ಟಿ.ವಿ. ತೆರೆ ಮೇಲಷ್ಟೇ ಅಲ್ಲ

7

ಟಿ.ವಿ. ತೆರೆ ಮೇಲಷ್ಟೇ ಅಲ್ಲ

Published:
Updated:

`ನೀವು ನೋಡಲು ಆಕರ್ಷಕವಾಗಿದ್ದೀರಾ? ವಯಸ್ಸು 25 ವರ್ಷದೊಳಗಿದ್ದು, ಕನ್ನಡ ಸ್ಪಷ್ಟವಾಗಿ ಬಲ್ಲವರಾಗಿದ್ದಲ್ಲಿ ತಡಮಾಡದೆ ನಮ್ಮ ವಿಳಾಸಕ್ಕೆ ನಿಮ್ಮ ಭಾವಚಿತ್ರದೊಂದಿಗೆ ಸ್ವ-ವಿವರಗಳನ್ನು ಕಳುಹಿಸಿರಿ....~ಕಿರುತೆರೆಯ ಪರದೆ ಮೇಲಿನ ಇಂಥದ್ದೊಂದು ಪ್ರಕಟಣೆ ಎಷ್ಟು ಆಕರ್ಷಕವಲ್ಲವೇ? ಟಿ.ವಿ ಎಂದರೆ ತೆರೆ ಮೇಲೆ ಮಿಂಚುವ ನಿರೂಪಕರು, ನಟ-ನಟಿಯರು. ಲಕ್ಷಾಂತರ ಜನ ನೋಡುವ ಟಿ.ವಿ ಪರದೆ ಮೇಲೆ ತಮ್ಮ ಮುಖವೂ ಕಾಣಬೇಕೆಂಬ ತುಡಿತ ಅನೇಕರದ್ದು. ಇನ್ನು ಟಿ.ವಿ ವೀಕ್ಷಕರಿಗೆ ತಮ್ಮಂದಿಗೆ ಮುಖಾಮುಖಿಯಾಗುವ ಮುಖಗಳು ಚಿರಪರಿಚಿತ.

ನಿರೂಪಕರು, ನಟ-ನಟಿಯರು ಮಾತ್ರವೇ ಈ ಲೋಕದ ವಿಶಿಷ್ಟ ವ್ಯಕ್ತಿಗಳಂತೆ ಕಾಣುತ್ತಾರೆ. ಆದರೆ ಟಿ.ವಿ ವಾಹಿನಿಗಳೆಂದರೆ ಪರದೆ ಮೇಲೆ ಕಾಣಿಸಿಕೊಳ್ಳುವವರು ಮಾತ್ರವಲ್ಲ. ಅದರ ಹಿಂದೆ ಶ್ರಮಪಡುವ ತಂಡಗಳದ್ದು ನಿಜವಾದ ಕೆಲಸ.ಸಿನಿಮಾಗಳಲ್ಲಿಯೂ ನಿರ್ದೇಶಕ, ಸಹ ನಿರ್ದೇಶಕ, ಸಹಾಯಕ ನಿರ್ದೇಶಕ, ಛಾಯಾಗ್ರಾಹಕ, ನೃತ್ಯ ನಿರ್ದೇಶಕ, ಚಿತ್ರಕಥೆಗಾರ, ಸಂಭಾಷಣೆಗಾರ, ಸಂಗೀತ ನಿರ್ದೇಶಕ, ಲೈಟ್‌ಬಾಯ್... ಹೀಗೆ ತೆರೆಮರೆಯ ಕೆಲಸಗಾರರ ಶ್ರಮ ಹೆಚ್ಚು. ಸಿನಿಮಾ ಸೃಷ್ಟಿಯಂತೆ ಟಿ.ವಿ ಧಾರಾವಾಹಿಯಲ್ಲ. ರಿಯಾಲಿಟಿ ಕಾರ್ಯಕ್ರಮಗಳದ್ದೂ ಇಂಥದ್ದೇ ಮತ್ತೊಂದು ಹಾದಿ.ಜನ್ಮದಿನಾಂಕದ ಲೆಕ್ಕಾಚಾರದಲ್ಲಿ ಟಿ.ವಿ ಹೊಸತೇನಲ್ಲ. ಆದರೆ ಅದರ ಸ್ವರೂಪ ಹೊಸತು. ಭಾರತದಲ್ಲಿ ಅದಕ್ಕೀಗ ಯೌವನದ ದಿನಗಳು. ಉಪಗ್ರಹ ಕ್ರಾಂತಿಯ ಬಳಿಕ ಹೊಸಜನ್ಮ ಪಡೆದ ಟಿ.ವಿ ವಾಹಿನಿಗಳ ಕಾರ್ಯಕ್ರಮಕ್ಕೀಗ ಎಳೆಯ ಪ್ರಾಯ. ತೆರೆ ಮೇಲೆ ಕಾಣಿಸಿಕೊಳ್ಳುವ ನಿರೂಪಕರು, ನಟ-ನಟಿಯರು, ತೆರೆ ಹಿಂದಿನ ತಂತ್ರಜ್ಞರು, ಬರಹಗಾರರು ಎಲ್ಲವೂ ಯುವಜನಮಯ.ಒಮ್ಮಮ್ಮೆ ಕೂದಲು ನೆರೆತ ವಯಸ್ಕರ ಹಾಗೆ ಕಾಣುವ ಕಿರುತೆರೆ ಇದ್ದಕ್ಕಿದ್ದಂತೆ ಅಪ್ರಬುದ್ಧ ಹುಡುಗನಂತೆ ವರ್ತಿಸುವುದೂ ಇದೇ ಕಾರಣಕ್ಕೆ! ಮಾಹಿತಿ-ಮನರಂಜನೆ-ಶಿಕ್ಷಣ ಎಂಬ ಮಂತ್ರ ಜಪಿಸುವ ಕಿರುತೆರೆಯ ತಪ್ಪು-ಒಪ್ಪುಗಳ ಹಿಂದೆ, ಟಿಆರ್‌ಪಿ ಎಂಬ ಮಾರುಕಟ್ಟೆಯ ಪೀಕಲಾಟದ ಹಿಂದೆ, ಪೈಪೋಟಿಯ ಗುದ್ದಾಟದ ಹಿಂದಿರುವುದು ಯುವ ಮನಸ್ಸುಗಳು.  ಕನ್ನಡದಲ್ಲಿ ದೂರದರ್ಶನ ಒಂದೇ ಚಾನೆಲ್ ಇದ್ದಾಗ ಕಾಲಿಟ್ಟ ಉದಯ ಟೀವಿಯ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. ನಂತರ ಈಟೀವಿಯ ಧಾರಾವಾಹಿಗಳು ಮತ್ತೊಂದು ವರ್ಗದ ಜನರಿಗೆ ಹೆಚ್ಚು ಆಪ್ತವಾದವು. ಈಗ ಸುವರ್ಣ, ಝೀ ಕನ್ನಡ, ಕಸ್ತೂರಿ ಹೀಗೆ ಮನರಂಜನೆಗೆ ಮೀಸಲಾದ ವಾಹಿನಿಗಳು ದಿನ ನಿತ್ಯ ಹೊಸತನದ ಕಾರ್ಯಕ್ರಮಗಳನ್ನು ನೀಡುವ ಪ್ರಯತ್ನದಲ್ಲಿವೆ.ಸುದ್ದಿ ಸಮಯವನ್ನು ಹೊರಗಟ್ಟಿ ಪರಿಪೂರ್ಣ ಮನರಂಜನೆಯ ಚಾನೆಲ್ ಆಗುತ್ತಿರುವ ಈ ಟೀವಿ ಹೊಸ ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕಿರುತೆರೆ ಮನರಂಜನಾ ಲೋಕದ ಚಿತ್ರಣವನ್ನು ಬದಲಿಸಲು ಸನ್ನದ್ಧವಾಗಿದೆ.ಕಿರುತೆರೆ ಲೋಕ ಅವಕಾಶಗಳ ಗಣಿ. ತೆರೆಮೇಲಿನ ಕೆಲಸಕ್ಕಿಂತ ತೆರೆಮರೆಯ ಕೆಲಸಕ್ಕೇ ಹೆಚ್ಚು ಆದ್ಯತೆ. ಅರ್ಧಗಂಟೆ ಪ್ರಸಾರವಾಗುವ ಧಾರಾವಾಹಿಯ ಕಂತು ನೂರಾರು ಜನರ ಶ್ರಮದ ಫಲ. ಪ್ರತಿ ದೃಶ್ಯದ ಒಂದೊಂದು `ಕದಲುವಿಕೆ~ಯೂ ಹತ್ತಾರು ಕ್ರಿಯಾಶೀಲ ವ್ಯಕ್ತಿಗಳ ನಡುವಿನ ಚರ್ಚೆಯಲ್ಲಿ ಒಡಮೂಡಿರುತ್ತವೆ.

 

ಕಿರುತೆರೆ ಹೊಸತನಗಳಿಗೆ ತೆರೆದುಕೊಳ್ಳುತ್ತಿರುವಂಥದ್ದು. ಸಾಂಪ್ರದಾಯಿಕ ನೆಲೆಯಿಂದ ದೂರಸರಿಯುತ್ತಲೇ ಮನರಂಜನೆಯ ನೆಪದಲ್ಲಿ ನವಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವ ಅನಿವಾರ್ಯತೆ ಕಿರುತೆರೆಗಳದ್ದು. ಹೀಗಾಗಿ ತೆರೆಮರೆಯಲ್ಲಿ ಬೆವರು ಹರಿಸುವವರ ಪಾತ್ರ ಬದಲಾಗಿದೆ.

 

ಪಾತ್ರಕ್ಕೆ ತಕ್ಕಂತಹ ಕಲಾವಿದರನ್ನು ವಾಹಿನಿಗಳು ಬಯಸುತ್ತವೆ. ಕಲಾವಿದರೆಂದರೆ ಬಣ್ಣಹಚ್ಚಿ ನಟಿಸುವವರು ಮಾತ್ರ ಕಲಾವಿದರಲ್ಲ. ಸಂಭಾಷಣೆಕಾರ, ಛಾಯಾಗ್ರಾಹಕ, ಸಂಕಲನಕಾರ ಹೀಗೆ ತಂತ್ರಜ್ಞರ ಸಾಲಿನಲ್ಲಿರುವವರೂ ಕಲಾವಿದರೇ. ಇವರೆಲ್ಲಾ `ಚಪ್ಪಾಳೆ ಕಾಣದ ಅಜ್ಞಾತ ಕಲಾವಿದರು~ ಎಂದು ಕರೆಯುತ್ತಾರೆ ನಿರ್ದೇಶಕ ಬಿ. ಸುರೇಶ್. ಸಿನಿಮಾ ಒಂದು ವಸ್ತು ಅಥವಾ ಮುಖ್ಯಪಾತ್ರಧಾರಿಯ ಕೇಂದ್ರಿತ.ಹೊರಗಿನಿಂದ ವಸ್ತುವನ್ನು ಸೆಳೆದುಕೊಂಡು ಒಂದು ಕೇಂದ್ರದ ಸುತ್ತ ಕಟ್ಟುವ ಕೆಲಸ ಸಿನಿಮಾದ್ದು. ಧಾರಾವಾಹಿ ಒಂದು ಕೇಂದ್ರದಿಂದ ಹೊರಟು ಹೊರಗೆ ಹರಡಿಕೊಳ್ಳುವಂಥದ್ದು. ಇದೊಂದು ರೀತಿ ಬಾವಿಯಿಂದ ನೀರು ಸೇದಿದಂತೆ. ನೀರು ಸೇದಿ ಹೊರಹಾಕುವುದಷ್ಟೇ ಕೆಲಸ. ಒಳ್ಳೆಯ ನೀರೋ ಅಥವಾ ಫ್ಲೋರೈಡ್‌ಯುಕ್ತ ನೀರೋ ಎಂಬುದು ಮುಖ್ಯವಾಗುವುದಿಲ್ಲ ಎನ್ನುತ್ತಾರೆ ಅವರು.ಸಿನಿಮಾದಂತೆಯೇ ಕಿರುತೆರೆಯ ಲೋಕಕ್ಕೂ ಕಾಲಿಡುತ್ತಿರುವ ಯುವಜನತೆಯ ಸಂಖ್ಯೆ ಹೆಚ್ಚುತ್ತಿದೆ. ನಟನೆ, ಬರವಣಿಗೆ, ಕ್ಯಾಮೆರಾ, ನಿರ್ದೇಶನ ಮುಂತಾದ ವಿವಿಧ ವಿಭಾಗಗಳತ್ತ ಆಸಕ್ತಿಯುಳ್ಳ ದಿನಕ್ಕೆ ಕನಿಷ್ಠ ಹತ್ತು ಮಂದಿ ಹೊಸಬರು ಕಿರುತೆರೆಯತ್ತ ಮುಖಮಾಡುತ್ತಿದ್ದಾರೆ. ಸಿನಿಮಾಕ್ಕಿಂತಲೂ ಕಿರುತೆರೆ ಕಲಿಕೆಯ ಪ್ರಶಸ್ತ ಕ್ಷೇತ್ರವೆನಿಸಿದೆ.ಮಾತ್ರವಲ್ಲ ಆರ್ಥಿಕವಾಗಿಯೂ ಕಿರುತೆರೆ ಸಿನಿಮಾಕ್ಕಿಂತ ಮುಂದೆ. ಕನ್ನಡ ಸಿನಿಮಾ ರಂಗ ವರ್ಷಕ್ಕೆ ಸುಮಾರು 350-400 ಕೋಟಿ ರೂ ವ್ಯವಹಾರ ನಡೆಸಿದರೆ, ಕಿರುತೆರೆ ಸುಮಾರು 1,600 ಕೋಟಿ ವ್ಯವಹಾರ ನಡೆಸುತ್ತದೆ. ಪರದೆ ಚಿಕ್ಕದಾಗಿದ್ದರೂ ಬೆಳ್ಳಿತೆರೆಗಿಂತ ಕಿರುತೆರೆಯೆಂಬ ಸಮುದ್ರದ ಆಳ, ಹರವಿನ ವ್ಯಾಪ್ತಿ ದೊಡ್ಡದು. ಸಿನಿಮಾ ಸಾಗರದ ಅಲೆ ಅಬ್ಬರದ ಸದ್ದು ಹೆಚ್ಚಾಗಿದ್ದರೂ ಸಣ್ಣನೆ ಭೋರ್ಗರೆಯುವ ಕಿರುತೆರೆಯದ್ದು ಸಿಹಿನೀರು ಎನ್ನುವುದು ಇಲ್ಲಿ ದುಡಿಯುವ ಹಲವರ ಅಭಿಪ್ರಾಯ.ಇದಕ್ಕೆ ಹಗಲು ರಾತ್ರಿಯೆನ್ನದೆ ಗಂಟೆಗಟ್ಟಲೆ ಕೆಲಸ ಮಾಡುವ ಸಾಮರ್ಥ್ಯ ಇರಬೇಕು. ಹೀಗಾಗಿಯೇ ಯುವ ಸೃಜನಶೀಲರಿಗೆ ವಾಹಿನಿಗಳು ಮಣೆ ಹಾಕುತ್ತಿರುವುದು.

ಸಿನಿಮಾಗಳಂತೆ ಕಿರುತೆರೆ ಕಾರ್ಯಕ್ರಮಗಳು ಕೆಲವು ಕಾರ್ಯಕ್ರಮಗಳನ್ನು ಹೊರತುಪಡಿಸಿ ನಿರ್ದೇಶಕನಿಂದಲೋ-ಕಥೆಗಾರನಿಂದಲೋ ರೂಪುಗೊಳ್ಳುವುದಿಲ್ಲ.ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಹೆಚ್ಚಿನ ಧಾರಾವಾಹಿಗಳ ಮೂಲ ಆ ವಾಹಿನಿಗಳೇ. ಟೀವಿ ವಾಹಿನಿಗಳಲ್ಲಿಯೇ ಕಾರ್ಯಕ್ರಮ ರೂಪಿಸುವ ತಂಡಗಳಿರುತ್ತವೆ. ಫಿಕ್ಷನ್ ಮತ್ತು ನಾನ್ ಫಿಕ್ಷನ್ ಎಂಬ ಪ್ರತ್ಯೇಕ ವಿಭಾಗಗಳು ಧಾರಾವಾಹಿ ಹಾಗೂ ರಿಯಾಲಿಟಿ ಷೋ ಅಥವಾ ಬೇರೆ ರೀತಿಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತವೆ.ಧಾರಾವಾಹಿಯ ಕಥೆ ಅಥವಾ ಅದರ ಎಳೆಯನ್ನು ಈ ತಂಡಗಳೇ ರೂಪಿಸುತ್ತವೆ. ಬಳಿಕವಷ್ಟೇ ಅದು ನಿಮಾರ್ಪಕ ಮತ್ತು ನಿರ್ದೇಶಕನ ಬಳಿಗೆ ತೆರಳುವುದು. ಕೆಲವೊಮ್ಮೆ ವಾಹಿನಿಯೇ ಅದರ ಸಂಪೂರ್ಣ ನಿರ್ಮಾಣದ ಹೊಣೆ ಹೊರುತ್ತದೆ.ವಾಹಿನಿಯ ತಂಡದೊಂದಿಗೆ ಚರ್ಚಿಸಿಯೇ ಪ್ರೊಡಕ್ಷನ್ ತಂಡ ಪ್ರತಿ ಕಂತನ್ನು ಸಿದ್ಧಪಡಿಸಬೇಕಾಗಿರುತ್ತದೆ. ಚಿತ್ರಕಥೆ, ಸಂಭಾಷಣೆ, ಚಿತ್ರೀಕರಣ, ಸಂಕಲನ ಹೀಗೆ ಪ್ರತಿ ಹಂತವನ್ನೂ ಗಮನಿಸುವ ಹೊಣೆ ಈ ತಂಡದ್ದಾಗಿರುತ್ತದೆ. ಧಾರಾವಾಹಿಯ ಕಂತು, ಜಾಹೀರಾತು, ದಿನದ ಅವಧಿಗೆ ಸೂಕ್ತವಾಗಿ ಅದನ್ನು ಹೊಂದಿಸುವುದು ಮುಂತಾದ ಎಲ್ಲಾ ಕೆಲಸಗಳಿಗೂ ಅಂತಿಮ ಹೊಣೆಗಾರ ಆ ವಿಭಾಗದ ಮುಖ್ಯಸ್ಥ.

 

ಆತನ ಶ್ರಮದ ಯಶಸ್ಸನ್ನು ಅಳೆಯುವ ಮಾನದಂಡ ಟಿಆರ್‌ಪಿ. ಇದೆಲ್ಲವನ್ನೂ ನಿರ್ವಹಿಸುವುದು ಸುಲಭದ ಮಾತಲ್ಲ ಎನ್ನುತ್ತಾರೆ ಈ ಟೀವಿ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ ಗುಂಡ್ಕಲ್. ಪ್ರತಿ ಕಂತಿಗೂ ಹೊಸತನವಿರಬೇಕು. ಮಿಗಿಲಾಗಿ ಕಿರುತೆರೆ ಮಹಿಳೆಯರನ್ನು ನೆಚ್ಚಿಕೊಂಡಿರುವಂಥದ್ದು. ಹೀಗಾಗಿ ಧಾರಾವಾಹಿಗಳು ಮಹಿಳಾಕೇಂದ್ರಿತವಾಗಿರುವುದು ಅನಿವಾರ್ಯ.ಧಾರಾವಾಹಿಗಳ ಶೀರ್ಷಿಕೆಯಲ್ಲಿಯೇ ಇದು ಅಡಗಿರುತ್ತದೆ. `ಚಿ.ಸೌ.ಸಾವಿತ್ರಿ~ ಧಾರಾವಾಹಿಯ ಹೆಸರು ಸುಲಭವಾಗಿ ಮಹಿಳೆಯರನ್ನು ಸೆಳೆಯಬಲ್ಲದು. ಇಂಥದ್ದೇ ಶೀರ್ಷಿಕೆ ಇರಬೇಕು, ಧಾರಾವಾಹಿಯ ಸ್ವರೂಪ ಹೀಗೆಯೇ ಇರಬೇಕು ಎನ್ನುವುದು ಎಲ್ಲವೂ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ.ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸುವಲ್ಲಿ ಸನ್ ನೆಟ್‌ವರ್ಕ್, ವಯಾಕಾಮ್, ಸೋನಿ, ಸ್ಟಾರ್ ಮತ್ತು ಝೀ ನೆಟ್‌ವರ್ಕ್‌ಗಳು ತಮ್ಮದೇ ನೀತಿ ನಿಯಮ ಹೊಂದಿವೆ. ಹೀಗಾಗಿಯೇ ನೆರೆಯ ತಮಿಳು-ತೆಲುಗಿನ ಕಾರ್ಯಕ್ರಮಗಳ ಪ್ರಭಾವ ಕನ್ನಡದ ಕಾರ್ಯಕ್ರಮಗಳಲ್ಲೂ ಕಾಣುವುದು, ಹಿಂದಿ ಕಾರ್ಯಕ್ರಮಗಳ ಛಾಯೆ ಇಲ್ಲಿಯೂ ಇಣುಕುವುದು. ಇದಕ್ಕೆ ಕಾರ್ಯಕ್ರಮ ರೂಪಿಸುವವರನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ.

 

ಮಾರುಕಟ್ಟೆ ಅಂದರೆ ಜಾಹೀರಾತುದಾರರು ಕೇಳುವುದನ್ನು ನೀಡುವುದು ಅವರ ಜವಾಬ್ದಾರಿ. ವೀಕ್ಷಕರ ಬೇಡಿಕೆಯ ಪ್ರಭಾವದ ಪ್ರಮಾಣ ಕಡಿಮೆ. ರಾವಾಹಿಗಳಾಗಲೀ ಅಥವಾ ರಿಯಾಲಿಟಿ ಕಾರ್ಯಕ್ರಮಗಳಾಗಲೀ ಅಷ್ಟು ಸುಲಭಕ್ಕೆ ಜನ್ಮತಾಳಲು ಸಾಧ್ಯವಿಲ್ಲ. ಅದಕ್ಕೆ ತಿಂಗಳುಗಟ್ಟಲೆ ವಿಷಯ ಸಂಗ್ರಹಣೆ, ಅಧ್ಯಯನ, ಸಮಾಲೋಚನೆ, ಮಾರುಕಟ್ಟೆ ವಿಶ್ಲೇಷಣೆ ಮುಂತಾದ ವಿವಿಧ ಹಂತಗಳಿವೆ.

 

ಬಳಿಕವಷ್ಟೇ ಅದು ದೃಶ್ಯರೂಪ ತಾಳುವ ಪ್ರಕ್ರಿಯೆ ಶುರುವಾಗುವುದು. ಹಿಂದೆ ಹೆಚ್ಚು ಅನುಭವವಿರುವ, ವಯಸ್ಕರೇ ಇವುಗಳ ನಿರ್ವಹಣೆ ಮಾಡುತ್ತಿದ್ದರು. ಅದೀಗ ಬದಲಾಗಿದೆ. ವಾಹಿನಿಗಳಲ್ಲಿ ಈ ರೀತಿ ತೆರೆ ಹಿಂದೆ ದುಡಿಯುತ್ತಿರುವವರಲ್ಲಿ ಯುವಜನರೇ ಅಧಿಕ. ಇಂದಿನ ಜನರ ಮನೋಭಾವಕ್ಕೆ ತಕ್ಕಂತೆ, ಹೊಸತನದ ಕಾರ್ಯಕ್ರಮಗಳನ್ನು ರೂಪಿಸುವುದು ಯುವಜನರಿಗೆ ಸುಲಭ ಎಂಬುದು ಇದರ ಹಿಂದಿನ ಉದ್ದೇಶ.ಕನ್ನಡ ಮಾತ್ರವಲ್ಲ, ಭಾರತದ ವಿವಿಧ ಭಾಷೆಯ ಅನೇಕ ವಾಹಿನಿಗಳಲ್ಲಿ ಕ್ರಿಯಾಶೀಲತೆಯನ್ನು ಬಯಸುವ ಇಂಥಹ ಕಾರ್ಯಕ್ರಮಗಳ ಉಸ್ತುವಾರಿ ಹೊತ್ತವರಲ್ಲಿ ಹೆಚ್ಚಿನವರಿಗೆ ಇನ್ನೂ 35 ವರ್ಷವೂ ದಾಟಿಲ್ಲ. ವಾಹಿನಿಗಳಲ್ಲಿ ಮಾತ್ರವಲ್ಲ ಪ್ರೊಡಕ್ಷನ್ ಹೌಸ್‌ಗಳಲ್ಲಿ ಅಂದರೆ, ಕಥೆಗಾರ, ನಿರ್ದೇಶಕ, ಸಂಭಾಷಣೆಗಾರ, ಛಾಯಾಗ್ರಾಹಕ, ಸಂಕಲನಕಾರ, ಕಲಾ ನಿರ್ದೇಶಕ, ಹೀಗೆ ಎಲ್ಲಾ ವಿಭಾಗಗಳೂ ಯುವಜನರಿಗೆ ತೆರೆದುಕೊಳ್ಳುತ್ತಿದೆ.ಹಾಗಾದರೆ ಟೀವಿ ವಾಹಿನಿಗಳಿಗೆ ತೆರೆಮರೆಯಲ್ಲಿ ಕೆಲಸ ಮಾಡುವ ಹೊಣೆಗಾರಿಕೆ ಸುಲಭದ್ದೇ? ಖಂಡಿತಾ ಅಲ್ಲ ಎನ್ನುವುದು ಕಿರುತೆರೆ ಹಿಂದೆ ವರ್ಷಗಟ್ಟಲೆ ಬದುಕು ಸವೆಸಿರುವ ಅನುಭವಸ್ಥರ ಮಾತು. `ಕಿರುತೆರೆಯ ಕೆಲಸ ಸರ್ಕಾರಿ ಉದ್ಯೋಗದಂತೆ. ಅನುಭವ, ಹೆಸರಿಗೆ ತಕ್ಕಂತೆ ಸಂಬಳವೂ ಏರಿಕೆಯಾಗುತ್ತದೆ. 1992-93ರಲ್ಲಿ 750 ರೂ. ಸಂಬಳ ಪಡೆದುಕೊಳ್ಳುತ್ತಿದ್ದ ನಾನು ಅದರ ನೂರು ಪಟ್ಟು ಗಳಿಸುತ್ತಿದ್ದೇನೆ.ಕಿರುತೆರೆಯ ಆದಾಯ ಸಿನಿಮಾದಂಥಲ್ಲ. ಇಲ್ಲಿ ನಾವು ಪಡೆಯುವ ಭತ್ಯೆ ನ್ಯಾಯಯುತವಾಗಿ ಬಂದ ಹಣದ್ದು. ಮೋಸ ಮಾಡದೆ ಬದುಕುವ ಆನಂದ ನಮ್ಮದು. ಆರ್ಥಿಕವಾಗಿ ನಮಗೆ ಕಿರುತೆರೆ ಭದ್ರತೆ ಒದಗಿಸಬಲ್ಲದು. ಆದರೆ ಸಾಂಸಾರಿಕ ಬದುಕನ್ನು ನಿಭಾಯಿಸುವುದು ಇಲ್ಲಿ ತಾಂತ್ರಿಕ ಕೆಲಸ ಮಾಡುವವನಿಗೆ ಸುಲಭವಲ್ಲ.ದಿನಕ್ಕೆ 18 ಗಂಟೆ ದುಡಿಯುವ ಬದ್ಧತೆ ಬೇಕು. ಜೊತೆಗೆ ತಾಳ್ಮೆ, ತಾಧ್ಯಾತ್ಮತೆ, ಒತ್ತಡವನ್ನು ತಡೆದುಕೊಳ್ಳುವ ಧಾರಣ ಶಕ್ತಿ ಇವೆಲ್ಲವೂ ಇದ್ದಾಗ ಮಾತ್ರ ಕಿರುತೆರೆಯ ಬರಹಗಾರನಿಗೆ ಯಶಸ್ಸು ಸಿಗಲು ಸಾಧ್ಯ. ಅದರೊಳಗೆ ತೊಡಗಿಕೊಳ್ಳುವ ವ್ಯಕ್ತಿ ತಾನು ನಿಂತ ನೆಲೆಯ ಜಗತ್ತಿನಲ್ಲಿ ವಾಸ್ತವವನ್ನು ಮರೆಯುತ್ತಾನೆ. ಬರೆದು ಬರೆದು ಆತ ಮಾತೇ ಇಲ್ಲದ ಸ್ಥಿತಿಗೂ ತಲುಪುವುದಿದೆ.ಯಶಸ್ಸು ಸಿಗದಿದ್ದಾಗ ಆತ ತನ್ನ ಸುತ್ತ ಕಟ್ಟಿಕೊಂಡ ಜಗತ್ತಿನಲ್ಲಿ ಕಳೆದುಹೋಗುತ್ತಾನೆ. ಏಕೆಂದರೆ ಆತನಿಗೆ ಚಪ್ಪಾಳೆ ದಕ್ಕುವುದಿಲ್ಲ. ಅದು ಸಿಗುವುದು ಕಲಾವಿದನಿಗೆ. ಕೆಲವೊಮ್ಮೆ ಕಲಾವಿದನಿಗೂ ಸಿಗುವುದಿಲ್ಲ. ಟಿಆರ್‌ಪಿ ಆಧಾರದಲ್ಲಿ ಆ ಯಶಸ್ಸು ನಿರ್ಮಾಪಕನಿಗೆ ಸಲ್ಲುತ್ತದೆ. ಇದೆಲ್ಲವನ್ನೂ ಸಹಿಸಿಕೊಳ್ಳಬಲ್ಲ ಸಾಮರ್ಥ್ಯವುಳ್ಳವನು ಮಾತ್ರ ಇಲ್ಲಿ ಯಶಸ್ಸು ಸಾಧಿಸಬಲ್ಲ~ ಎನ್ನುತ್ತಾರೆ ಬಿ. ಸುರೇಶ್.ಬಿ. ಸುರೇಶ್ ತಮ್ಮ ಧಾರಾವಾಹಿಯನ್ನು ತಾವೇ ಮಾರ್ಕೆಟಿಂಗ್ ಮಾಡುವ ಸ್ವಾತಂತ್ರ್ಯವನ್ನು ಉದಯ ಟೀವಿಯಿಂದ ಪಡೆದವರು. ಅವರದೇ ಕಥೆ, ಧಾರಾವಾಹಿ ಸ್ವರೂಪ, ಕೊನೆಗೆ ಜನರನ್ನು ಸೆಳೆಯುವ ತಂತ್ರಗಳೆಲ್ಲವೂ ಅವರದ್ದೇ. ಇದು ಎಲ್ಲಾ ವಾಹಿನಿಗಳಲ್ಲೂ, ಎಲ್ಲಾ ನಿರ್ದೇಶಕರಿಗೂ ಸಾಧ್ಯವಾಗುವುದಿಲ್ಲ. ಕಿರುತೆರೆಯಲ್ಲಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಬಲ್ಲ ಅವರು ಕಲಾವಿದರು ಮತ್ತು ತಂತ್ರಜ್ಞರ ಹರಿವನ್ನು ಆರ್ಥಿಕ ಹಾಗೂ ವೃತ್ತಿಪರತೆಯ ನೆಲೆಗಟ್ಟಿನ ಮೇಲೆ ವಿಶ್ಲೇಷಿಸುತ್ತಾರೆ.`ಕಿರುತೆರೆ ಅವಕಾಶಗಳ ದೊಡ್ಡ ಸಾಗರ. ಇಲ್ಲಿ ಕನ್ನಡ ಚೆನ್ನಾಗಿ ಬರುತ್ತದೆ ಎಂಬ ಭ್ರಮೆಯಲ್ಲಿ ಬರುವವರ ಸಂಖ್ಯೆ ಹೆಚ್ಚು. ಬಾರದೆ ಇರುವವರ ಸಂಖ್ಯೆಯೂ ಹೆಚ್ಚು. ಅದು ಸಂಪೂರ್ಣವಾಗಿ ಬಲ್ಲವರ ಸಂಖ್ಯೆ ಕಡಿಮೆ. ಆದರೆ ಕಲಿಯುತ್ತೇನೆ ಎಂಬ ವಿನಯದಿಂದ ಬರುವವರ ಪ್ರಮಾಣ ಹೆಚ್ಚಾಗಿಯೇ ಇದೆ. ತಂತ್ರಜ್ಞರೂ ಇದರಿಂದ ಹೊರತಲ್ಲ. ತೆರೆ ಮೇಲೆ ಕಾಣಿಸಿಕೊಳ್ಳುವ ಕಲಾವಿದನಿಗೆ ಮುಖಲಕ್ಷಣ, ಅಭಿನಯ ಕಲೆ, ದೇಹಭಾಷೆಗಳಿದ್ದರೆ ಸಾಲದು. ಬೇರೆಯವರು ಬರೆದ ಸಂಭಾಷಣೆಯನ್ನು ತನ್ನದಾಗಿಸಿಕೊಳ್ಳುವ ಕಲೆ ಬೇಕು. ಅದನ್ನು ಸಾಧಿಸಿಕೊಳ್ಳುವುದು ತುಂಬಾ ಕಷ್ಟ. ಸಾಧಿಸಿದವನು ಯಶಸ್ವಿ ಕಲಾವಿದನಾಗುತ್ತಾನೆ~.ಧಾರಾವಾಹಿಗಳಲ್ಲಿ ನಿರ್ದೇಶಕರಲ್ಲದೆ ಸಂಚಿಕೆ ನಿರ್ದೇಶಕರೂ (ಎಪಿಸೋಡ್ ಡೈರೆಕ್ಟರ್) ಕೂಡ ಇರುತ್ತಾರೆ. ನಿರ್ದೇಶಕನ ಪರವಾಗಿ ಆತನ ಜವಾಬ್ದಾರಿಗಳನ್ನು ನಿರ್ವಹಿಸುವವರು ಸಂಚಿಕೆ ನಿರ್ದೇಶಕರು. ಸ್ವತಂತ್ರ ನಿರ್ದೇಶಕರಾಗುವ ನಡಿಗೆಯಲ್ಲಿ ಒಂದು ಮೆಟ್ಟಿಲಷ್ಟೇ ಕೆಳಗಿರುವವರು ಇವರು. ನಿರ್ದೇಶಕನಿಗಿರುವ ಎಲ್ಲಾ ಅರ್ಹತೆಗಳು ಇವರಿಗಿರುತ್ತದೆ. ಧಾರಾವಾಹಿಗಳಲ್ಲೂ ಸಿನಿಮಾಗಳಲ್ಲೂ ಬಳಸುವ ಭಾಷೆ ಬೇರೆ.ಇವುಗಳ ಪ್ರೇಕ್ಷಕ ವರ್ಗವೂ ಬೇರೆ. ಮಹಿಳಾ ವೀಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ಧಾರಾವಾಹಿ ನಿಭಾಯಿಸುವುದು ಸುಲಭವಲ್ಲ ಎನ್ನುವುದು ಹಲವು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ, ಈಗ ಸ್ವತಂತ್ರ ನಿರ್ದೇಶಕರಾಗಿರುವ ಮಧುಸೂದನ್ ಅಭಿಪ್ರಾಯ.ಸಿನಿಮಾ ಮತ್ತು ಧಾರಾವಾಹಿ ಸಂಕಲನದ ನಡುವೆ ಅಗಾಧ ಅಂತರವಿದೆ ಎನ್ನುತ್ತಾರೆ ಧಾರಾವಾಹಿ ಸಂಕಲನಕಾರ ಸಿ. ರವಿಚಂದ್ರನ್. ಧಾರಾವಾಹಿಗಳಲ್ಲಿ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಸಿನಿಮಾಗಳಂತೆ ಇಲ್ಲಿ ಸೌಂಡ್ ಎಫೆಕ್ಟ್, ಹಾಡುಗಳ ಸಂಗೀತ ಪ್ರತ್ಯೇಕವಾಗಿರುವುದಿಲ್ಲ. ಸಿದ್ಧಗೊಂಡಿರುವ ಸಂಗೀತ, ಸೌಂಡ್ ಎಫೆಕ್ಟ್‌ಗಳನ್ನು ಸಂಕಲನದ ಕೆಲಸ ಮಾಡುವಾಗಲೇ ಸೇರಿಸಬೇಕು. ಹೀಗಾಗಿ ಸಂಕಲನಕಾರನ ಹೊಣೆ ಹೆಚ್ಚು. ಸಮಯದ ಮಿತಿಯೂ ಕಡಿಮೆ.

 

ಇಲ್ಲಿನ ಚಿತ್ರೀಕರಣವೂ ಸುಲಭವಲ್ಲ. ಪ್ರತಿ ಬುಧವಾರ ಹೊರಬರುವ ಟಿಆರ್‌ಪಿ ಮೇಲೆ ಎಲ್ಲವೂ ಅವಲಂಬಿತ. ಟಿಆರ್‌ಪಿ ಕಡಿಮೆ ಬಂದಿದ್ದರೆ ಆ ವಾರದ ಕಂತಿನ ಸನ್ನಿವೇಶಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು. ಆಗ ಮುಖ್ಯಪಾತ್ರಧಾರಿಗಳು ಸಿಗದೇ ಹೋಗುವ ಸಾಧ್ಯತೆಯೂ ಇರುತ್ತದೆ ಎಂದು ಹೇಳುತ್ತಾರೆ.ಈಗಿನ ಮೂರ್ನಾಲ್ಕು ವರ್ಷಗಳಲ್ಲಿ  ವಿವಿಧ ಕಲಿಕಾ ಸಂಸ್ಥೆಗಳಿಂದ ಎಡಿಟಿಂಗ್ ಕೋರ್ಸ್ ಮುಗಿಸಿ ಬರುತ್ತಿರುವ ಯುವಕರ ಸಂಖ್ಯೆ ಹೆಚ್ಚಿದೆ. ಆದರೆ ಅನುಭವ ಇಲ್ಲದ ಕಾರಣ ಕೆಲಸ ಸಿಗುವುದು ಸುಲಭವಲ್ಲ. ಹೆಚ್ಚಿನವರು ಸಿನಿಮಾದತ್ತ ಮುಖ ಮಾಡುತ್ತಾರೆ. ಅಲ್ಲಿ ಕೆಲಸ ಇಲ್ಲಿಗಿಂತ ಸುಲಭ. ಹೆಸರೂ ಬೇಗನೆ ಗಳಿಸಬಹುದು. ಅವರು ಕೆಲಸ ಮಾಡಿದ ಒಂದು ಚಿತ್ರ ನೂರು ದಿನ ಓಡಿದರೆ ಹೆಸರು ಬರುತ್ತದೆ. ಆದರೆ ಇಲ್ಲಿ ಹಾಗಲ್ಲ. ನಾನು ಸಂಕಲನ ಮಾಡಿರುವ ಎರಡು ಧಾರಾವಾಹಿಗಳು ಸಾವಿರ ಕಂತು ದಾಟಿದೆ. ಆದರೆ ಗುರುತಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎನ್ನುತ್ತಾರೆ ರವಿಚಂದ್ರನ್.ಅದೇ ರೀತಿ ಛಾಯಾಗ್ರಹಣದಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಬಳಸುವ ಕ್ಯಾಮೆರಾ, ಅದಕ್ಕೆ ಅಳವಡಿಸುವ ತಂತ್ರಜ್ಞಾನ, ದೃಶ್ಯಗಳನ್ನು ಸೆರೆಹಿಡಿಯುವ ಬಗೆ, ನೆರಳು-ಬೆಳಕಿನ ಬಳಕೆ ವಿಭಿನ್ನ. ಸಿನಿಮಾಗಿಂತ ಧಾರಾವಾಹಿ ಛಾಯಾಗ್ರಹಣ ಸುಲಭ ಎನ್ನುತ್ತಾರೆ ಹಲವು ಧಾರಾವಾಹಿ ಮತ್ತು ನೇರಪ್ರಸಾರದ ಕಾರ್ಯಕ್ರಮಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಕಾಂತರಾಜು.ಆದರೆ ರಿಯಾಲಿಟಿ ಶೋ ಛಾಯಾಗ್ರಹಣ ಅತ್ಯಂತ ಕಷ್ಟಕರ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಸನ್ನಿವೇಶ ಸರಿಯಾಗಿ ಬರದಿದ್ದರೆ ಮತ್ತೆ ಚಿತ್ರೀಕರಿಸಬಹುದು. ಆದರೆ ನೇರಪ್ರಸಾರದ ಅಥವಾ ರಿಯಾಲಿಟಿ ಶೋಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಧಾರಾವಾಹಿಗಳನ್ನು ಹೆಚ್ಚು ಸಹಜ ಬೆಳಕಲ್ಲಿ ಸೆರೆಹಿಡಿಯಬಹುದು ಎನ್ನುತ್ತಾರೆ ಅವರು.ಒಂದು ಸಿನಿಮಾ ಮೂಡಿ ಬರಬೇಕಾದರೆ ತೆರೆಮರೆಯಲ್ಲಿ ನೂರಾರು ಜನರ ಶ್ರಮವಿರುತ್ತದೆ. ನಿರ್ದೇಶಕ, ಸಂಗೀತ ನಿರ್ದೇಶಕ, ನೃತ್ಯ ನಿರ್ದೇಶಕ, ಸಾಹಸ ನಿರ್ದೇಶಕ ಹೀಗೆ ಕೆಲವರ ಹೊರತಾಗಿ ಉಳಿದವರ ಶ್ರಮದ ಅರಿವು ಹೊರಜಗತ್ತಿಗೆ ತಿಳಿಯುವುದಿಲ್ಲ. ಧಾರಾವಾಹಿಯ ಕಥೆಯೂ ಇದಕ್ಕಿಂತ ಬೇರೆಯಲ್ಲ.

 

ಏಕಮುಖವಾಗಿ ಹರಿಯುವ ಸಣ್ಣ ಝರಿಯಂತಿದ್ದ ಕಿರುತೆರೆ ಧಾರಾವಾಹಿಗಳ ಸ್ವರೂಪವೀಗ ಎಲ್ಲಾ ದಿಕ್ಕುಗಳಿಂದ ನುಗ್ಗುವ ಪ್ರವಾಹ. ಈ ಬದಲಾವಣೆ ಕೆಲವೇ ವರ್ಷಗಳಿಂದೀಚಿನದ್ದು. ಅದನ್ನು ಸರಿಯೋ ತಪ್ಪೋ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ವೀಕ್ಷಕರದ್ದು. ಈ ಬದಲಾವಣೆಯಲ್ಲಿ ವಾಹಿನಿಗಳ ಮಾಲೀಕರ ಹಿತಾಸಕ್ತಿ ಪ್ರಧಾನವಾಗಿದ್ದರೂ ಕಿರುತೆರೆ ಮಾಧ್ಯಮದ ಬೆಳವಣಿಗೆಯ ಯಶಸ್ಸಿನ ರೂವಾರಿಗಳು ಅದರಲ್ಲಿ ತೊಡಗಿಕೊಂಡ ಯುವಜನರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry