ಶನಿವಾರ, ಮಾರ್ಚ್ 6, 2021
22 °C

ಟೀವಿ ಮೇಲೆ ಕಲಿಕೆಯ ಲೀಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೀವಿ ಮೇಲೆ ಕಲಿಕೆಯ ಲೀಲೆ

ನಗರದಲ್ಲಿ ಇಂದಿಗೂ ಸೆಟ್‌ಟಾಪ್ ಬಾಕ್ಸ್‌ಗಳ ಮಾರಾಟ ಭರಾಟೆ ನಿಂತಿಲ್ಲ. ಸ್ಥಳೀಯ ಕೇಬಲ್ ಹಾಗೂ ಖಾಸಗಿ ಡಿಟಿಎಚ್‌ಗಳು ಗ್ರಾಹಕರ ಬೇಟೆಯನ್ನು ಮುಂದುವರಿಸಿವೆ. ಈ ನಡುವೆಯೇ ಡಿಟಿಎಚ್ ಎಂಬುದು ಕಾರ್ಯಕ್ರಮ ಪ್ರಸಾರ ಮಾಡಲು ಮಾತ್ರವಲ್ಲ, ಉಪಯುಕ್ತ ಮಾಹಿತಿ ನೀಡಲೂ ಸಾಧ್ಯ ಎಂದೆನ್ನುತ್ತಿದೆ ತಂತ್ರಜ್ಞಾನ. ಇದಕ್ಕೆ ಮುನ್ನುಡಿ ಬರೆದಿರುವುದು ಟಾಟಾ ಸ್ಕೈ. `ಎಡುಟೈನ್ಮೆಂಟ್' ಎಂಬ ಹೊಸಬಗೆಯ ಪರಿಕಲ್ಪನೆಯೊಂದಿಗೆ ಮನರಂಜನೆಯ ಅರ್ಥವನ್ನು ಬದಲಿಸಿರುವ ಸಂಸ್ಥೆಯು ಡಿಜಿಟಲೀಕರಣದ ಹೊಸ ಮುಖವನ್ನು ಅನಾವರಣಗೊಳಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿಕ್ರಮ್ ಮೆಹ್ರಾ ಹೇಳಿಕೊಂಡಿದ್ದಾರೆ.ಅವರ ಪ್ರಕಾರ ಡಿಜಿಟಲೀಕರಣದ ಕಾರ್ಯ ಬಹುಪಾಲು ಮುಗಿಯುವ ಹಂತದಲ್ಲಿದೆ. `ಬಡತನ ರೇಖೆಗಿಂತ ಕೆಳಗಿರುವವರಿಗೆ ಸೆಟ್‌ಟಾಪ್ ಬಾಕ್ಸ್ ಖರೀದಿ ಹೊರೆಯಾಗಬಹುದು ಎಂಬ ಮಾತು ಸುಳ್ಳಾಗಿದೆ. ಏಕೆಂದರೆ ಈ ಹಿಂದಿಗಿಂತಲೂ ಅಗ್ಗದ ಬೆಲೆಗೆ ಎಲ್‌ಸಿಡಿ ಹಾಗೂ ಎಲ್‌ಇಡಿ ಟಿವಿಗಳು ಲಭ್ಯ. ಗುಣಮಟ್ಟದ ಚಿತ್ರಗಳನ್ನು ನೋಡಬಯಸುವ ಪ್ರತಿಯೊಬ್ಬರೂ ಸೆಟ್‌ಟಾಪ್ ಬಾಕ್ಸ್‌ನ ಮೊರೆ ಹೋಗುತ್ತಿರುವುದರಿಂದ ಶೇ 50ರಷ್ಟು ಹರಿವು ಎಲ್‌ಸಿಡಿ/ಎಲ್‌ಇಡಿ ಟಿವಿ ಖರೀದಿದಾರರಿಂದಲೇ ಬರುತ್ತಿದೆ' ಎಂಬುದು ಅವರ ವಾದ.ಸೆಟ್‌ಟಾಪ್ ಬಾಕ್ಸ್‌ಗಳು ಬಳಕೆಗೆ ಬಂದ ನಂತರ `ಪ್ಯಾಕೇಜ್' ಭೂತಗಳು ಜನರಲ್ಲಿ ಭಯ ಹುಟ್ಟಿಸಿವೆ. ಕನ್ನಡ ಮಾತನಾಡುವವರಿಗೆ ತಮಿಳು ಅಥವಾ ಬಂಗಾಳಿ ಕಾರ್ಯಕ್ರಮಗಳನ್ನು ನೀಡಿ ಬೇಡದ ಕಾರ್ಯಕ್ರಮಗಳ ಶುಲ್ಕ ಕಸಿಯುವ ಪ್ರವೃತ್ತಿ ನಿಲ್ಲಬೇಕಿದೆ ಎಂದು ಪ್ರತಿಪಾದಿಸುವ ವಿಕ್ರಂ ಅವರು, `ಬೇಕಾದ ಕಾರ್ಯಕ್ರಮಕ್ಕಷ್ಟೇ ಹಣ ನೀಡುವ ವಿನೂತನ ಯೋಜನೆಯನ್ನು ಟಾಟಾ ಸ್ಕೈ ಪರಿಚಯಿಸುತ್ತಿದೆ. ಇದರ ಮೂಲಕ ಮಕ್ಕಳ ಪ್ಯಾಕೇಜ್‌ನಲ್ಲಿ ಇರುವ ಹತ್ತಾರು ಚಾನೆಲ್‌ಗಳಲ್ಲಿ ಒಂದೇ ಚಾನೆಲ್ ಬೇಕೆಂದರೂ ಅದನ್ನು ನೀಡಲು ಟಾಟಾ ಸ್ಕೈ ಸಿದ್ಧ' ಎಂದು ತಮ್ಮ ನೂತನ ಕೊಡುಗೆಯನ್ನು ತಿಳಿಸಿದರು.ಭಾರತದ ಬಹುತೇಕ ಮನೆಗಳಲ್ಲಿ ಟಿವಿಗಳಿವೆ. ಆದರೆ ಕಂಪ್ಯೂಟರ್‌ಗಳಿಲ್ಲ. ಹೀಗಾಗಿ ಟಿವಿ ಮೂಲಕವೇ ಮಾಹಿತಿ ನೀಡಲು ಒಂದಿಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇಂಗ್ಲಿಷ್ ಭಾಷೆ ಕಲಿಯಲಿಚ್ಛಿಸುವವರು ಇಂಗ್ಲಿಷ್ ಕಲಿಕಾ ಕಾರ್ಯಕ್ರಮವನ್ನು ಅವರವರ ಸಮಯಕ್ಕೆ ಅನುಗುಣವಾಗಿ ವೀಕ್ಷಿಸಬಹುದಾಗಿದೆ. ಅರವತ್ತು ದಿನ ಪ್ರಸಾರವಾಗಲಿರುವ ಈ ಕಾರ್ಯಕ್ರಮಕ್ಕೆ ಪ್ರತಿ ದಿನ 75 ಪೈಸೆ ನೀಡಿದರಾಯಿತು. ಅದರಂತೆಯೇ `ವೇದಿಕ್ ಮ್ಯಾಥ್ಸ್' ಎಂಬ ಗಣಿತ ಕಲಿಕಾ ಕಾರ್ಯಕ್ರಮವನ್ನೂ ಕಂಪೆನಿ ರೂಪಿಸಿದೆ.

14ರಿಂದ 23 ವಯೋಮಾನದವರಿಗಾಗಿ ರೂಪಿಸಿರುವ ಈ ಕಾರ್ಯಕ್ರಮವು ಐಐಟಿ, ಐಐಎಂ, ಜಿ-ಮ್ಯಾಟ್ ಪ್ರವೇಶ ಪರೀಕ್ಷೆ ಎದುರಿಸುವವರಿಗೆ ಅನುಕೂಲವಾಗಲಿದೆ. ನಿತ್ಯ ಹತ್ತು ರೂಪಾಯಿ ನಿಗದಿಪಡಿಸಿರುವ `ವೇದಿಕ್ ಮ್ಯಾಥ್ಸ್' ಕಾರ್ಯಕ್ರಮ ಅರವತ್ತು ದಿನಗಳ ಅವಧಿಯದ್ದಯ. ನಿತ್ಯ ನಡೆಯುವ ಪಾಠಗಳ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ವೀಕ್ಷಕರೂ ಉತ್ತರ ನೀಡುವಂತೆ ಸಂವಹನ ಮಾದರಿಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಮೂರರಿಂದ ನಾಲ್ಕರ ವಯೋಮಾನದ ಮಕ್ಕಳಿಗಾಗಿ ಅಕ್ಷರ ಕಲಿಕೆ, ಹಾಡುಗಳು ಇತ್ಯಾದಿಯನ್ನೊಳಗೊಂಡಂತೆ ಮನರಂಜನೆ ಹಾಗೂ ಕಲಿಕೆಯನ್ನು ಒಳಗೊಂಡ ಪ್ಯಾಕೇಜನ್ನೂ ಪರಿಚಯಿಸಲಾಗುವುದು' ಎಂದು ವಿಕ್ರಂ ತಿಳಿಸಿದರು.ಇವುಗಳನ್ನು ಸಿದ್ಧಪಡಿಸಲು 80 ಜನರ ತಂಡ ಕಟ್ಟಿಕೊಂಡಿರುವ ಅವರು ಇಂಗ್ಲಿಷ್ ಕಲಿಕೆಗಾಗಿ ಬ್ರಿಟಿಷ್ ಕೌನ್ಸಿಲ್ ಫಾರ್ ಇಂಗ್ಲಿಷ್, `ವೇದಿಕ್ ಮ್ಯಾಥ್ಸ್'ಗಾಗಿ ಕೋಲ್ಕತ್ತದ ವೇದಿಕ್ ಫೋರಂ ಮುಂತಾದ ಪ್ರಸಿದ್ಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.