`ಟಿಪ್ಪು ವಿವಿ ಸ್ಥಾಪಿಸಿದರೆ ದೇಶ ವಿಭಜನೆ'

7

`ಟಿಪ್ಪು ವಿವಿ ಸ್ಥಾಪಿಸಿದರೆ ದೇಶ ವಿಭಜನೆ'

Published:
Updated:
`ಟಿಪ್ಪು ವಿವಿ ಸ್ಥಾಪಿಸಿದರೆ ದೇಶ ವಿಭಜನೆ'

ದಾವಣಗೆರೆ:  `ಟಿಪ್ಪು ಸುಲ್ತಾನ್ ಹೆಸರಿನ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ದೇಶ ವಿಭಜನೆ ಆಗುವುದು ಖಚಿತ. ಅದಕ್ಕಾಗಿ ಎಲ್ಲರೂ ಶಾಂತಿಯುತ ಹೋರಾಟ ನಡೆಸಿ ವಿವಿ ಸ್ಥಾಪನೆಯನ್ನು ತಡೆಗಟ್ಟಬೇಕು' ಎಂದು ಖ್ಯಾತ ಸಂಶೋಧಕ, ವಿದ್ವಾಂಸ ಡಾ.ಎಂ. ಚಿದಾನಂದ ಮೂರ್ತಿ ಕರೆ ನೀಡಿದರು.ನಗರದಲ್ಲಿ `ವರ್ತಮಾನ ಫೋರಂ ಆಫ್ ಇಂಟಲೆಕ್ಚುವಲ್ ಡಿಬೇಟ್' ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಲಾದ `ಟಿಪ್ಪು ಹೆಸರಿನ ವಿವಿ ಸ್ಥಾಪನೆಯ ಸಾಧಕ -ಬಾಧಕಗಳು' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾಲಯ ಬೇಡ. ಬೇಕಿದ್ದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಶಿಶುನಾಳ ಷರೀಫ, ಸಂತ ಕಬೀರರ ಹೆಸರಿನಲ್ಲಿ ಎಲ್ಲರಿಗೂ ಮುಕ್ತವಾಗಿರುವ ವಿವಿ ತೆರೆಯಲಿ' ಎಂದರು.`ಟಿಪ್ಪು ಪ್ರಕಾರ, ಒಂದೋ ಕುರ್‌ಆನ್ ಒಪ್ಪಿಕೊಳ್ಳಬೇಕು. ಇಲ್ಲವಾದರೆ ಖಡ್ಗಕ್ಕೆ ತಲೆಬಾಗಬೇಕು. ಇದನ್ನು ಅನೇಕ ಶಾಸನಗಳಲ್ಲಿ ಬರೆಸಿದ್ದಾನೆ. ಮಾತ್ರವಲ್ಲ ಕಾಫೀರರನ್ನು (ನಾಸ್ತಿಕರು) ನಾಶಪಡಿಸಲು ಅಲ್ಲಾಹನ ಆಜ್ಞೆಯಾಗಿದೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದು ತನ್ನ ಪತ್ರಗಳಲ್ಲಿ ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಲಂಡನ್‌ನಲ್ಲಿ ಹರಾಜಿನ ಮೂಲಕ ಉದ್ಯಮಿ ವಿಜಯ್ ಮಲ್ಯ ಖರೀದಿಸಿದ ಖಡ್ಗದಲ್ಲಿಯೂ ಅದೇ ಬರಹವಿದೆ. ಆತನ ಕ್ರೂರ ಕೃತ್ಯಗಳನ್ನು ಅವನ ಪುತ್ರನೇ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ' ಎಂದು ಉಲ್ಲೇಖಿಸಿದರು.ಆತ ದೇವಸ್ಥಾನಗಳಿಗೆ ದತ್ತಿ ಕೊಟ್ಟದ್ದು ನಿಜ. ತನಗೆ ಕೆಟ್ಟದ್ದಾಗುತ್ತದೆ ಎಂಬ ಸೂಚನೆ ಬಂದಾಗ ಇಂದಿನ ರಾಜಕಾರಣಿಗಳ ರೀತಿ ಕೊಟ್ಟಿದ್ದಾನೆಯೇ ಹೊರತು ನಿಜವಾದ ಮನಸ್ಸಿನಿಂದ ಅಲ್ಲ ಎಂದು ವ್ಯಾಖ್ಯಾನಿಸಿದರು.ವಿವಿ ಸ್ಥಾಪನೆಯಿಂದ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಕಚ್ಚಾಡುವಂತಾಗಬಾರದು. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾದರೆ ಮುಂದೆ ಪೂರ್ಣ ಇಸ್ಲಾಮೀಕರಣ ಆಗಿ, ದೇಶದ ಸಂಸ್ಕೃತಿ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.`ಈ ಬಗ್ಗೆ ಮಾತನಾಡಿದಾಗ ನನ್ನನ್ನು ಕೋಮುವಾದಿ, ಚಡ್ಡಿ ಎಂದು ಜರೆಯಲಾಗುತ್ತಿದೆ. ಮುಸ್ಲಿಂ ಸಂಘಟನೆಯೊಂದು ನನ್ನ ವಿರುದ್ಧ ಮೊಕದ್ದಮೆ ದಾಖಲಿಸಿದೆ. ನ್ಯಾಯಾಲಯಕ್ಕೆ ನಾನೇ ಹೋಗಿ ವಾಸ್ತವಾಂಶ ಮನವರಿಕೆ ಮಾಡುತ್ತೇನೆ' ಅವರು ತಿಳಿಸಿದರು.ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಮಾತನಾಡಿ, `ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ವಿವಿ ಸ್ಥಾಪನೆ ಪ್ರಸ್ತಾವ ಇಟ್ಟಿದ್ದಾರೆ. ಮುಸ್ಲಿಮರಿಗಾಗಿ ಸ್ಥಾಪಿಸಿದ ಅಮಾನತ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆಸಿದ್ದಾರೆ. ಇದೀಗ ಟಿಪ್ಪು ವಿವಿ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ 5 ವರ್ಷಗಳ ಅವಧಿಗೆ ವರ್ಷಕ್ಕೆ ತಲಾ ರೂ 300 ಕೋಟಿಯಂತೆ ರೂ 1,500 ಕೋಟಿ ಪಡೆದು ಖಾಸಗಿ ಸಹಭಾಗಿತ್ವದಲ್ಲಿ ವಿವಿ ಸ್ಥಾಪನೆಗೆ ಮುಂದಾಗಿದ್ದಾರೆ. ಇದರ ನಿಜವಾದ ಲಾಭ ಯಾರಿಗೆ' ಎಂದು ಪ್ರಶ್ನಿಸಿದರು.ಟಿಪ್ಪು ಹೆಸರಿನ ಮುಸ್ಲಿಂ ವಿವಿ ತೆರೆದು ವಿವಾದಕ್ಕೆ ಯಾಕೆ ಅವಕಾಶ ಮಾಡಬೇಕು? ಹಿಂದೆ ಆಲಿಘರ್ ವಿವಿ ಸ್ಥಾಪಿಸಿದ ಪರಿಣಾಮ ದೇಶ ವಿಭಜನೆ ಆಯಿತು. ರಾಷ್ಟ್ರೀಯ ಏಕತೆಗೆ ಭಂಗ ತರುವ ವಿವಿ ಸ್ಥಾಪನೆ ಆಗಲೇಬಾರದು. ಅದಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕು. ಪ್ರತಿ ಮನೆಯಿಂದ ಪತ್ರ ಚಳವಳಿ ಆಗಬೇಕು ಎಂದು ಅವರು ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry