`ಟಿಪ್ಪು ವಿಶ್ವವಿದ್ಯಾನಿಲಯ: ವಿರೋಧ ಸಲ್ಲ'

7

`ಟಿಪ್ಪು ವಿಶ್ವವಿದ್ಯಾನಿಲಯ: ವಿರೋಧ ಸಲ್ಲ'

Published:
Updated:

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾನಿಲಯಕ್ಕೆ, ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವುದರ ಹಿಂದೆ ಓಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂದು ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ ಆರೋಪಿಸಿದ್ದಾರೆ. ಈ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬಾರದು ಎಂದಿರುವ ಬಿಜೆಪಿ, ಆರ್‌ಎಸ್‌ಎಸ್ ನಿಲುವು ಜನ ವಿರೋಧಿ ಆಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.ಟಿಪ್ಪು ಹಿಂದೂಗಳ ವಿರೋಧಿ ಅಥವಾ ಇಲ್ಲಿನ ನೆಲ, ಕನ್ನಡ ಭಾಷೆಯ ವಿರೋಧಿ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಟಿಪ್ಪು ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುವುದೂ ಸರಿಯಲ್ಲ. ಹಿಂದೂ ಅಥವಾ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯ ಸ್ಥಾಪಿಸಿದಾಗ ಅದರಲ್ಲಿ ಏನಾದರೂ ತೊಡಕುಗಳು ಇವೆ ಎನ್ನುವುದಾದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸರಿಯಾದ ಮಾರ್ಗ ಎಂದು ತಿಳಿಸಿದರು.ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅಲ್ಪಸಂಖ್ಯಾತರ ವಿವಿ ಸ್ಥಾಪನೆಗೆ ಮತ್ತು ಟಿಪ್ಪು ಹೆಸರಿಡುವುದಕ್ಕೆ ವಿರೋಧಿಸುತ್ತಿದ್ದಾರೆ. ಸಾಮರಸ್ಯ ಕದಡುವ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಟಿಪ್ಪು ಮಾಡಿರುವ ಹಲವಾರು ಜನಪರ ಕೆಲಸಗಳನ್ನು ಮರೆಮಾಚುವಂತಹ ಕೆಲಸವೂ ನಡೆಯುತ್ತಿದೆ. ಜನರಿಗೆ ಅನುಕೂಲ ಮತ್ತು ಸ್ವಾವಲಂಬಿ ಬದುಕನ್ನು ಕಲ್ಪಿಸಿಕೊಟ್ಟ ಟಿಪ್ಪು ಹೆಸರನ್ನು ವಿವಿಗೆ ನಾಮಕರಣ ಮಾಡುವುದು ಬೇಡ ಎನ್ನುವ ವಾದವು ಈ ನೆಲಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.ಚಿಂತನಾ ಸಭೆ ನಾಳೆ: ರೈತರ ಬದುಕಿನ ರಕ್ಷಣೆ ಮತ್ತು ವ್ಯವಸ್ಥೆಯನ್ನು ಆರೋಗ್ಯಯುತವಾಗಿ ಕಟ್ಟುವ ದೃಷ್ಟಿಯಿಂದ ಚಿಂತನಾ ಸಭೆಯನ್ನು ಡಿ. 19ರಂದು ಬೆಳಿಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು. ರೈತ ಸಂಘದ ಎಸ್.ಸುರೇಶ್, ಶ್ರೀರಂಗಪಟ್ಟಣ ತಾಲ್ಲೂಕು ಘಟಕ ಅಧ್ಯಕ್ಷ ಪಿ.ಕೆಂಪೇಗೌಡ, ಬಾಬು, ಹಳುವಾಡಿ ನಾಗೇಂದ್ರ, ನಂಜುಂಡಪ್ಪ, ಬಳ್ಳಾರಿಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry