ಟೀಕೆಯನ್ನು ಸವಾಲಾಗಿ ಸ್ವೀಕರಿಸಿ: ಉದಾಸಿ

7

ಟೀಕೆಯನ್ನು ಸವಾಲಾಗಿ ಸ್ವೀಕರಿಸಿ: ಉದಾಸಿ

Published:
Updated:

ಸೊರಬ: ಟೀಕೆ ಮಾಡುವವರಿಗೆ ಯಾರೂ ಅಂಜಬೇಕಿಲ್ಲ.  ರಾಜಕೀಯ ಹಿನ್ನೆಲೆಯಲ್ಲಿ ಟೀಕೆ ಮಾಡಿದರೆ ಅದನ್ನು ಸವಾಲಾಗಿ ಸ್ವೀಕರಿಸುವ ಛಲ ಇರಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಹೇಳಿದರು.ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಕುಮಟಾ-ಕಡಮಡಗಿ ರಾಜ್ಯ ಹೆದ್ದಾರಿ-48 ರ ಸರಪಳಿ ರಸ್ತೆ  ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಾಮಾನ್ಯ.  ವಿರೋಧಿಗಳಿಗೆ ಟೀಕೆ ಮಾಡಲು ವಸ್ತು ಬೇಕಿಲ್ಲ.  ಕೇವಲ ಬುದ್ಧಿವಂತಿಕೆ ಇದ್ದರೆ ಸಾಕು.  ರಚನಾತ್ಮಕ ಟೀಕೆಯನ್ನು ವಿನಯ ಪೂರ್ವಕವಾಗಿ ಸ್ವೀಕರಿಸಿ ಅಭಿವೃದ್ಧಿಯತ್ತ ಮುನ್ನುಗ್ಗಬೇಕು ಎಂದರು.ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮೂಲಭೂತ ಸೌಕರ್ಯಗಳಾದ ನೀರಾವರಿ, ರಸ್ತೆ, ವಿದ್ಯುತ್‌ಗೆ ಪ್ರಥಮ ಆದ್ಯತೆ ನೀಡಿದ್ದರಿಂದ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಅಭಿವೃದ್ಧಿಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ.  ಇದಕ್ಕೆ ಯಡಿಯೂರಪ್ಪನವರ ಸಾಧನೆಯೇ ಕಾರಣ.  ಪಕ್ಷದಲ್ಲಿ ಆಂತರಿಕ ಕಲಹ ಸಾಮಾನ್ಯ. ಆದರೆ, ರಾಜ್ಯದ ಜನತೆಗೆ ಎಂದಿಗೂ ಮೋಸ ಮಾಡಿಲ್ಲ.  ಜನತೆಯ ತೆರಿಗೆಯಿಂದ ಬಂದ ಹಣದಿಂದಲೇ ವಿವಿಧ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದರು.ರಾಜಕೀಯದಲ್ಲಿ ಬದ್ಧತೆ ಇದ್ದಾಗ ಅಭಿವೃದ್ಧಿ ಸಾಧ್ಯ.  ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಆಡಳಿತವೇ ಸಾಕ್ಷಿ. ಕೋಟಿ ರೂಪಾಯಿ ಆಯವ್ಯಯ ಮಂಡಿಸಿದ್ದು ರಾಜ್ಯ ರಾಜಕೀಯದ ಇತಿಹಾಸದಲ್ಲಿ ಮೈಲಿಗಲ್ಲು.  ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗದಂತೆ ಬಜೆಟ್ ಮಂಡಿಸಿರುವುದು ಬಿಜೆಪಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಬದ್ಧತೆ ಇಲ್ಲದ ವ್ಯಕ್ತಿಗಳು ಜನಸೇವೆಗೆ ಬಂದರೆ ಜನರ ಸಮಸ್ಯೆ ನೀಗಿಸಲು ಸಾಧ್ಯವಿಲ್ಲ.  ಕೆಲವರು ಮಾತನಾಡುವಾಗ ಗಂಭೀರತೆ ಅರಿಯದೇ ಬೇರೆಯವರ ಬಗ್ಗೆ ಟೀಕೆ, ಟಿಪ್ಪಣಿಯಲ್ಲಿ ಕಾಲ ಕಳೆಯುತ್ತಾರೆ.  ಮತ್ಸರದಿಂದ ತೆಗಳುವವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ಅದನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.ಶಾಸಕ ಎಚ್. ಹಾಲಪ್ಪ ಮಾತನಾಡಿ,  ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ.  ಈ  ಹಿಂದೆ ಆಡಳಿತ ನಡೆಸಿದವರು ಈಗ ಆಗುತ್ತಿರುವ ಅಭಿವೃದ್ಧಿ ಸಹಿಸದೇ ತಮ್ಮ ಆಡಳಿತಾವಧಿಯಲ್ಲಿ ಆದ ಯೋಜನೆಗಳು ಎಂದು ಸುಳ್ಳು ಹೇಳಿ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಮಾಜಿ ಉಪಾಧ್ಯಕ್ಷ ಎಚ್. ಗಂಗಾಧರಪ್ಪ, ಸದಸ್ಯರಾದ ಕೋಮಲ ನಿರಂಜನ, ಮಲ್ಲಮ್ಮ, ಗುರುಕುಮಾರ್ ಪಾಟೀಲ್, ಎಪಿಎಂಸಿ ಅಧ್ಯಕ್ಷ ಗಜಾನನ ರಾವ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೊಳೆಲಿಂಗಪ್ಪ, ಉಪಾಧ್ಯಕ್ಷ ರಾಜಪ್ಪ ನಡಳ್ಳಿ, ಸದಸ್ಯರಾದ ಮಾಲಾ, ಆನಂದಪ್ಪ, ಗೌರಮ್ಮ ಭಂಡಾರಿ, ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ಎಂಜಿನಿಯರ್ ಬಿ.ಎಸ್. ಬಾಲನ್, ಕಾಂತರಾಜ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry