ಶನಿವಾರ, ಮೇ 21, 2022
27 °C

ಟಿಸಿಎಸ್: ಐಯಾನ್ ಸೇವೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಸ್‌ಎಂಬಿ) ಉದ್ದಿಮೆಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಆಧಾರಿತ ಸೇವೆ ಒದಗಿಸುವ ‘ಐಯಾನ್’  ತಂತ್ರಜ್ಞಾನವನ್ನು  ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದೆ. ‘ಇದು ಬೇಡಿಕೆ ಆಧಾರಿತ ಸೇವೆಯಾಗಿದ್ದು, ಬಳಸಿದ ಸೇವೆಗೆ ಮಾತ್ರ ಹಣ ಪಾವತಿಸಿದರೆ ಸಾಕು.‘ಐಯಾನ್’ ಬಳಕೆಯಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಮಾಹಿತಿ ತಂತ್ರಜ್ಞಾನ ಸೇವೆಗೆ ಮೀಸಲಿಡುವ ವೆಚ್ಚ ತಪ್ಪಲಿದೆ. ಸಣ್ಣ ಉದ್ದಿಮೆಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಲೂ ಈ ತಂತ್ರಜ್ಞಾನ ನೆರವು ನೀಡಲಿದೆ. ಯಾವುದೇ ಮೂಲ ಬಂಡವಾಳ ಹೂಡಿಕೆಯಿಲ್ಲದೆ ಈ ಸೇವೆ  ಪಡೆದುಕೊಳ್ಳಬಹುದು ಎಂದು ‘ಟಿಸಿಎಸ್’ನ  ಜಾಗತಿಕ ಮುಖ್ಯಸ್ಥ ವಿ. ರಾಮಸ್ವಾಮಿ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಕರ್ನಾಟಕದಲ್ಲಿ  5 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ದಿಮೆಗಳಿವೆ. ಬೆಂಗಳೂರು ಹೊರತಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ವಿಜಾಪುರ, ಬೆಳಗಾವಿ, ಹಾಸನದಲ್ಲೂ ‘ಎಸ್‌ಎಂಬಿ’ ಕ್ಷೇತ್ರ ತೀವ್ರವಾಗಿ ಬೆಳೆಯುತ್ತಿದ್ದು, ಈ ಉದ್ದಿಮೆಗಳಿಗೆ ಅಗತ್ಯವಾದ ದತ್ತಾಂಶ ನಿರ್ವಹಣೆ, ಹಾರ್ಡ್‌ವೇರ್, ಸಂಪರ್ಕಜಾಲ, ತಂತ್ರಾಂಶ ಗುಚ್ಛವನ್ನು  ‘ಐಯಾನ್’ ಸೇವೆಯಡಿ ‘ಟಿಸಿಎಸ್’ ಪೂರೈಸಲಿದೆ ಎಂದರು.ರಾಜ್ಯದಲ್ಲಿ ಈಗಾಗಲೇ   90ಕ್ಕೂ ಹೆಚ್ಚು ಕ್ಲೌಡ್ ಕಂಪ್ಯೂಟಿಂಗ್ ಪಾಲುದಾರರೊಂದಿಗೆ ‘ಟಿಸಿಎಸ್’ ಒಪ್ಪಂದ ಮಾಡಿಕೊಂಡಿದೆ. ಈ ವರ್ಷಾಂತ್ಯಕ್ಕೆ 1,500ಕ್ಕೂ ಹೆಚ್ಚು ಉದ್ದಿಮೆಗಳನ್ನು ಈ ಸೇವಾ ವ್ಯಾಪ್ತಿಗೆ ತರಲಾಗುವುದು. ಮುಂದಿನ 5 ವರ್ಷಗಳಲ್ಲಿ ರಾಜ್ಯದಿಂದ 1 ಶತಕೋಟಿ ಡಾಲರ್ (` 4500 ಕೋಟಿ) ವಹಿವಾಟು   ನಿರೀಕ್ಷಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.