ಟೀಕೆಗಳಿಗೆ ಸಚಿನ್ ಬ್ಯಾಟ್‌ನಿಂದಲೇ ಉತ್ತರ

7
11 ತಿಂಗಳ ಬಳಿಕ ತೆಂಡೂಲ್ಕರ್ ಅರ್ಧ ಶತಕ; ಆಂಗ್ಲರ ಮೇಲುಗೈ

ಟೀಕೆಗಳಿಗೆ ಸಚಿನ್ ಬ್ಯಾಟ್‌ನಿಂದಲೇ ಉತ್ತರ

Published:
Updated:
ಟೀಕೆಗಳಿಗೆ ಸಚಿನ್ ಬ್ಯಾಟ್‌ನಿಂದಲೇ ಉತ್ತರ

ಕೋಲ್ಕತ್ತ: `ಮೌಂಟ್ ಎವರೆಸ್ಟ್ ಅಲುಗಾಡಿಸಲು ಪುಟ್ಟ ಬಿರುಗಾಳಿಗೆ ಸಾಧ್ಯವೇ? ಸಚಿನ್ ಅವರನ್ನು ಹೆಚ್ಚು ಟೀಕಿಸಲು ಹೋಗಬೇಡಿ. ಸದಾ ಪವಾಡ ಮಾಡುತ್ತಿರಲು ಅವರ ಕೈಯಲ್ಲಿ ಸುದರ್ಶನ ಚಕ್ರವಿಲ್ಲ' ಎಂದು ವೀಕ್ಷಕ ವಿವರಣೆಗಾರ ನವಜೋತ್ ಸಿಂಗ್ ಸಿಧು ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ತೆಂಡೂಲ್ಕರ್ ಅವರನ್ನು ಸಮರ್ಥಿಸಿಕೊಂಡಿದ್ದರು.ಅಂದ ಹಾಗೆ, ಈಡನ್ ಗಾರ್ಡನ್ಸ್‌ನಲ್ಲಿ ಬುಧವಾರ ದೊಡ್ಡ ಇನಿಂಗ್ಸ್ ಕಟ್ಟಲು ಸಚಿನ್‌ಗೆ ಸಾಧ್ಯವಾಗಲಿಲ್ಲ ನಿಜ. ಆದರೆ ತಮ್ಮಲ್ಲಿ ಇನ್ನೂ ಶಕ್ತಿ ಇದೆ ಎಂಬುದನ್ನು ಅವರು ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಉತ್ತರಿಸಿದರು. 76 ರನ್ ಗಳಿಸುವ ಮೂಲಕ ದೀರ್ಘಕಾಲದ ವೈಫಲ್ಯಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು.ಪರಿಣಾಮ ಭಾರತ ತಂಡದವರು ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಿಂದ ಪಾರಾದರು. ಆತಿಥೇಯ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್ ನಲ್ಲಿ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದೆ.ಆದರೆ ಮೊದಲ ದಿನ ಮೇಲುಗೈ ಸಾಧಿಸಿದ್ದು ಆಂಗ್ಲರು. ಕ್ರಿಸ್‌ಮಸ್‌ಗೆ ಮುನ್ನವೇ ಅದ್ಭುತ ಉಡುಗೊರೆಗಾಗಿ ಕಾದಿರುವ ಇಂಗ್ಲೆಂಡ್ ತಂಡದವರು ಆ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನೇ ಇಟ್ಟಿದ್ದಾರೆ.ಇದಕ್ಕೆ ಕಾರಣವಾಗಿದ್ದು ವೇಗಿ ಆ್ಯಂಡರ್ಸನ್ (68ಕ್ಕೆ3) ಅವರ ರಿವರ್ಸ್ ಸ್ವಿಂಗ್ ಜಾದೂ. ಜೊತೆಗೆ ಪಿಚ್ ಸ್ವರೂಪ ಸಂಬಂಧ ಎದ್ದಿದ್ದ ವಿವಾದಕ್ಕೂ ಸದ್ಯದ ಮಟ್ಟಿಗೆ ತೆರೆಬಿದ್ದಿದೆ. ಏಕೆಂದರೆ ಈಡನ್ ಪಿಚ್ ಸ್ಪಿನ್ನರ್‌ಗಳಿಗಿಂತ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತಿದೆ. ಕ್ಯೂರೇಟರ್ ಪ್ರಬೀರ್ ಮುಖರ್ಜಿ ಕೊನೆಗೂ ದೋನಿ ಮಾತು ಕೇಳಲೇ ಇಲ್ಲ.ಸಚಿನ್ ಎಚ್ಚರಿಕೆಯ ಆಟ: `ಆಡಿದ್ದು ಸಾಕು, ವಿದಾಯ ಹೇಳಿ' ಎಂಬ ಟೀಕಾ ಪ್ರಹಾರಕ್ಕೆ ಸಿಲುಕಿರುವ ಸಚಿನ್ ಈ ಪಂದ್ಯದಲ್ಲಿ ತುಂಬಾ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಟೀಕಾಕಾರರು ಹಾಗೂ ಅಭಿಮಾನಿಗಳ ಒತ್ತಡವನ್ನು ಮೆಟ್ಟಿ ನಿಂತು ಉತ್ತಮ ಹೊಡೆತಗಳನ್ನು ಪ್ರದರ್ಶಿಸಿದರು.ಅವರು 11 ತಿಂಗಳ ಬಳಿಕ ಅರ್ಧ ಶತಕ ಗಳಿಸಿದರು. ವೇಗಿ ಸ್ಟೀವನ್ ಫಿನ್ ಎಸೆತವನ್ನು ಫೈನ್ ಲೆಗ್‌ನತ್ತ ಗ್ಲ್ಯಾನ್ಸ್ ಮಾಡಿ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು. ಸಚಿನ್ (76; 202 ನಿಮಿಷ, 155 ಎ, 13 ಬೌಂ.) ಕ್ರೀಸ್‌ಗೆ ಬರುವಾಗ ಜೋರು ಕರತಾಡನ ಲಭಿಸಿತು. ಆಫ್ ಸ್ಪಿನ್ನರ್ ಸ್ವಾನ್ ಎಸೆತದಲ್ಲಿ ಒಂಟಿ ರನ್ ಗಳಿಸಿ ಅವರು ಖಾತೆ ತೆರೆದರು. ಜೊತೆಗೆ ಈ ಪಂದ್ಯದಲ್ಲಿ ಕೆಲ ದಾಖಲೆಗಳ ಶ್ರೇಯಕ್ಕೂ ಅವರು ಪಾತ್ರರಾದರು.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 34 ಸಾವಿರ ರನ್ ಗಳಿಸಿದ ಸಾಧನೆ ಮಾಡಿದರು. ಸಹಜವಾಗಿಯೇ ಈ ಖ್ಯಾತಿ ಪಡೆದ ವಿಶ್ವದ ಮೊದಲ ಆಟಗಾರ. ಅಷ್ಟು ಮಾತ್ರವಲ್ಲದೇ, ಇಂಗ್ಲೆಂಡ್ ಎದುರು ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಸಚಿನ್ (2528) ಮಾಜಿ ನಾಯಕ ಸುನಿಲ್ ಗಾವಸ್ಕರ್ (2483) ದಾಖಲೆ ಅಳಿಸಿ ಹಾಕಿದರು.ಪ್ರಮುಖವಾಗಿ ಎಡಗೈ ಸ್ಪಿನ್ನರ್ ಪನೇಸರ್ ಬೌಲಿಂಗ್‌ನಲ್ಲಿ ತುಂಬಾ ಎಚ್ಚರಿಕೆಯ ಆಟಕ್ಕೆ ಮುಂದಾದರು. ಮಾಂಟಿ ಒಂದು ಹಂತದಲ್ಲಿ ಸತತ 21 ಓವರ್ ಬೌಲ್ ಮಾಡಿದರು. ಅವರ ಬೌಲಿಂಗ್‌ನಲ್ಲಿ ಎದುರಿಸಿದ 83 ಎಸೆತಗಳಿಂದ ಸಚಿನ್ ಕೇವಲ 20 ರನ್ ಗಳಿಸಿದರು.ಆದರೆ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಕೀಪರ್ ಪ್ರಯೋರ್ ಬಲಕ್ಕೆ ಹಾರಿ ಪಡೆದ ಅತ್ಯುತ್ತಮ ಕ್ಯಾಚ್ ತೆಂಡೂಲ್ಕರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು. 13 ಟೆಸ್ಟ್‌ಗಳಲ್ಲಿ ಆ್ಯಂಡರ್ಸನ್ 8 ಬಾರಿ ಸಚಿನ್ ವಿಕೆಟ್ ಪಡೆದಿದ್ದಾರೆ. ಲಂಕಾದ ಮುತ್ತಯ್ಯ ಮುರಳೀಧರನ್ ಮಾತ್ರ ಈ ಸಾಧನೆ ಮಾಡಿದ್ದಾರೆ.`ಸಚಿನ್ ವಿಕೆಟ್ ಪಡೆಯುವುದು ಪ್ರತಿ ಬೌಲರ್‌ಗಳ ಕನಸು. ಆದರೆ ಕಡಿಮೆ ಅವಧಿಯಲ್ಲಿ ಅವರನ್ನು ಹೆಚ್ಚು ಬಾರಿ ಔಟ್ ಮಾಡಿರುವ ವಿಷಯ ಖಂಡಿತ ಖುಷಿ ನೀಡುವಂಥದ್ದು' ಎಂದು ಆ್ಯಂಡರ್ಸನ್ ಪ್ರತಿಕ್ರಿಯಿಸಿದರು.ಆಂಗ್ಲರಿಗೆ ಉಡುಗೊರೆ ನೀಡಿದ ವೀರೂ: ಸತತ ಮೂರನೇ ಬಾರಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ವೇಗ ಹಾಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿಯೇ ಎದುರಿಸಿದ್ದರು.ಆದರೆ ಸೆಹ್ವಾಗ್ ವಿಕೆಟ್ ಆಂಗ್ಲರಿಗೆ ಉಡುಗೊರೆಯಾಗಿ ಲಭಿಸಿತು. ಅಸಾಧ್ಯವಾದ ರನ್‌ಗೆ ಓಡಲು ಹೋಗಿ ಸೆಹ್ವಾಗ್ ರನ್‌ಔಟ್ ಆದರು. ಇದು ಬೇಜವಾಬ್ದಾರಿಯ ಪರಮಾವಧಿಗೆ ಅತ್ಯುತ್ತಮ ಉದಾಹರಣೆ. ಮೂರನೇ ರನ್‌ಗೆ ಓಡಲು ಮುಂದಾದಾಗ ಈ ಎಡವಟ್ಟು ಸಂಭವಿಸಿತು. ವೀರೂ ಕರೆಗೆ ಗಂಭೀರ್ ಸ್ಪಂದಿಸಿದ್ದರೆ ಆ ರನ್ ಪೂರೈಸಬಹುದಿತ್ತು. ಆದರೆ ಗಂಭೀರ್ ಚೆಂಡಿನ ಹಾದಿ ಗಮನಿಸುತ್ತಿದ್ದರು.ಮುಂದುವರಿದ ಮಾಂಟಿ ಕೈಚಳಕ: ಉತ್ತಮ ಫಾರ್ಮ್‌ನಲ್ಲಿದ್ದ ಪೂಜಾರ ಬೌಲ್ಡ್ ಆದಾಗ ಪನೇಸರ್ ಸಂಭ್ರಮಿಸಿದ ರೀತಿ ಗಮನ ಸೆಳೆಯುವಂಥದ್ದು. ಸೀಟಿ (ವಿಷಲ್) ಹಾಕುತ್ತಾ ನೃತ್ಯ ಮಾಡಿದರು. ಅಹಮದಾಬಾದ್‌ನಲ್ಲಿ ದ್ವಿಶತಕ, ಮುಂಬೈನಲ್ಲಿ ಶತಕ ಗಳಿಸಿದ್ದ ಚೇತೇಶ್ವರ ಇಲ್ಲಿ ಬೇಗನೇ ವಿಕೆಟ್ ಒಪ್ಪಿಸಿದರು.ಈ ಪಿಚ್‌ನಲ್ಲಿ ಅಷ್ಟೇನು ಬೌನ್ಸ್ ಇಲ್ಲ. ಆದರೆ ಪನೇಸರ್ 90-95 ಕಿ.ಮೀ. ವೇಗದಲ್ಲಿ ಚೆಂಡನ್ನು ಹಾಕಿ ಬೌನ್ಸ್ ಮಾಡಲು ಪ್ರಯತ್ನಿಸುತ್ತಿದ್ದರು. ಗಂಭೀರ್ ವಿಕೆಟ್ ಪಡೆದ ಎಸೆತ ಬೌನ್ಸ್ ಆಗಿದ್ದೇ ಅದಕ್ಕೆ ಸಾಕ್ಷಿ. ಆದರೆ ಗಂಭೀರ್ (60; 124 ಎ, 12 ಬೌಂ.) ಶತಕ ಗಳಿಸದೆ 26 ಇನಿಂಗ್ಸ್‌ಗಳು ಕಳೆದು ಹೋದವು. ಈ ಸರಣಿಯಲ್ಲಿ ಕೊಹ್ಲಿ ಮತ್ತೆ ಕೈಕೊಟ್ಟರು.ಈಡೇರದ ಭಜ್ಜಿ ಕನಸು: ತಮ್ಮ ನೆಚ್ಚಿನ ಅಂಗಳದಲ್ಲಿ ನೂರನೇ ಪಂದ್ಯ ಆಡುವ ಆಫ್ ಸ್ಪಿನ್ನರ್ ಹರಭಜನ್ ಕನಸು ಈಡೇರಲಿಲ್ಲ. ಆ ಸ್ಮರಣೀಯ ಕ್ಷಣಕ್ಕಾಗಿ ಮತ್ತಷ್ಟು ದಿನ ಕಾಯಬೇಕು. ಭಜ್ಜಿ ಬದಲಿಗೆ ವೇಗಿ ಇಶಾಂತ್ ಸ್ಥಾನ ಪಡೆದಿದ್ದಾರೆ.

ಸ್ಕೋರ್ ವಿವರ:

ಭಾರತ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ

7 ವಿಕೆಟ್ ನಷ್ಟಕ್ಕೆ 273

ಗೌತಮ್ ಗಂಭೀರ್ ಸಿ ಟ್ರಾಟ್ ಬಿ ಮಾಂಟಿ ಪನೇಸರ್  60

ವೀರೇಂದ್ರ ಸೆಹ್ವಾಗ್ ರನ್‌ಔಟ್ (ಫಿನ್/ಪ್ರಯೋರ್)  23

ಚೇತೇಶ್ವರ ಪೂಜಾರ ಬಿ ಮಾಂಟಿ ಪನೇಸರ್  16

ಸಚಿನ್ ತೆಂಡೂಲ್ಕರ್ ಸಿ ಪ್ರಯೋರ್ ಬಿ ಆ್ಯಂಡರ್ಸನ್  76

ವಿರಾಟ್ ಕೊಹ್ಲಿ ಸಿ ಗ್ರೇಮ್  ಸ್ವಾನ್ ಬಿ ಜೇಮ್ಸ ಆ್ಯಂಡರ್ಸನ್  06

ಯುವರಾಜ್ ಸಿಂಗ್ ಸಿ  ಕುಕ್ ಬಿ ಗ್ರೇಮ್ ಸ್ವಾನ್  32

ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್  22

ಆರ್.ಅಶ್ವಿನ್ ಬಿ ಜೇಮ್ಸ ಆ್ಯಂಡರ್ಸನ್  21

ಜಹೀರ್ ಖಾನ್ ಬ್ಯಾಟಿಂಗ್  00

ಇತರೆ (ಬೈ-5, ಲೆಗ್‌ಬೈ-11, ನೋಬಾಲ್-1)  17

ವಿಕೆಟ್ ಪತನ: 1-47 (ಸೆಹ್ವಾಗ್; 10.1); 2-88 (ಪೂಜಾರ; 25.4); 3-117 (ಗಂಭೀರ್; 41.1); 4-136 (ಕೊಹ್ಲಿ; 48.4); 5-215 (ಯುವರಾಜ್; 68.3); 6-230 (ಸಚಿನ್; 74.1); 7-268 (ಅಶ್ವಿನ್; 88.3).

ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 21-5-68-3, ಸ್ಟೀವನ್ ಫಿನ್ 20-2-69-0 (ನೋಬಾಲ್-1), ಮಾಂಟಿ ಪನೇಸರ್ 35-12-74-2, ಗ್ರೇಮ್ ಸ್ವಾನ್ 14-1-46-1

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry