ಶನಿವಾರ, ಏಪ್ರಿಲ್ 10, 2021
30 °C

ಟೀಕಾಸ್ತ್ರಕ್ಕೆ ಕಾಂಗ್ರೆಸ್ ಎದಿರೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೀಕಾಸ್ತ್ರಕ್ಕೆ ಕಾಂಗ್ರೆಸ್ ಎದಿರೇಟು

ವಿರೋಧಿಗಳ ಭ್ರಷ್ಟಾಚಾರದ ಕೊಡ ತುಂಬಿದೆ: ಸೋನಿಯಾನವದೆಹಲಿ (ಪಿಟಿಐ):
ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳ ಕುರಿತು  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,  ಭಾನುವಾರ ಇಲ್ಲಿ  ನಡೆದ ಪಕ್ಷದ ರ‌್ಯಾಲಿಯಲ್ಲಿ ಟೀಕಾಕಾರರ ವಿರುದ್ಧ ಕಟು ಮಾತುಗಳಲ್ಲಿ ಪ್ರತ್ಯುತ್ತರ ನೀಡಿದ್ದಾರೆ.ಕಾಂಗ್ರೆಸ್ ಶಕ್ತಿಪ್ರದರ್ಶನ ಎಂದೇ ಭಾವಿಸಲಾದ ಇಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪಕ್ಷದ ಕಾರ‌್ಯಕರ್ತರ ಬೃಹತ್ ರ‌್ಯಾಲಿ, ಸಮಾವೇಶದಲ್ಲಿ  ಮಾತನಾಡಿದ ಸೋನಿಯಾ ಗಾಂಧಿ, `ಭ್ರಷ್ಟಾಚಾರ ಬಿಜೆಪಿಯ ಕುತ್ತಿಗೆವರೆಗೂ ತಲುಪಿದ್ದು ಬೇರೆಯವರಿಗೆ ಉಪದೇಶ ಮಾಡುವ ನೈತಿಕತೆ ಕಳೆದುಕೊಂಡಿದೆ~ ಎಂದು ತೀಕ್ಷ್ಣವಾಗಿ ನುಡಿದರು. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಸೋನಿಯಾ, `ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡುವವರ ಕುತ್ತಿಗೆವರೆಗೆ ಈಗ ಭ್ರಷ್ಟಾಚಾರ ಬಂದು ತಲುಪಿದೆ. ಬೇರೆಯವರಿಗೆ ಕಂದಕ ತೋಡುತ್ತಿರುವ ಅವರಿಗೆ ಈಗಾಗಲೇ ಬಾವಿ ಸಿದ್ಧವಾಗಿದೆ~ ಎಂದೂ ತಿರುಗೇಟು ನೀಡಿದರು.`ಭ್ರಷ್ಟಾಚಾರ ಕ್ಯಾನ್ಸರ್‌ನಂತೆ ಹಬ್ಬುತ್ತಿದೆ ಎನ್ನುವುದನ್ನು ನಾನೂ ಒಪ್ಪಿಕೊಳ್ಳುವೆ. ಅದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಹಿಂದೆಯೂ ಈ ಕಾಯಿಲೆ ವಿರುದ್ಧ ನಾವು ಹೋರಾಡಿದ್ದೇವೆ. ನಮ್ಮೆಲ್ಲ ಬಲ  ಒಟ್ಟುಗೂಡಿಸಿ ನಮ್ಮ ಹೋರಾಟ ಮುಂದುವರೆಸುತ್ತೇವೆ~ ಎಂದು ಭರವಸೆ ನೀಡಿದರು. ಭಾರತದ ಮುನ್ನಡೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಅಗತ್ಯವಾಗಿದೆ. `ಎಫ್‌ಡಿಐ~ನಿಂದ ಪ್ರಗತಿ ಹಾಗೂ ಉದ್ಯೋಗ ಹೆಚ್ಚಳ   ಸಾಧ್ಯ ಎಂದೂ ಸೋನಿಯಾ ಪ್ರತಿಪಾದಿಸಿದರು.  ಪ್ರಧಾನಿ ಸಿಂಗ್ ಅವರು ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ ಸೋನಿಯಾ, ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಕೆಲ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶಕ್ಕೆ ಇದರಿಂದ ಹೆಚ್ಚಿನ ಪರಿಣಾಮವೇನೂ ಆಗಲಿಲ್ಲ. ಯುಪಿಎ ಸರ್ಕಾರವನ್ನು ಅಸ್ಥಿರಗೊಳಿಸುವ ವಿರೋಧ ಪಕ್ಷಗಳಿಗೆ, ಜನರಿಗೆ ಬೇಕಾದ ಕಾನೂನುಗಳು ಅನುಷ್ಠಾನಗೊಳ್ಳುವುದು ಬೇಕಾಗಿಲ್ಲ. ಈ ಜನ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಭದ್ರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.ಸಿಂಗ್ ಪ್ರತಿಪಾದನೆ: ಬಹುಬ್ರಾಂಡ್‌ನ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಂತಹ (ಎಫ್‌ಡಿಐ)ಪ್ರಮುಖ ಕಾರ್ಯಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಅವರು ಸ್ಪಷ್ಟಪಡಿಸಿದರು. ಎಫ್‌ಡಿಐ ಸೇರಿದಂತೆ ತಮ್ಮ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡು ಮಾತನಾಡಿದ ಸಿಂಗ್, `ನಮ್ಮನ್ನು ವಿರೋಧಿಸುತ್ತಿರುವವರಿಗೆ ಶೀಘ್ರ ತಮ್ಮ ತಪ್ಪಿನ ಅರಿವಾಗುತ್ತದೆ~ ಎಂದರು.ತೈಲ ಬೆಲೆ ಏರಿಕೆ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಬಡವರ ಹಿತಾಸಕ್ತಿ ಕಾಪಾಡಲಾಗಿದ್ದು ಇದೇ ಕಾರಣಕ್ಕೆ ಸೀಮೆ ಎಣ್ಣೆ ದರ ಹೆಚ್ಚಿಸಲಾಗಿಲ್ಲ. ಸೀಮೆ ಎಣ್ಣೆ ದರ ಹೆಚ್ಚಳಕ್ಕೆ ಏನೆಲ್ಲ ಒತ್ತಡ ಬಂದಿದ್ದರೂ ಸರ್ಕಾರ ಇದಕ್ಕೆಲ್ಲ ಮಣಿದಿಲ್ಲ. ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿಸಲು ಕಾಂಗ್ರೆಸ್ ಹೊರಟಿದ್ದು ಇದಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸುತ್ತಿದೆ ಎಂದರು.ಭ್ರಷ್ಟಾಚಾರ ತಡೆಗೆ ಈಗಾಗಲೇ ಕ್ರಾಂತಿಕಾರಿಯಾದ ಮಾಹಿತಿ ಹಕ್ಕು ಜಾರಿಗೆ ತರಲಾಗಿದೆ. ಆಹಾರ ಭದ್ರತೆ ಮಸೂದೆ ಹಾಗೂ ಬಲಿಷ್ಠ ಲೋಕಪಾಲ ಮಸೂದೆ ತರಲೂ ಸರ್ಕಾರ ಬದ್ಧವಾಗಿದೆ ಎಂದು  ಪುನರುಚ್ಚರಿಸಿದರು.

ದೇಶದ ಎಲ್ಲ ಬ್ಲಾಕ್, ಜಿಲ್ಲೆಗಳ ಕಾಂಗ್ರೆಸ್ ಘಟಕದ ಅಧ್ಯಕ್ಷರುಗಳು, ಕಾಂಗ್ರೆಸ್ ಆಡಳಿತ ಇರುವ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಕಾರ‌್ಯಕರ್ತರು ರಾಮಲೀಲಾ ಮೈದಾನದಲ್ಲಿ ಸೇರಿದ್ದು ಗಮನಾರ್ಹವಾಗಿತ್ತು.ಕಿಡಿ ಹೊತ್ತಿಸಿದ ರಾಹುಲ್ ಹೇಳಿಕೆ

`ಎಫ್‌ಡಿಐ~ ವಿರೋಧಿಸುತ್ತಿರುವ ಬಿಜೆಪಿ ಧೋರಣೆಯನ್ನು  ಕಟುವಾಗಿ ಟೀಕಿಸಿದ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ರಾಹುಲ್ ಗಾಂಧಿ, `ಎಫ್‌ಡಿಐ ಅನ್ನು ಮೊದಲು ಪ್ರಸ್ತಾಸಿದ್ದೆ ಬಿಜೆಪಿ. ಅವರು ಆಗ ದುರ್ಬಲರಾಗಿದ್ದರು. ಹೀಗಾಗಿ ಅವರಿಗೆ ಅದನ್ನು ಅನುಷ್ಠಾನಕ್ಕೆ ತರಲು ಆಗಲಿಲ್ಲ. ನಾವು ಬಲಿಷ್ಠರಾಗಿರುವುದರಿಂದಲೇ ಇದು ಸಾಧ್ಯವಾಯಿತು. ಇದೇ ಕಾರಣಕ್ಕೆ ಅವರು ಸಂಸತ್ತಿನಲ್ಲಿ ಇದಕ್ಕೆ ಒಪ್ಪಿಗೆ ನೀಡುವ ಮಾತು ಆಡುತ್ತಿಲ್ಲ~ ಎಂದರು.ಬಹು ಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ಎಫ್‌ಡಿಐ ಜಾರಿಯಾದಲ್ಲಿ   ರೈತರಿಗೆ ಲಾಭವಾಗುತ್ತದೆ. ಬಡವರು ಉದ್ಧಾರವಾಗಬೇಕಾದರೆ ಎಫ್‌ಡಿಐ ಅನಿವಾರ‌್ಯ. ಬರಿ ವಿರೋಧ ಮಾಡುವುದಕ್ಕೆ ವಿರೋಧಿಸುವ ವಿರೋಧಪಕ್ಷಗಳ ಧೋರಣೆ ಸರಿಯಲ್ಲ. ಎನ್‌ಡಿಎ ಅಧಿಕಾರದಲ್ಲಿದ್ದಾಗ ನಾವು ವಿರೋಧ ಪಕ್ಷದ ಸಾಲಿನಲ್ಲಿದ್ದೆವು. ಆಗ ಉಂಟಾದ ಕಾರ್ಗಿಲ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾವು ಎನ್‌ಡಿಎಗೆ ಬೆಂಬಲ ನೀಡಲಿಲ್ಲವೆ? ಎಂದು ರಾಹುಲ್ ಪ್ರಶ್ನಿಸಿದರು.ಕಾರ್ಗಿಲ್‌ಗೆ ತಳಕು ಸರಿಯಲ್ಲ: ಕಾರ್ಗಿಲ್ ಯುದ್ಧದ ವಿಷಯದಲ್ಲಿ ಆಗ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರ ಬೆಂಬಲಿಸಿರುವ ಕಾಂಗ್ರೆಸ್ ಈಗ `ಎಫ್‌ಡಿಐ~  ಬೆಂಬಲಿಸಬೇಕು ಎಂಬ ಅರ್ಥದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಕಾರ್ಗಿಲ್ ಬಿಕ್ಕಟ್ಟು ಪರಿಹಾರವಾಗಿ ದೇಶ ಜಯ ಸಾಧಿಸಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ದೃಢ ಅಪೇಕ್ಷೆಯಾಗಿತ್ತು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯವೇ ಇರಲಿಲ್ಲ.

 

ಹಾಗಾಗಿ ಕಾಂಗ್ರೆಸ್ ಆ ಸಂಕಷ್ಟದ ಸನ್ನಿವೇಶದಲ್ಲಿ ಎನ್‌ಡಿಎ ಸರ್ಕಾರವನ್ನು ಬೆಂಬಲಿಸಿರುವುದರಲ್ಲಿ ವಿಶೇಷ ಏನೂ ಇರಲಿಲ್ಲ. ಇದೇ ರೀತಿಯ ಬೆಂಬಲವನ್ನು ಎಫ್‌ಡಿಐ ವಿಚಾರದಲ್ಲೂ ವ್ಯಕ್ತಪಡಿಸಬೇಕು ಎಂದರೆ ಹೇಗೆ ಎಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.