ಮಂಗಳವಾರ, ಆಗಸ್ಟ್ 11, 2020
27 °C
ಗುರು ದಲೈಲಾಮ ವಿಶ್ವಾಸ

ಟಿಬೆಟನ್ನರಿಗೆ ನ್ಯಾಯ ಸನ್ನಿಹಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಬೆಟನ್ನರಿಗೆ ನ್ಯಾಯ ಸನ್ನಿಹಿತ

ಬೆಂಗಳೂರು: ಚೀನಾದಲ್ಲಿ ರಾಜಕೀಯ ವ್ಯವಸ್ಥೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲೇ ಟಿಬೆಟನ್ನರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಅವರು ಅಭಿಪ್ರಾಯಪಟ್ಟರು. ಶುಕ್ರವಾರ ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಟಿಬೆಟ್‌ನಲ್ಲಿ ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಇನ್ನೂ 6 ತಿಂಗಳು ಅಥವಾ ಒಂದು ವರ್ಷದೊಳಗಾಗಿ ಪರಿಹಾರ ದೊರೆಯುವ ಭರವಸೆ ಇದೆ ಎಂದರು.ಭಾರತ ಬಹಳ ಪುರಾತನ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ದೇಶ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿಗೆ ಆಧುನಿಕತೆ ಅನಿವಾರ್ಯವಾಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ಮರೆಯಬಾರದು ಎಂದು ಹೇಳಿದರು.ಟಿಬೆಟ್ ಪ್ರಧಾನಿ ಲೋಬ್‌ಸ್ಯಾಂಗ್ ಸ್ಯಾಂಗಯ್ ಮಾತನಾಡಿ, `ನಮಗೆ ಚೀನಾ ಸರ್ಕಾರ ನೀಡುತ್ತಿರುವ ಕಿರುಕುಳ ನಿಜಕ್ಕೂ ಟಿಬೆಟ್‌ನ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯ. ನಾವು ಇದ್ದ ಪರಿಸ್ಥಿತಿಯಲ್ಲಿ ಭಾರತ ನಮ್ಮ ಕೈ ಬಿಡಲಿಲ್ಲ. ನಾವು ಭಾರತದಲ್ಲಿ ಅತಿಥಿಗಳಾಗಿದ್ದರೂ ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಸಹಾಯ ಹಾಗೂ ರಕ್ಷಣೆ ನೀಡಿವೆ.ಭಾರತದಂತೆ ನಾವೂ ಗಾಂಧಿ ಅವರ ಅಹಿಂಸೆಯ ತತ್ವವನ್ನೇ ಪಾಲಿಸುತ್ತಿದ್ದೇವೆ. ಇದರಿಂದಲೇ ನಮಗೆ ಸ್ವಾತಂತ್ರ್ಯ ದೊರೆಯಲಿದೆ' ಎಂದು ಆಶಯ ವ್ಯಕ್ತಪಡಿಸಿದರು.ಸಂಸದ ರಾಜೀವ್ ಚಂದ್ರಶೇಖರ್ ಮಾತನಾಡಿ, `ಸಂಸತ್‌ನಲ್ಲಿ ದಲೈ ಲಾಮಾ ಅವರು ಭಾಷಣ ಮಾಡಲು ಅನುಮತಿ ನೀಡುವಂತೆ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಅಜ್ಞಾತವಾಸದಲ್ಲಿರುವ ಟಿಬೆಟನ್ನರ ಸಹಾಯಕ್ಕೆ ಸದಾ ಸಿದ್ಧ' ಎಂದು ಹೇಳಿದರು.

`ಭಾರತವೇ ನನ್ನ ಮೊದಲ ಗುರು'

`ಭಾರತವೇ ನನ್ನ ಮೊದಲ ಗುರು, ನಾವು ಅದರ ಶಿಷ್ಯವೃಂದ. ಇಲ್ಲೇ ಹುಟ್ಟಿ ಬೆಳೆದ ನಾನು ಮಾನಸಿಕ ಹಾಗೂ ದೈಹಿಕವಾಗಿ ಸಂಪೂರ್ಣ ಭಾರತೀಯನಾಗಿದ್ದೇನೆ. ಬಿಹಾರದ ನಳಂದ ವಿಶ್ವವಿದ್ಯಾಲಯದಲ್ಲೇ ನನ್ನ ವಿದ್ಯಾಭ್ಯಾಸ ಮುಗಿದಿದ್ದು, ಭಾರತದ ಮೂಲ ಮಂತ್ರವಾದ ಅಹಿಂಸೆಯನ್ನೇ ಪಾಲಿಸುತ್ತಿದ್ದೇನೆ. ನನ್ನ ಪ್ರತಿಯೊಂದು ಆಲೋಚನೆ ಹಾಗೂ ಮಾಡುವ ಕಾರ್ಯಗಳಲ್ಲಿ ಕೇವಲ ನಳಂದಲ್ಲಿ ಕಲಿತ ವಿಚಾರಗಳೇ ತುಂಬಿವೆ. ಈ ಚಿಂತನೆಗಳೇ ನನ್ನ ಬೆಳವಣಿಗೆಗೆ ಕಾರಣ'.

-ದಲೈಲಾಮಾ,  ಟಿಬೆಟ್ ಧರ್ಮಗುರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.