ಗುರುವಾರ , ಮೇ 28, 2020
27 °C

ಟಿಪ್ಪು ಮುಸ್ಲಿಂ ಧರ್ಮಕ್ಕೆ ಸೀಮಿತ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಎಲ್ಲ ಧರ್ಮದವರನ್ನು ಸಮಾನವಾಗಿ ಕಂಡು ನಾಡು, ನುಡಿಗಾಗಿ ಶ್ರಮಿಸಿದ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಅವರನ್ನು ಕೇವಲ ಮುಸ್ಲಿಂ ನಾಯಕನಾಗಿ ಬಿಂಬಿಸಿರುವುದು ಇತಿಹಾಸಕ್ಕೆ ಮಾಡಿದ ಅಪಮಾನ ಎಂದು ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ವಿಷಾದಿಸಿದರು. ನಗರದ ಮರಳೂರು ಬಡಾವಣೆಯಲ್ಲಿ ಸೋಮವಾರ ಬಾಬ ಟಿಪ್ಪು ಸುಲ್ತಾನ್ ಯುವಕ ಸಂಘ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಉದ್ಘಾಟಿಸಿದ ಅವರು ಮಾತನಾಡಿದರು.ಮನುವಾದಿಗಳ ವಿರುದ್ಧ ಹೋರಾಡಲು ಮುಸ್ಲಿಮರು ಮತ್ತು ದಲಿತರು ಒಂದುಗೂಡಬೇಕಾದ ಅನಿವಾರ್ಯತೆ ಇದೆ. ದಲಿತರ ಮತ್ತು ಮುಸ್ಲಿಮರ ಆಹಾರ ಪದ್ಧತಿ ಕಸಿದುಕೊಳ್ಳಲು ಮನುವಾದಿಗಳು ಸಂಚು ಹೂಡಿದ್ದಾರೆ. ಇದಕ್ಕೆ ಅಂತ್ಯ ಹಾಡಲು ಮುಸ್ಲಿಮರು ಮತ್ತು ದಲಿತರು ರಾಜಕೀಯವಾಗಿ ಸಂಘಟಿತರಾಗಬೇಕು ಎಂದರು. ದಲಿತರು, ಮುಸ್ಲಿಮರು ಎರಡು ಕಣ್ಣುಗಳಿದ್ದಂತೆ. ಈ ಸಮುದಾಯವನ್ನು ನಿರ್ಲಕ್ಷ್ಯಿಸಿದರೆ ಯಾರಿಗೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಬಾಬ ಟಿಪ್ಪು ಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಸಾದಿಖ್ ಪಾಷ ಹೇಳಿದರು.ಸಂಘದ ಉಪಾಧ್ಯಕ್ಷ ಎಂ.ಡಿ.ರಫೀಕ್, ಗಾಂಧಿರಾಜ್, ಗೋಪಾಲ್ ಕೆಸರುಮಡು, ಕೃಷ್ಣಪ್ಪ, ಸಿರಾವರ ಶಿವಮೂರ್ತಿ, ಕಲಂದರ್, ಜಾವಿದ್, ಅಸ್ಗರ್, ಜಾಕೀರ್, ಮುದಾಸೀರ್, ರಹಮತ್ ಇನ್ನಿತರರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ದೇವರಾಜ ಅರಸು ಮುಖ್ಯ ರಸ್ತೆಯಿಂದ ಮರಳೂರು ದಿಣ್ಣೆಯ ರಹಮತ್ ನಗರದವರೆಗೆ ಟಿಪ್ಪು ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು.ಬ್ರಹ್ಮಚೈತನ್ಯರ ಆರಾಧನೆ

ಮಧುಗಿರಿ: ತಾಲ್ಲೂಕಿನ ತಗ್ಗೀಹಳ್ಳಿ ಗ್ರಾಮದ ರಾಮಕೃಷ್ಣಾಶ್ರಮದಲ್ಲಿ ಮೂರು ದಿನ ಬ್ರಹ್ಮಚೈತನ್ಯರ ಆರಾಧನಾ ಮಹೋತ್ಸವ ಜರುಗಿತು. ಆಶ್ರಮದ ಅಧ್ಯಕ್ಷ ಸ್ವಾಮಿ ಲಕ್ಷ್ಮೀನಾರಾಯಣಜೀ ಹಾಗೂ ರಮಾನಂದ ಚೈತನ್ಯಜೀ ನೇತೃತ್ವದಲ್ಲಿ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ  ಅಷ್ಟೋತ್ತರ, ಗಣಹೋಮ, ಏರ್ಪಡಿಸಲಾಗಿತ್ತು.ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಯೋಗೀಶ್ವಾರಾನಂದಜೀ ಮಹಾರಾಜ್ ಆಶೀರ್ವಚನ ನೀಡಿದರು. ನಿಟ್ರಹಳ್ಳಿ ವಿಶ್ವಕರ್ಮ ಸಂಪನ್ಮೂಲ ಮಠದ ನೀಲಕಂಠಾಚಾರ್ಯ ಸ್ವಾಮೀಜಿ, ಎಂ.ಕುಪೇಂದ್ರಪ್ಪ, ಎಂ.ಜಿ.ಶ್ರೀನಿವಾಸಮೂರ್ತಿ, ಜಿ.ಸಿದ್ದಗಂಗಪ್ಪ, ಮಹಲಿಂಗೇಶ್, ಜಿ.ಎಸ್.ಜಗದೀಶ್‌ಕುಮಾರ್, ದತ್ತಾತ್ರೇಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.