆಧರಿಸಿ ಸಿಪಾಯಿಗಳು ತಮ್ಮ ಪಾಳಿ ಬದಲಿಸುತ್ತಿದ್ದರು. ಟಿಪ್ಪು ಸುಲ್ತಾನ್ ಈ ಗಡಿಯಾರಗಳಿಗೆ ಚಿನ್ನದ ಕಡ್ಡಿಗಳನ್ನು ಅಳವಡಿಸಿದ್ದರೆಂಬ ಮಾತೂ ಇದೆ.ಸೂರ್ಯ ಗಡಿಯಾರಗಳು ಚಾಲ್ತಿಗೆ ಬರುವ ಮುನ್ನ ಚೀಲಕ್ಕೆ ಮರಳು ತುಂಬಿ, ರಂಧ್ರ ಕೊರೆದು ಅದರಿಂದ ಬೀಳುವ ಮರಳು ಆಧರಿಸಿ ಸಮಯ ಹೇಳುವ ಪದ್ಧತಿ ಇತ್ತು. ನೀರಿನ ಕಡಾಯಿ ಒಳಗೆ ಬಟ್ಟಲಾಕಾರದ ನೀರು ತುಂಬಿದ ಪಾತ್ರೆ ಇಡಲಾಗುತ್ತಿತ್ತು. ಆ ಪಾತ್ರೆಯನ್ನು ನೀರಿನಲ್ಲಿ ಇಟ್ಟ ಹಾಗೂ ಅದು ಮುಳುಗಿದ ಸಮಯದ ಅಂತರದಿಂದ ವೇಳೆಯನ್ನು ಅಂದಾಜು ಮಾಡಲಾಗುತ್ತಿತ್ತು. ಆದರೆ ಈ ಎರಡೂ ಪದ್ಧತಿಗಳು ಹಗಲು ಹೊತ್ತಿನಲ್ಲಿ ಹೆಚ್ಚು ಬಳಕೆಯಲ್ಲಿದ್ದವು.16ನೇ ಶತಮಾನದಲ್ಲಿ ಈ ಸೂರ್ಯ ಗಡಿಯಾರಗಳನ್ನು ವೇಳೆ ತಿಳಿಯಲು ಮಂದಿರ ಮಸೀದಿಗಳಲ್ಲಿ ಬಳಸುವ ವಾಡಿಕೆಯಿತ್ತು.ಫ್ರಾನ್ಸ್‌ನಿಂದ ಟಿಪ್ಪು ಸುಲ್ತಾನನಿಗೆ ಅಧುನಿಕ ಗಡಿಯಾರ ಬಳುವಳಿಯಾಗಿ ಬರುವವರೆಗೆ ಆತ ಸೂರ್ಯ ಗಡಿಯಾರವನ್ನೇ ಅವಲಂಬಿಸಿದ್ದರು ಎನ್ನಲಾಗಿದೆ. ಆನಂತರ ಸೂರ್ಯ ಗಡಿಯಾರಗಳ ಬಳಕೆ ನಿಂತು ಹೋಯಿತು. ಫ್ರಾನ್ಸ್‌ನ ಗಡಿಯಾರ ರಚನಾ ತಂತ್ರವನ್ನು ಸವಾಲಾಗಿ ಸ್ವೀಕರಿಸಿದ ಟಿಪ್ಪು ತನ್ನ ಆಸ್ಥಾನದ ಅಕ್ಕಸಾಲಿಗರಿಂದ ಅದೇ ಮಾದರಿಯನ್ನು ತಯಾರಿಸಿ ಬ್ರಿಟಿಷರಿಗೆ ಉಡುಗೊರೆ ನೀಡಿದ್ದರೆಂದು’ ಎಂದು ಇತಿಹಾಸಕಾರ ಪ್ರೊ. ಕರಿಮುದ್ದೀನ್ ಹೇಳುತ್ತಾರೆ.ಈ ಪಾರಂಪರಿಕ ಸೂರ್ಯ ಗಡಿಯಾರಗಳು ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ನಿಂತಿವೆ. ದಿನದಿಂದ ದಿನಕ್ಕೆ ಮಾಸುತ್ತಿವೆ.ಜಾಮಿಯಾ ಮಸೀದಿ ಹಾಗೂ ಗುಂಬಸ್ ಎರಡೂ ಸ್ಮಾರಕಗಳು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ (ಎಎಸ್‌ಐ) ವ್ಯಾಪ್ತಿಯಲ್ಲಿವೆ. ಈ ಸ್ಮಾರಕಗಳ ಅವಿಭಾಜ್ಯ ಅಂಗವಾಗಿರುವ ಸೂರ್ಯ ಗಡಿಯಾರಗಳನ್ನು ಸಂರಕ್ಷಿಸುವ ಹಾಗೂ ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.