ಟಿಪ್ಪು ಸುಲ್ತಾನ್‌ ಏಕೆ ಈಗಲೂ ಪ್ರಸ್ತುತ?

ಶುಕ್ರವಾರ, ಮಾರ್ಚ್ 22, 2019
21 °C
ತನ್ನ ಕಾಲದ ಆಂತರಿಕ ಸವಾಲುಗಳನ್ನು ಟಿಪ್ಪು ಎದುರಿಸಿದ ಬಗೆಯೇ ವಿವಾದಗಳ ಮೂಲ

ಟಿಪ್ಪು ಸುಲ್ತಾನ್‌ ಏಕೆ ಈಗಲೂ ಪ್ರಸ್ತುತ?

Published:
Updated:

ಎರಡು ಶತಮಾನಗಳ ನಂತರ ಟಿಪ್ಪುವಿನ ಬದುಕನ್ನು ನೋಡುವ ನಾವು ಪರಸ್ಪರ ವಿರುದ್ಧವಾಗಿರುವ ಎರಡು ನಿಲುವುಗಳಲ್ಲಿ ಒಂದನ್ನು ಅಪ್ಪಿಕೊಳ್ಳುವ ಸಾಧ್ಯತೆ ಇದೆ. ಟಿಪ್ಪು ಮತಾಂಧನೋ ಅಥವಾ ಸ್ವಾತಂತ್ರ್ಯ ಹೋರಾಟಗಾರನೋ ಎಂಬುದನ್ನು ನಿರ್ಧರಿಸುವುದು ನಮ್ಮ ವರ್ತಮಾನದ ರಾಜಕೀಯ ಆಯ್ಕೆಗಳೇ ಹೊರತು ಇತಿಹಾಸದಲ್ಲಿ ದಾಖಲಾದ ವಾಸ್ತವಗಳಲ್ಲ!ಹದಿನೆಂಟನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟು ಎರಡು ಶತಮಾನಗಳ ನಂತರವೂ ಕರ್ನಾಟಕದಲ್ಲೊಂದು ಸಂಘರ್ಷಕ್ಕೆ ಕಾರಣವಾಗುತ್ತಿದ್ದಾನೆ. ಈ ವಿದ್ಯಮಾನ ಇತಿಹಾಸದ ಟಿಪ್ಪುವಿಗಿಂತ ಹೆಚ್ಚಾಗಿ ವರ್ತಮಾನದ ನಮ್ಮ ಸ್ಥಿತಿಯನ್ನು ವಿವರಿಸುತ್ತಿದೆ.ಸ್ವಾತಂತ್ರ್ಯ ಹೋರಾಟವನ್ನು ಮಟ್ಟ ಹಾಕಲು ಬ್ರಿಟಿಷರು ಒಡೆದು ಆಳುವ ತಂತ್ರವನ್ನು ಬಳಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ತಂತ್ರಗಾರಿಕೆಯಲ್ಲಿ ಹೆಚ್ಚು ಬಳಕೆಯಾದದ್ದು ಮತ–ಧರ್ಮಗಳ ನಡುವಣ ಒಡಕು. ಬ್ರಿಟಿಷರು ಭಾರತವನ್ನು ತೊರೆದ ನಂತರ ಇಲ್ಲಿನ ಬಹಳಷ್ಟು ಮಂದಿ ಎರಡು ಬಗೆಯ ವಿಭಜನೆಗಳನ್ನು ಎದುರಿಸಬೇಕಾಯಿತು. ಒಂದು ಬ್ರಿಟಿಷರು ಮತ್ತು ಭಾರತೀಯರ ನಡುವಣ ವಿಭಜನೆ. ಮತ್ತೊಂದು ಭಾರತದ ಒಳಗೇ ಇದ್ದ ವಿವಿಧ ಮತ–ಧರ್ಮಾನುಯಾಯಿಗಳ ನಡುವಣ ಭಿನ್ನತೆ.ಇನ್ನಾರಿಗಿಂತಲೂ ಹೆಚ್ಚಾಗಿ ಟಿಪ್ಪುವಿನ ನೆನಪು ಈ ದ್ವಂದ್ವವನ್ನು ಮತ್ತೆ ಜೀವಂತಗೊಳಿಸಿರುವುದಕ್ಕೆ ಮುಖ್ಯ ಕಾರಣ ತನ್ನ ಕಾಲದ ಸವಾಲುಗಳನ್ನು ಎದುರಿಸುವಲ್ಲಿ ಆತ ವಹಿಸಿದ ಪ್ರಮುಖ ಪಾತ್ರ. ಆತ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವನ್ನು ಯಾರೂ ಅಲ್ಲಗಳೆಯಲಾರರು. ವರ್ತಮಾನದಲ್ಲಿ ಟಿಪ್ಪುವನ್ನು ಟೀಕಿಸುತ್ತಿರುವವರು ಅವನ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ. ನಾಲ್ಕು ಮೈಸೂರು ಯುದ್ಧಗಳಲ್ಲಿ ಮೂರರಲ್ಲಿ ಆತ ಹೋರಾಡಿದ್ದು ಬ್ರಿಟಿಷರ ವಿರುದ್ಧ. ಮೂರನೇ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಆತನ ಮಕ್ಕಳನ್ನೇ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು. ಅದು ಅವನ ಹೋರಾಟದ ಉತ್ಸಾಹವನ್ನೇನೂ ಕುಗ್ಗಿಸಲಿಲ್ಲ. ಆ ಕಾಲದ ಹೆಚ್ಚಿನ ಎಲ್ಲಾ ಭಾರತೀಯ ರಾಜರೂ ಬ್ರಿಟಿಷರ ಜೊತೆಗೆ ಒಂದಲ್ಲಾ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ಟಿಪ್ಪು ಮಾತ್ರ ಯಾವುದೇ ರಾಜಿಗೂ ಸಿದ್ಧನಾಗಲಿಲ್ಲ.ತನ್ನ ಕಾಲದ ಆಂತರಿಕ ಸವಾಲುಗಳನ್ನು ಟಿಪ್ಪು ಎದುರಿಸಿದ ಬಗೆಯೇ ವಿವಾದಗಳ ಮೂಲ ನೆಲೆ. ಈ ಕುರಿತ ಚರ್ಚೆಗಳು ಬೆಳಕಿಗಿಂತ ಹೆಚ್ಚು ಬೆಂಕಿಯನ್ನು ಸೃಷ್ಟಿಸಿವೆ. ಸ್ಥಳೀಯ ಸಮಸ್ಯೆಗಳನ್ನು ಎದುರಿಸುವುದಕ್ಕೆ ಟಿಪ್ಪು ಅವಲಂಬಿಸಿದ ಮಾರ್ಗಗಳನ್ನು ಹೆಚ್ಚಾಗಿ ಗಮನಿಸಲಾಗಿಲ್ಲ. ಟಿಪ್ಪು ತನ್ನ ಅರ್ಥ ವ್ಯವಸ್ಥೆಯನ್ನು  ರೈತ ಮತ್ತು ರಾಜನ ನಡುವೆ ನೇರ ಸಂಬಂಧದ ಮೂಲಕ ರೂಪಿಸಿಕೊಂಡಿದ್ದ. ಈ ವ್ಯವಸ್ಥೆ ಜಾರಿಯಲ್ಲಿದ್ದ ಮೈಸೂರು ಸಂಸ್ಥಾನದ ಭಾಗಗಳಲ್ಲಿ ಆಡಳಿತಾತ್ಮಕ ಸ್ಥಿರತೆಯನ್ನು ತರುವುದಕ್ಕೂ ಆತನಿಗೆ ಸಾಧ್ಯವಾಯಿತು. ಈ ಸ್ಥಿರತೆಯ ಭಾಗವಾಗಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದ ಭಾಗಗಳಲ್ಲಿ ಆತ ದೇವಾಲಯಗಳಿಗೆ ಉಂಬಳಿಗಳನ್ನು ನೀಡುವ ಮೂಲಕ ಬೆಂಬಲಿಸಿದ. ಆತ ತನ್ನ ಕೊನೆಯ ಯುದ್ಧಕ್ಕಾಗಿ ರಣರಂಗಕ್ಕೆ ಇಳಿಯುವ ಮೊದಲು ತನ್ನ ಅರಮನೆಯ ಸಮೀಪವೇ ಇದ್ದ ರಂಗನಾಥ ಸ್ವಾಮಿ ದೇವಸ್ಥಾನದಿಂದ ತಂದ ತೀರ್ಥವನ್ನು ಸೇವಿಸಿದ್ದರ ಕುರಿತು ಬ್ರಿಟಿಷರ ಬರಹಗಳೇ ಹೇಳುತ್ತವೆ.ಈತನ ಸಾಮ್ರಾಜ್ಯಕ್ಕೆ ಸೇರಿದ್ದ ಕೆಲವು ಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಲಬಾರ್, ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ರೈತರು ಮತ್ತು ರಾಜನ ನಡುವೆ ಪ್ರಬಲ ಜಮೀನ್ದಾರರ ವರ್ಗವೊಂದಿತ್ತು. ಈ ಜಮೀನ್ದಾರರ ಅಡಿಯಲ್ಲಿದ್ದ ಗೇಣಿದಾರರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರು. ಸಾಗುವಳಿದಾರರೊಂದಿಗೆ ನೇರವಾದ ಸಂಬಂಧವನ್ನಿಟ್ಟುಕೊಳ್ಳುವ ಟಿಪ್ಪುವಿನ ಪ್ರಯತ್ನವನ್ನು ಈ ಜಮೀನ್ದಾರರು ಸಹಜವಾಗಿಯೇ ವಿರೋಧಿಸಿದರು. ಹೀಗೆ ತನ್ನ ಆಡಳಿತ ನೀತಿಯನ್ನು ವಿರೋಧಿಸಿದವರ ಮೇಲೆ ದಾಳಿ ನಡೆಸಲು ಸೇನೆಯನ್ನು ಕೊಂಡೊಯ್ಯುತ್ತಿದ್ದ. 18ನೇ ಶತಮಾನದ ಯುದ್ಧನೀತಿಗೆ ಅನುಗುಣವಾಗಿ ಈ ದಾಳಿಗಳು ಕ್ರೂರವಾಗಿರುತ್ತಿದ್ದವು. ಇದರಿಂದ ತಪ್ಪಿಸಿಕೊಳ್ಳಲು ದೇವಸ್ಥಾನಗಳಲ್ಲಿ ಅಡಗಿದರೆ ಟಿಪ್ಪುವಿನ ಸೇನೆ ಅಲ್ಲಿಗೂ ದಾಳಿಯಿಡುತ್ತಿದ್ದುದು ಸಹಜವಾಗಿತ್ತು. ವಿರೋಧಿಗಳನ್ನು ಮಣಿಸುವ ಈ ಯುದ್ಧದಲ್ಲಿ ದೇವಸ್ಥಾನಗಳಿಗೂ ಹಾನಿಯಾಗಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ.ಎರಡು ಶತಮಾನಗಳ ನಂತರ ಆತನ ಬದುಕನ್ನು ನೋಡುವ ನಾವು ಪರಸ್ಪರ ವಿರುದ್ಧವಾಗಿರುವ ಎರಡು ನಿಲುವುಗಳಲ್ಲಿ ಒಂದನ್ನು ಅಪ್ಪಿಕೊಳ್ಳುವ ಸಾಧ್ಯತೆ ಇದೆ. ಆತ ಬ್ರಿಟಿಷರ ವಿರುದ್ಧ ನಡೆಸಿದ ಎಡೆಬಿಡದ ಹೋರಾಟವನ್ನು ಪರಿಗಣಿಸಿದರೆ ನಾವು ಆತನನ್ನಷ್ಟೇ ಅಲ್ಲದೆ ಬ್ರಿಟಿಷ್ ವಸಾಹತುಶಾಹಿಯನ್ನು ವಿರೋಧಿಸಿ ಹೋರಾಡಿ ಮಡಿದ ಸಾವಿರಾರು ಮಂದಿಯನ್ನು ಹೆಮ್ಮೆ ಮತ್ತು ಗೌರವದಿಂದ ನೆನಪಿಸಿಕೊಳ್ಳಬಹುದು. ಕ್ರೌರ್ಯವೆಂಬುದು ಆ ಕಾಲದಲ್ಲಿ ಬ್ರಿಟಿಷರು ನಡೆಸಿದ ಯುದ್ಧಗಳ ಅವಿಭಾಜ್ಯ ಅಂಗವಾಗಿತ್ತು ಎಂಬುದನ್ನು ನಾವು ಮರೆಯಬಾರದು.1791ರ ಮಾರ್ಚ್ 4ರಂದು ನಡೆದ ಯುದ್ಧದಲ್ಲಿ ಈಗ ಹಳೆಯ ಬೆಂಗಳೂರಿನ ಭಾಗವೆಂದು ಗುರುತಿಸುವ ಹಲಸೂರು ಗೇಟ್ ಮತ್ತು ಕೆಂಗೇರಿ ಗೇಟ್ ನಡುವಣ ಪ್ರದೇಶದಲ್ಲಿ 2000 ಮಂದಿ ಮೈಸೂರಿಗರನ್ನು ಬ್ರಿಟಿಷರು ಕೊಂದರು. ಮಾರ್ಚ್ 21ರಂದು ಈಗಿನ ಸಿಟಿ ಮಾರ್ಕೆಟ್ ಪ್ರದೇಶದಲ್ಲಿರುವ ಕೋಟೆಯಲ್ಲಿ 1200 ಮಂದಿಯ ನರಮೇಧ ನಡೆಯಿತು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದರು. ಅದೇ ವರ್ಷ ಅಕ್ಟೋಬರ್ 19ರಂದು ನಡೆದ ನಂದಿ ಬೆಟ್ಟ ಮೇಲಿರುವ ಕೋಟೆಯಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಷರು ನಡೆಸಿದ ಅತ್ಯಾಚಾರ ಮತ್ತು ಕೊಲೆಗಳು 18ನೇ ಶತಮಾನದ ಯುದ್ಧನೀತಿಯ ಮಾನದಂಡವನ್ನು ಅನುಸರಿಸಿ ನೋಡಿದರೂ ಕ್ರೌರ್ಯದ ಪರಮಾವಧಿ ಎಂಬಂತೆ ಇತ್ತು. ಇತರ ಮೈಸೂರು ಯುದ್ಧಗಳಲ್ಲಿ ಮಡಿದವರಂತೆಯೇ ಈ ಎಲ್ಲಾ ಯುದ್ಧಗಳಲ್ಲಿ ಹತ್ಯೆಗೀಡಾದವರಲ್ಲಿ ಹಿಂದೂಗಳು ಮತ್ತು ಮುಸ್ಲಿಮರಿದ್ದರು.ಹದಿನೆಂಟನೇ ಶತಮಾನದ ನೀತಿಗಳಿಗೆ ಅನುಗುಣವಾಗಿ ಟಿಪ್ಪು ತನ್ನ ಸಾಮ್ರಾಜ್ಯವನ್ನು ನಿಯಂತ್ರಿಸುವುದಕ್ಕೆ ಅನುಸರಿಸಿದ ಮಾರ್ಗಗಳನ್ನು ಪರಿಗಣಿಸಿ ನೋಡಿದರೆ ಟಿಪ್ಪುವಿನ ಮತ್ತೊಂದು ಮುಖ ಕಾಣಿಸುತ್ತದೆ. ದಂಗೆಕೋರರನ್ನು ಮಟ್ಟಹಾಕಲು ಆತ ಬಳಸಿದ ಯುದ್ಧ ತಂತ್ರವನ್ನು 21ನೇ ಶತಮಾನದ ಮಾನದಂಡಗಳನ್ನು ಬಳಸಿದರೆ ಒಪ್ಪಲು ಸಾಧ್ಯವಿಲ್ಲ. ಆದರೆ 18ನೇ ಶತಮಾನದ ಯುದ್ಧಗಳು ಭಾರತದಲ್ಲಷ್ಟೇ ಏಕೆ ವಿಶ್ವದ ಎಲ್ಲೆಡೆಯೂ ಇದೇ ರೀತಿ ಇದ್ದವು. ಈ ಕ್ರೌರ್ಯ ಟಿಪ್ಪುವನ್ನು ಮತಾಂಧನನ್ನಾಗಿ ಚಿತ್ರಿಸುವುದಕ್ಕೆ ಬೇಕಿರುವ ಕಚ್ಚಾ ಸಾಮಗ್ರಿಯನ್ನು ಬ್ರಿಟಿಷರಿಗೆ ಒದಗಿಸಿತು ಎಂಬುದು ವಾಸ್ತವ. ಹೀಗೆ ಮಾಡು ವುದಕ್ಕಾಗಿ ಅವರು ದೇವಾಲಯಗಳಿಗೆ ಟಿಪ್ಪು ನೀಡಿದ ಉಂಬಳಿಗಳನ್ನು ಮತ್ತು ಹೈದರಾಬಾದ್ ನಿಜಾಮನ ಬಗ್ಗೆ ಅವನಿಗಿದ್ದ ವೈರತ್ವವನ್ನು ಕಡೆಗಣಿಸಿದರು.ಟಿಪ್ಪುವನ್ನು ಅರ್ಥ ಮಾಡಿಕೊಳ್ಳುವ ಈ ಎರಡು ವಿಧಾನಗಳಲ್ಲಿ ನಮ್ಮ ಆಯ್ಕೆಯನ್ನು ವರ್ತಮಾನದ ರಾಜಕೀಯ ಅಗತ್ಯಗಳು ನಿರ್ಧರಿಸುತ್ತವೆಯೇ ಹೊರತು ಇತಿಹಾಸದ ಸತ್ಯಗಳಲ್ಲ. ಹಿಂದೂಗಳನ್ನು ರಾಜಕೀಯವಾಗಿ ಒಂದುಗೂಡಿಸುವುದಕ್ಕಾಗಿ ಮತ್ತು ಪಶ್ಚಿಮದ ಸಾಂಸ್ಕೃತಿಕ ಆಧಿಪತ್ಯವನ್ನು ಕಡೆಗಣಿಸುವುದಕ್ಕಾಗಿ ಟಿಪ್ಪುವನ್ನು ಮತಾಂಧನೆಂಬಂತೆ ಚಿತ್ರಿಸುವುದು ತಾರ್ಕಿಕ. ಅಷ್ಟೇ ಅಲ್ಲ ಆತನ ಹುಟ್ಟುಹಬ್ಬವನ್ನು ಆಚರಿಸುವ ನಿರ್ಧಾರವನ್ನು ಮುಂದಿಟ್ಟುಕೊಂಡು ನಮ್ಮ ಹಳೆಯ ನಗರಗಳ ಬೀದಿಗಳಲ್ಲಿ ಹೊಸ ಯುದ್ಧಗಳನ್ನು ನಡೆಸುವುದಕ್ಕೆ ಸಮರ್ಥನೆಯೂ ಆಗಿಬಿಡುತ್ತದೆ.ಒಂದು ವೇಳೆ ನಾವು ವಸಾಹತುಶಾಹಿಯ ವಿರುದ್ಧದ ಹೋರಾಟವನ್ನು ಪರಿಗಣಿಸಿ ಮುಂದುವರಿದರೆ ಟಿಪ್ಪುವನ್ನಷ್ಟೇ ಅಲ್ಲದೆ ಬ್ರಿಟಿಷರ ವಿರುದ್ಧದ ಆತನ ಜೊತೆ ಮರಣವನ್ನಪ್ಪಿದ ಸಾವಿರಾರು  ಹಿಂದೂ–ಮುಸ್ಲಿಂ ಮೈಸೂರಿಗರನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣಗಳು ಅನಾವರಣಗೊಳ್ಳುತ್ತವೆ. ಈಗಿನ ಸಿಟಿ ಮಾರ್ಕೆಟ್‌ ಪ್ರದೇಶದಲ್ಲಿರುವ ಬೆಂಗಳೂರು ಕೋಟೆಯನ್ನು ವಶಪಡಿಸಿಕೊಂಡಿದ್ದ ನೆನಪಿಗೆ ಬ್ರಿಟಿಷರು ಅಳವಡಿಸಿರುವ ಒಂದು ಫಲಕವಿದೆ. ಬ್ರಿಟಿಷ್ ಸೇನೆಯು ಕೋಟೆಯೊಳಕ್ಕೆ ನುಗ್ಗಿದ ಸ್ಥಳದಲ್ಲೇ ಇರುವ ಫಲಕ ನೂರಾರು ವರ್ಷಗಳಿಂದ ಅಳಿಯದೇ ಉಳಿದುಕೊಂಡಿದೆ. ಕೋಟೆಯ ಮತ್ತೊಂದು ಬದಿಯಲ್ಲಿ ನಿಂತು ಬ್ರಿಟಿಷರ ದಾಳಿಯಿಂದ ಭಾರತವನ್ನು ಕಾಪಾಡುವುದಕ್ಕಾಗಿ ಟಿಪ್ಪುವಿನ ಜೊತೆಗೂಡಿ ಅಂದು ಹೋರಾಡಿ ಮಡಿದ ಮೈಸೂರಿನ ಯೋಧರು, ಸಾಮಾನ್ಯರು, ಹೆಂಗಸರು, ಮಕ್ಕಳ ನೆನಪಿಗಾಗಿ ಮತ್ತೊಂದು ಫಲಕ ಹಾಕುವುದಕ್ಕೆ ನಮ್ಮನ್ನು ತಡೆದದ್ದು ಅದಾವ ಶಕ್ತಿ?ಲೇಖಕ– ಪ್ರಾಧ್ಯಾಪಕ, ಸ್ಕೂಲ್‌ ಆಫ್‌ ಸೋಷಿಯಲ್‌ ಸೈನ್ಸಸ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry