ಶನಿವಾರ, ಮೇ 15, 2021
24 °C

ಟಿಸಿ ಬದಲಿಸಲು 5 ಸಾವಿರ ಲಂಚ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕುಡಿಯಲು ನೀರಿಲ್ಲ. ಕೊಳವೆ ಬಾವಿ ಬತ್ತಿ ಹೋಗಿವೆ. ಇರುವ ಕೊಳವೆಬಾವಿಗಳ ಪಂಪು, ಮೋಟರ್ ಸುಟ್ಟು ಹೋಗಿವೆ. ಟ್ರಾನ್ಸ್‌ಫಾರ್ಮರ್ ಬದಲಾಯಿಸಿಕೊಡಿ ಎಂದು ಕೇಳಿದರೆ ಬೆಸ್ಕಾಂನವರು 4ರಿಂದ 5ಸಾವಿರ ಲಂಚ ಕೇಳುತ್ತಾರೆ.ಯಾವುದನ್ನೂ ಬಗೆಹರಿಸದ ಸ್ಥಿತಿಯಲ್ಲಿರುವ ನಾವು ಕ್ಷೇತ್ರದ ಜನರಿಗೆ ಮುಖ ತೋರಿಸಲಾಗುತ್ತಿಲ್ಲ...

ಹೀಗೆ, ತಮ್ಮ ನೋವು ತೋಡಿಕೊಂಡ ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲೆಯ ನೀರಿನ ಸಮಸ್ಯೆಯನ್ನು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ತೆರೆದಿಟ್ಟರು. 2 ವರ್ಷಗಳಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. ಹಳ್ಳಿಗಳಲ್ಲಿ ಜನ, ಜಾನುವಾರುಗಳಿಗೆ ನೀರಿಲ್ಲ. ಕುಡಿಯುವ ನೀರಿಗೆ ಸರ್ಕಾರ ನೀಡಿರುವ ಅನುದಾನ ಲೆಕ್ಕಕ್ಕೆ ಸಿಗುತ್ತಿಲ್ಲ. ನೀರಿಗೆ ಸರ್ಕಾರ ಯೋಜನೆ ರೂಪಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದಸ್ಯರು ಆರೋಪಿಸಿದರು.ಕುಡಿಯುವ ನೀರಿನ ಸಮಸ್ಯೆ ಕುರಿತು ಸುಮಾರು ಒಂದೂವರೆ ಗಂಟೆ ಕಾಲ ಬಿಸಿಬಿಸಿ ಚರ್ಚೆ ನಡೆಯಿತು. ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಚಿತ್ರಣ ಸಭೆಯಲ್ಲಿ ಬಿಚ್ಚಿಟ್ಟರು.ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ನೀರಿನ ಸಮಸ್ಯೆ ಕುರಿತು ಚರ್ಚಿಸಲು ಅವಕಾಶ ನೀಡಿದರು. ಚರ್ಚೆ ಆರಂಭಿಸಿದ ಸದಸ್ಯ ಆನಂದ ರವಿ, ತಮ್ಮ ಕ್ಷೇತ್ರದ 17 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆಯಿದೆ. ಕೊಳವೆ ಬಾವಿ ಕೊರೆಸಿದ್ದರೂ ಅವುಗಳಿಗೆ ಪಂಪು, ಮೋಟರ್ ಅಳವಡಿಸಿಲ್ಲ. ಗ್ರಾ.ಪಂ. ಅಳವಡಿಸಿದ ಮೋಟರ್‌ಗಳ ಸುಳಿವೇ ಇಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಸದಸ್ಯ ಆರ್.ಜಿ.ಆಂಜಿನಪ್ಪ ಮಾತನಾಡಿ, ಪಾವಗಡ ತಾಲ್ಲೂಕಿನ 250 ಗ್ರಾಮಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸಿಗುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ತಾಲ್ಲೂಕಿನಾದ್ಯಂತ ಡಿಫ್ಲೋರೈಡ್ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪಾವಗಡ, ಶಿರಾ, ಮಧುಗಿರಿ ತಾಲ್ಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರು ಹೆಚ್ಚಿದ್ದು, ಎಟಿಎಂ ಮಾದರಿಯ ಶುದ್ಧೀಕರಿಸಿದ ನೀರು ಕೊಡುವ ಘಟಕಗಳನ್ನು ಸ್ಥಾಪನೆ ಮಾಡಬೇಕು. ಕ್ರಿಯಾಯೋಜನೆ ರೂಪಿಸುವಾಗ ಜಿ.ಪಂ. ಸದಸ್ಯರ ಸಲಹೆಗಳನ್ನು ಅಧಿಕಾರಿಗಳು ಪಡೆಯಬೇಕು. 13ನೇ ಹಣಕಾಸು ಯೋಜನೆ ಖರ್ಚು ವೆಚ್ಚಗಳ ಮಾರ್ಗಸೂಚಿಯಲ್ಲಿ ಸರ್ಕಾರ ಬದಲಾವಣೆ ತರಬೇಕು. ತಾಲ್ಲೂಕಿನ ಕಾಮಗೊಂಡನಹಳ್ಳಿ, ಗೊಲ್ಲರಹಟ್ಟಿ, ಬಂದಕುಂಟೆ ಗ್ರಾಮಗಳಲ್ಲಿ ಓವರ್‌ಟ್ಯಾಂಕ್ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ ಎಂದು ಮತ್ತೊಬ್ಬ ಸದಸ್ಯ ಸಿ.ಆರ್.ಉಮೇಶ್ ಆರೋಪಿಸಿದರು.ಸದಸ್ಯ ಚಂದ್ರಶೇಖರ ಬಾಬು ಮಾತನಾಡಿ, ಗ್ರಾಮ ಪಂಚಾಯಿತಿಗಳು ಸರಿಯಾದ ರೀತಿಯಲ್ಲಿ ಆದಾಯ ಸಂಗ್ರಹಿಸುತ್ತಿಲ್ಲ. ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಹೆಚ್ಚುವರಿ ಪೈಪ್, ಕೇಬಲ್ ಬೇಕೆಂದರೆ ಗ್ರಾ.ಪಂ. ಬಳಿ ಹಣವೇ ಇಲ್ಲ. ಆದ್ದರಿಂದ ಕುಡಿಯುವ ನೀರಿನ ಪೂರೈಕೆಗೆ ಪ್ರತ್ಯೇಕ ನಿಧಿ ಕಾಯ್ದಿರಿಸಿ ರೂ. 3ರಿಂದ 5 ಲಕ್ಷ ಹಣ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಸದಸ್ಯರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಗೋವಿಂದರಾಜು, ಸಮೀಕ್ಷೆ ಪ್ರಕಾರ ಕುಡಿಯುವ ನೀರಿಗೆ ರೂ. 31.25 ಕೋಟಿ ಅನುದಾನ ಅವಶ್ಯಕತೆ ಇದೆ. ಸರ್ಕಾರದ ಗಮನಕ್ಕೆ ತರಲಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಐಎಂಐಎಸ್ ಕ್ರಿಯಾ ಯೋಜನೆಗೆ ಸೇರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹೇಮಾವತಿ ಜಲಾಶಯದಿಂದ ಪಾವಗಡ, ಶಿರಾ, ಮಧುಗಿರಿ ಹಾಗೂ ಕೊರಟಗೆರೆಗೆ ನೀರು ಒದಗಿಸಲು ರೂ. 365 ಕೋಟಿಯ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.ಅನುದಾನ ವ್ಯರ್ಥ

ಕುಡಿಯುವ ನೀರಿಗೆ ಸರ್ಕಾರ ನೀಡಿರುವ ಅನುದಾನವನ್ನು ನಿರ್ವಹಣೆ ಮಾಡುವಲ್ಲಿ ಜಿಲ್ಲಾ ಪಂಚಾಯಿತಿ ಎಡವಿದೆ. ತಾಲ್ಲೂಕು, ಗ್ರಾಮ ಪಂಚಾಯಿತಿ ನಿಗಾ ವಹಿಸದಿದ್ದರೆ ಅನುದಾನ ವ್ಯರ್ಥವಾಗಲಿದೆ ಎಂದು ಜಿ.ಪಂ. ಸದಸ್ಯ ವೈ.ಎಚ್.ಹುಚ್ಚಯ್ಯ ಹೇಳಿದರು.ಕುಣಿಗಲ್ ತಾಲ್ಲೂಕು ಸೋಮದೇವನಪಾಳ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದೇ ಕಡೆ ಎರಡು ಬೋರ್‌ವೆಲ್ ಕೊರೆದು ಹಣ ಪೋಲು ಮಾಡಲಾಗಿದೆ.  ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಸಮಯಕ್ಕೆ ಸಿಗುತ್ತಿಲ್ಲ. ಹೀಗಾಗಿ ಜನರು ಸಮಸ್ಯೆ ಹೇಳಿಕೊಳ್ಳಲು ನಮ್ಮ ಬಳಿ ಬರುತ್ತಾರೆ ಎಂದರು.ಆಡಳಿತ ಪಕ್ಷದ ಸದಸ್ಯ ಡಾ.ರವಿ ಮಾತನಾಡಿ, ಜಿ.ಪಂ. ಹಲ್ಲು ಕಿತ್ತ ಹಾವಿನಂತಾಗಿದೆ. ಸರ್ಕಾರದ ಹಣ ಸದ್ಬಳಕೆ ಆಗುತ್ತಿಲ್ಲ. 2011-14ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಒಟ್ಟು ರೂ. 355 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ಎಷ್ಟು ಖರ್ಚಾಗಿದೆ. ಜಿಲ್ಲೆಯ 321 ಗ್ರಾ.ಪಂ.ಗಳಲ್ಲಿ ಎಷ್ಟು ನೌಕರರಿದ್ದಾರೆ, ನಿರ್ವಹಣೆ ಹೇಗಿದೆ ಎಂಬ ಮಾಹಿತಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಬಳಿಗೆ ನಿಯೋಗ

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಜೂನ್ 25ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಲಿದೆ.ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಗುವುದು. ಹೆಚ್ಚಿನ ಅನುದಾನ ಕೋರುವುದಾಗಿ ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಸಭೆಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.