ಸೋಮವಾರ, ಮೇ 23, 2022
20 °C

ಟಿಪ್ಪು, ಹೈದರ್ ಗುಂಬಸ್ ದ್ವಾರ ಸ್ತಂಭದಲ್ಲಿ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂನಲ್ಲಿರುವ ಟಿಪ್ಪು, ಹೈದರ್ ಅಲಿಖಾನ್ ಸಮಾಧಿ ಸ್ಥಳ ಗುಂಬಸ್‌ನ ದ್ವಾರ ಸ್ತಂಭದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ತಂಭದ ಬುಗುರಿ ಆಕಾರದ ರಚನೆ ಕುಸಿದು ಬಿದ್ದಿದೆ.ಗುಂಬಸ್‌ನ ಟಿಪ್ಪು ಸಮಾಧಿಗೆ ತೆರಳಲು ಮೆಟ್ಟಿಲು ಹತ್ತುವ ಸ್ಥಳದಲ್ಲಿನ ಎರಡು ಆಕರ್ಷಕ ಸ್ತಂಭಗಳ ಪೈಕಿ ಒಂದರಲ್ಲಿ ಬಿರುಕು ಮೂಡಿದೆ.ಚುರುಕಿ ಗಾರೆ ಚೆಕ್ಕೆಯಾಗಿ ಉದುರಿದ್ದು, ಸ್ಮಾರಕದ ಪಶ್ಚಿಮ ದ್ವಾರದ ಸ್ತಂಭದಲ್ಲಿ ಬಿರುಕು ಕಂಡು ಬಂದಿದೆ. ಸುಮಾರು 20 ಅಡಿ ಎತ್ತರದ ಸ್ತಂಭದ ತುತ್ತ ತುದಿಯಲ್ಲಿರುವ ಕುಸುರಿ ಕೆತ್ತನೆಯ ಭಾಗ ಶಿಥಿಲಾವಸ್ಥೆ ತಲುಪಿದೆ. ಒಳಗಿನ ಕಬ್ಬಿಣದ ಸರಳು ಕಾಣಿಸುತ್ತಿದ್ದು, ಇಂದೋ ನಾಳೆಯೋ ಕುಸಿಯುವ ಹಂತ ತಲುಪಿದೆ. ಬುಧವಾರ ಗುಂಬಸ್‌ಗೆ ಭೇಟಿ ನೀಡಿದ್ದ ವಕ್ಫ್ ಸಚಿವ ಡಾ.ಮುಮ್ತಾಜ್ ಅಲಿಖಾನ್ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ (ಎಎಸ್‌ಐ) ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.‘ಎಎಸ್‌ಐ ಸ್ಮಾರಕವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಗುಮ್ಮಟ ಮಸುಕಾಗಿದ್ದು, ಬಣ್ಣ ಬಳಿಯಬೇಕು. ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡಬೇಕು’ ಎಂದು ಆಗ್ರಹಿಸಿದರು. ‘ವರ್ಷದಲ್ಲಿ ಒಂದು ಸ್ಮಾರಕ ದುರಸ್ತಿಗೆ ಅವಕಾಶ ಇದೆ. ಟಿಪ್ಪು ಮಸೀದಿ, ಶ್ರೀರಂಗನಾಥಸ್ವಾಮಿ ದೇವಾಲಯ ದುರಸ್ತಿ ಮುಗಿದಿದ್ದು ಮುಂದಿನ ದಿನಗಳಲ್ಲಿ ಗುಂಬಸ್‌ಗೆ ಕಾಯಕಲ್ಪ ನೀಡಲಾಗುವುದು’ ಎಂದು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.