ಟಿಬೆಟನ್ ಕ್ಯಾಂಪ್‌ನಲ್ಲಿ ಜಾತ್ರಾ ಸಡಗರ

7

ಟಿಬೆಟನ್ ಕ್ಯಾಂಪ್‌ನಲ್ಲಿ ಜಾತ್ರಾ ಸಡಗರ

Published:
Updated:

ಮುಂಡಗೋಡ: ಇಲ್ಲಿನ ಟಿಬೆಟನ್ ಕ್ಯಾಂಪ್ ನಂ.1ರ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದಲ್ಲಿ `ಜ್ಞಾನೋದಯ ಮಾರ್ಗದ ಹಂತಗಳು' ಕುರಿತು ಟಿಬೆಟನ್ ಧರ್ಮಗುರು ದಲೈ ಲಾಮಾ ಅವರ ಬೋಧನೆ ಗುರುವಾರ ಐದನೆ ದಿನವೂ ಮುಂದುವರಿಯಿತು.ಬೋಧನೆಗೂ ಮುನ್ನ ಬೌದ್ಧ ದೇವತೆಗಳಿಗೆ ದಲೈ ಲಾಮಾ ಪೂಜೆ ಸಲ್ಲಿಸಿದರು.  ಗುರುವಾರದವರೆಗೆ ಪೂಜಾ ಕಾರ್ಯದಲ್ಲಿ ದಲೈ ಲಾಮಾ ಪಾಲ್ಗೊಳ್ಳಲಿದ್ದಾರೆ. ನಂತರ ಕ್ಯಾಂಪ್ ನಂ.6ರಲ್ಲಿ ಪೂಜಾ ಕಾರ್ಯವನ್ನು ಮುಂದುವರಿಸಲಿದ್ದಾರೆ.ಜಾತ್ರಾ ಸಂಭ್ರಮ: ಟಿಬೆಟನ್ ಧರ್ಮಗುರು ದಲೈ ಲಾಮಾ ಆಗಮನದಿಂದ ಕ್ಯಾಂಪ್‌ನ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂದಿದ್ದು ಟಿಬೆಟನ್ ಸಾಂಪ್ರದಾಯಿಕ ಕಲೆಗೆ ವಿದೇಶಿಗರು ಮನಸೋತಿದ್ದಾರೆ.ಕ್ಯಾಂಪ್ ನಂ.1ರಲ್ಲಿ ಧರ್ಮಗುರುವಿನ ಭಾವಚಿತ್ರಗಳು, ಟಿಬೆಟನ್ ಪರಂಪರೆಯ ಪ್ರತೀಕದಂತಿರುವ ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ನವಿಲುಗರಿಯ ಬೀಸಣಿಕೆಗಳು, ಕಾರ್ಪೆಟ್‌ಗಳು ಹೀಗೆ ಒಂದಕ್ಕಿಂತ ಒಂದು ನೋಡುಗರನ್ನು ಆಕರ್ಷಿಸುತ್ತಿವೆ. ಟಿಬೆಟನ್‌ರು ತಮ್ಮ ಕಲೆಯನ್ನು ಪ್ರಚಾರಪಡಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದು ವಿದೇಶಿಯರು ಹೆಚ್ಚಾಗಿ ಖರೀದಿಯಲ್ಲಿ ನಿರತರಾಗಿರುವುದು ಕಂಡುಬಂತು.ಪೂಜಾ ಸಾಮಗ್ರಿಗಳಾದ ಶಂಖ, ಘಂಟೆ, ಜಪಮಾಲೆ, ವಿವಿಧ ಬಣ್ಣದ ದಾರಗಳಲ್ಲಿ ಮಣಿಗಳಿಂದ ಸಿದ್ದಪಡಿಸಲಾಗಿರುವ ಸರಗಳು, ಟಿಬೆಟ್ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿರುವ ಕೊರಳುದಾರ, ಬೌದ್ಧ ಗುರುವಿನ ಸಂದೇಶ ಸಾರುವ ಚಿತ್ರಪಟಗಳು, ಭಾವಚಿತ್ರದ ಕೀಚೈನ್ ಹೀಗೆ ಪ್ರತಿಯೊಂದರಲ್ಲಿ ಟಿಬೆಟನ್ ಕಲೆಯನ್ನು ಸಾರುತ್ತಿರುವ ವಸ್ತುಗಳ ಮಾರಾಟ ಭರದಿಂದ ಸಾಗಿದೆ.ಭಾರತೀಯ ಪ್ರವಾಸಿಗರು ಉಣ್ಣೆ ಬಟ್ಟೆಗಳತ್ತ ಹೆಚ್ಚಿನ ಆಸಕ್ತಿ ತೋರಿದರೆ ವಿದೇಶಿಯರು ಟಿಬೆಟನ್‌ರ ಸಾಂಪ್ರದಾಯಿಕ ಕಲೆ ಬಿಂಬಿಸುವ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry