ಟೀವಿ ವಿಶ್ವರೂಪ

7

ಟೀವಿ ವಿಶ್ವರೂಪ

Published:
Updated:
ಟೀವಿ ವಿಶ್ವರೂಪ

ಇನ್ನು ಮುಂದೆ ಹೊಸ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳು ಅನಿವಾರ್ಯವಲ್ಲ ಎಂಬ ಕಾಲ ಹತ್ತಿರವಾಗುತ್ತಿದ್ದಂತೆ ಸಿನಿಮಾಗಳೇ ನೇರವಾಗಿ ಟೀವಿ, ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ಮೂಡುವಂಥ `ತಾಂತ್ರಿಕ ಸಂಕ್ರಮಣ ಕಾಲ' ಬಂದಿದೆ.ಉಪಗ್ರಹದ ಮೂಲಕ ಚಾನೆಲ್‌ಗಳು ಬಿತ್ತರಿಸುವ ಡಿಟಿಎಚ್ ಸೇವೆಯ ಭಾಗವಾಗಿ ಪ್ರೇಕ್ಷಕ ಅಪೇಕ್ಷಿಸುವ ಹಾಗೂ ಹೊಸ ಚಿತ್ರಗಳೂ ಈಗ ಟೀವಿಯಲ್ಲೇ ಪ್ರಸಾರವಾಗುತ್ತಿವೆ. ಡಿಟಿಎಚ್ ಭಾರತಕ್ಕೆ ಪರಿಚಯವಾಗಿದ್ದು 2004ರಲ್ಲಿ. ಉಪಗ್ರಹದ ಮೂಲಕ ವಿತರಕರಿಂದ ಬಳಕೆದಾರರಿಗೆ ನೇರವಾಗಿ ವಿತರಣೆಯಾಗುವ ಈ ಸೇವೆಯನ್ನು ನಂತರದ ದಿನಗಳಲ್ಲಿ ಖಾಸಗಿ ಕಂಪೆನಿಗಳೂ ಆರಂಭಿಸಿದವು. ಕೇಬಲ್ ಮೂಲಕ ಅಸ್ಪಷ್ಟ ಚಿತ್ರಗಳನ್ನು ಬಿತ್ತರಿಸುತ್ತಿದ್ದ ಅನಲಾಗ್ ಸಿಗ್ನಲ್ ಬದಲಾಗಿ ಅದಕ್ಕೆ ಪರಿವರ್ತಕ ಬಳಸಿ ಡಿಜಿಟಲ್‌ಗೆ ಬದಲಾಯಿಸಿ ಸ್ಪಷ್ಟ ದೃಶ್ಯಗಳನ್ನು ನೀಡುವ ಮೂಲಕ ಡಿಟಿಎಚ್‌ಗಳು ಹೆಚ್ಚು ಜನಪ್ರಿಯವಾದವು. ಈ ಮೂಲಕ ಕೇಬಲ್ ಆಪರೇಟರ್‌ಗಳ ಬೃಹತ್ ಜಾಲದಿಂದ ಡಿಟಿಎಚ್ ಆಪರೇಟರ್‌ಗಳು ಹೊರಬಂದು ನೇರವಾಗಿ ಹಣ ತಮಗೇ ಸಂದಾಯವಾಗುವಂತೆ ಮಾಡಿಕೊಂಡವು.ಹೀಗೆ ಆರಂಭಗೊಂಡ ಡಿಡಿ ಡೈರೆಕ್ಟ್, ಡಿಶ್ ಟೀವಿ, ಏರ್‌ಟೆಲ್ ಡಿಜಿಟಲ್ ಟೀವಿ, ಟಾಟಾ ಸ್ಕೈ, ಸನ್ ಡೈರೆಕ್ಟ್, ರಿಲಾಯನ್ಸ್ ಡಿಜಿಟಲ್ ಟೀವಿ, ವಿಡಿಯೋಕಾನ್ ಕಂಪೆನಿಗಳು ಡಿಜಿಟಲ್ ತಂತ್ರಜ್ಞಾನವನ್ನೇ ಬಳಸಿ ಕಾಲಕ್ಕೆ ತಕ್ಕಂಥ ಸೇವೆಗಳನ್ನು ನೀಡುತ್ತಾ ಬಂದಿವೆ.

ಹೀಗೆ ಆರಂಭವಾದ ಸೇವೆಗಳು ದಿನಕ್ಕೊಂದು ಹೊಸ ಸ್ವರೂಪ ಪಡೆದುಕೊಂಡು ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಈಗ ಮಹಾನಗರಗಳಲ್ಲಿ ಡಿಟಿಎಚ್ ಸೇವೆಯಲ್ಲಿ ಅಗತ್ಯವಾಗಿರುವ ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಕಡ್ಡಾಯ (ಬೆಂಗಳೂರಿನಲ್ಲಿ ಮಾ.31ರ ನಂತರ ಸೆಟ್‌ಟಾಪ್ ಬಾಕ್ಸ್ ಕಡ್ಡಾಯ) ಮಾಡಿರುವ ಬೆನ್ನಲ್ಲೇ ಡಿಟಿಎಚ್ ಮೂಲಕವೇ ಸಿನಿಮಾಗಳ ಬಿಡುಗಡೆಗೂ ಚಿಂತನೆ ನಡೆಸಿರುವುದು ಭಾರತದ ಮಟ್ಟಿಗೆ ಹೊಸ ಬೆಳವಣಿಗೆ. ಇದೇ ಕಾರಣದಿಂದ ಕಮಲ ಹಾಸನ್ `ವಿಶ್ವರೂಪಂ' ಚಿತ್ರದ ಬಿಡುಗಡೆ ವಿವಾದ ಈಗ ಎಲ್ಲೆಡೆ ಸುದ್ದಿಯಾಗಿದೆ.ಡಿಟಿಎಚ್ ಸೇವೆ ನೀಡುವ ಕಂಪೆನಿಗಳು `ಆನ್ ಡಿಮಾಂಡ್' ಸೇವೆಯ ಮೂಲಕ ತಂತಮ್ಮ ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಸ್ಪಂದಿಸುವ ವಿಶೇಷ ಸವಲತ್ತನ್ನು ನೀಡುತ್ತಾ ಬಂದಿವೆ. ಪ್ರತಿಯೊಬ್ಬ ಬಳಕೆದಾರ 10ರಿಂದ 16 ಡಿಜಿಟ್‌ಗಳ ಖಾತೆ ಸಂಖ್ಯೆಯನ್ನು ಹೊಂದಿರುತ್ತಾರೆ. ಅವರು ಆಯಾ ತಿಂಗಳ ಅಗತ್ಯಕ್ಕೆ ತಕ್ಕಂತೆ ಮುಂಗಡ ಪಾವತಿಸಿರುವ ಹಣದಲ್ಲೇ ಗ್ರಾಹಕ ಅಪೇಕ್ಷೆ ಪಡುವ ಸಿನಿಮಾಗಳನ್ನು ಬಿತ್ತರಿಸುವ ಕಾಯಕದಲ್ಲಿ ಅವು ತೊಡಗಿಕೊಂಡಿವೆ. ವಿದೇಶಗಳಲ್ಲಿ ಚಿತ್ರಗಳನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುವುದು ಹಳೆಯ ಸುದ್ದಿ. ಆದರೆ ಪ್ರೇಕ್ಷಕರನ್ನೇ ನೆಚ್ಚಿಕೊಂಡು ಸಾವಿರಾರು ಚಿತ್ರಮಂದಿರಗಳಿರುವ ಭಾರತದಲ್ಲಿ ಇದು ದೊಡ್ಡ ಸುದ್ದಿಯೂ ಹೌದು.ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಾರದೆ ದುಬಾರಿ ವೆಚ್ಚ ಭರಿಸಲಾಗದೆ ಹಲವು ಚಿತ್ರಮಂದಿರಗಳು ಮುಚ್ಚಿವೆ. ಇವಕ್ಕೆ ಕಾರಣಗಳು ಹಲವು. ಚಿತ್ರಮಂದಿರ ಇರುವ ಸ್ಥಳದ ಮೌಲ್ಯ ಹಾಗೂ ಅದರಿಂದ ಬರುತ್ತಿರುವ ಆದಾಯದಲ್ಲಿ ಅಜಗಜಾಂತರವಿದೆ. ಜತೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ದುಬಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ನಿರ್ಮಾಪಕರು/ ವಿತರಕರು ಡಿಟಿಎಚ್‌ಗಳಿಗೆ ಚಿತ್ರಗಳನ್ನು ನೀಡುವ ಮೂಲಕ ಚಿತ್ರಮಂದಿರಗಳಿಗೆ ನೀಡುವ ಬಾಡಿಗೆ ಹಣವನ್ನು ಉಳಿಸಬಹುದಾಗಿದೆ. ಹೊಸ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಚಿತ್ರಮಂದಿರಗಳು ನೀಡುವ ಜಾಹೀರಾತಿನಂತೆ ಮುಂದೊಂದು ದಿನ ಹೊಸ ಚಿತ್ರಗಳ ಪ್ರದರ್ಶನದ ಹಕ್ಕು ಪಡೆಯುವ ಮೂಲಕ ಡಿಟಿಎಚ್‌ಗಳು ತಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುವ ದಿನಗಳೂ ದೂರವಿಲ್ಲ.ಡಿಜಿಟಲ್ ಕೇಬಲ್‌ಗಳೆಂದರೆ ಅಲ್ಲೊಂದು ಸೆಟ್‌ಟಾಪ್ ಬಾಕ್ಸ್ ಇದ್ದೇ ಇರುತ್ತದೆ. ಖಾಸಗಿ ಕಂಪೆನಿಗಳ ಡಿಟಿಎಚ್ ಸೇವೆ ಪಡೆಯದ ಬಹುತೇಕ ಬೆಂಗಳೂರಿಗರು ಕನಿಷ್ಠ ತಮ್ಮ ಬಡಾವಣೆಗಳಲ್ಲೇ ಇರುವ ಕೇಬಲ್ ಆಪರೇಟರ್‌ಗಳು ನೀಡುವ ಡಿಟಿಎಚ್ ಸೇವೆಯನ್ನು ಪಡೆದುಕೊಂಡಿದ್ದಾರೆ.  ಸೆಟ್‌ಟಾಪ್ ಬಾಕ್ಸ್‌ಗಳೂ ಈಗ ಆಧುನಿಕ ಸ್ಪರ್ಶ ಪಡೆದಿವೆ. ಕೇವಲ ಕೇಬಲ್ ಅಥವಾ ಉಪಗ್ರಹ ಮೂಲಕ ಆಗುವ ಚಾನೆಲ್‌ಗಳ ಪ್ರಸಾರವನ್ನು ಅನಲಾಗ್‌ನಿಂದ ಡಿಜಿಟಲ್‌ಗೆ ಪರಿವರ್ತಿಸುವುದರ ಜತೆಗೆ ಗೇಮ್‌ಗಳನ್ನು ಕೂಡ ಆಡಬಹುದಾಗಿದೆ. ಎಫ್‌ಎಂ ರೇಡಿಯೋ ಕೇಳಬಹುದು, ಆಟಗಳನ್ನು ಆಡಬಹುದು, ಅಂತರ್ಜಾಲ ಸೇವೆ ಪಡೆಯಬಹುದು. ಪೆನ್‌ಡ್ರೈವ್ ಹಾಕುವ ಅವಕಾಶ ಇರುವುದರಿಂದ ಬೇಕಾದ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದು. ಬೇಕಾದ ಸಿನಿಮಾ, ಪ್ರವಾಸಕ್ಕೆ ಹೋಗಿ ಬಂದ ಚಿತ್ರಗಳನ್ನು ಇದರ ಮೂಲಕವೇ ಟಿವಿಯಲ್ಲಿ ನೋಡುವ ವ್ಯವಸ್ಥೆ ಇರುವುದರಿಂದ ಇದೀಗ ಡಿಜಿಟಲ್‌ನಿಂದ ಎಲ್ಲವೂ ಸಾಧ್ಯವಾಗಿದೆ.ಕೇವಲ ಸೆಟ್‌ಟಾಪ್ ಬಾಕ್ಸ್ ಮಾತ್ರವಲ್ಲದೆ ಇತ್ತಿಚಿನ ಸ್ಮಾರ್ಟ್ ಟಿವಿಗಳಲ್ಲಿಯೂ ಪೆನ್‌ಡ್ರೈವ್ ಹಾಗೂ ಇಂಟರ್‌ನೆಟ್ ಸಂಪರ್ಕ ಇರುವುದರಿಂದ ಬೇಕಾದ ಕಾರ್ಯಕ್ರಮಗಳನ್ನು ನೇರವಾಗಿ ಟೀವಿಯಲ್ಲೇ ವೀಕ್ಷಿಸಬಹುದಾಗಿದೆ. ಕೆಲವು ಆಧುನಿಕ ಟೀವಿ ಸೆಟ್‌ಗಳಲ್ಲಿಯೇ ಸೆಟ್‌ಟಾಪ್ ಬಾಕ್ಸ್‌ಗಳನ್ನು ಅಳವಡಿಸಲಾಗಿರುತ್ತದೆ.ಡಿಟಿಎಚ್‌ಗಿಂತ ಒಂದು ಹೆಜ್ಜೆ ಅಂತರ್ಜಾಲ ಮುಂದೆ

ಡಿಜಿಟಲ್ ಯುಗ ಆರಂಭವಾದಾಗಿನಿಂದ ಮನರಂಜನೆಯ ಹೊಸ ಯುಗವೇ ಆರಂಭವಾಗಿದೆ. ಡಿವಿಡಿಗಳು ಮೂಲೆಗುಂಪಾಗಿವೆ. ಅದರಂತೆ ಡಿವಿಡಿ ಪ್ಲೇಯರ್‌ಗಳು ತಮ್ಮ ಅನಿವಾರ್ಯತೆಯನ್ನು ಕಳೆದುಕೊಂಡಿವೆ. ಜೊತೆಗೆ ಅಂತರ್ಜಾಲ ಸಂಪರ್ಕವೂ ಈಗ ಹೆಚ್ಚು ದುಬಾರಿಯಲ್ಲದ ಕಾರಣ ತಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಬೇಕಾದ ಕಾರ್ಯಕ್ರಮಗಳನ್ನು ನೋಡುವ ಅವಕಾಶಗಳನ್ನು ಜಗತ್ತಿನ ಅನೇಕ ಜಾಲತಾಣಗಳು ಸೃಷ್ಟಿಸಿವೆ. ಅಂಥದ್ದೊಂದು ತಾಣವನ್ನು ಕನ್ನಡದ ಯುವ ನಿರ್ದೇಶಕ ಪವನ್ ಕುಮಾರ್ ಹೊಂದಿದ್ದಾರೆ.`ಡಿವಿಡಿಗಳು ಮಾರಕಟ್ಟೆ ಕಳೆದುಕೊಂಡ ನಂತರ ಸಿನಿಮಾಗಳನ್ನು ಅಂತರಜಾಲಕ್ಕೆ ನೀಡುವ ಹೊಸ ಪ್ರವೃತ್ತಿ ಆರಂಭವಾಗಿದೆ. ತಮ್ಮ ಸಿನಿಮಾ ಅಂತರಜಾಲದಲ್ಲಿ ಇದ್ದಲ್ಲಿ ತಿಂಗಳಿಗೆ ಕನಿಷ್ಠ ಹಣವಾದರೂ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನಿರ್ಮಾಪಕರಲ್ಲಿ ಮೂಡುತ್ತಿದೆ. ಹೀಗಾಗಿ ಯುಟ್ಯೂಬ್ ಸೇರಿದಂತೆ ಹಲವಾರು ಪ್ರದರ್ಶನ ತಾಣಗಳು ಈಗ ಪೂರ್ಣ ಸಮಯದ ಸಿನಿಮಾ ಗೃಹಗಳಾಗಿ ಬದಲಾಗುತ್ತಿವೆ. ದಿನದ ಯಾವ ಸಮಯದಲ್ಲಾದರೂ ಬಯಸಿದ ಚಿತ್ರಗಳನ್ನು ನೋಡುವ ಸೌಲಭ್ಯ ಇರುವುದರಿಂದ ಇವುಗಳು ಈಗ ಹೆಚ್ಚು ಆಪ್ತವಾಗುತ್ತಿವೆ. ಜತೆಗೆ ಸಿನಿಮಾಗಳನ್ನು ಅರ್ಧಕ್ಕೆ ನಿಲ್ಲಿಸಿ, ನಂತರ ಸಮಯ ಸಿಕ್ಕಾಗಿ ಪೂರ್ಣಗೊಳಿಸುವ ವ್ಯವಸ್ಥೆ ಇದರಲ್ಲಿದೆ. ಕಂಪ್ಯೂಟರ್ ಪರದೆ ಮೇಲೆ ನೋಡಿ ಅರ್ಧಕ್ಕೆ ನಿಲ್ಲಿಸಿದ ಸಿನಿಮಾವನ್ನು ಹೊರಗಿದ್ದಾಗ ತಮ್ಮಲ್ಲಿರುವ ಟ್ಯಾಬ್ಲೆಟ್ ಅಥವಾ ಮೊಬೈಲ್ ಪರದೆಯ ಮೇಲೆಯೇ ಪೂರ್ಣಗೊಳಿಸಬಹುದಾಗಿದೆ' ಎಂದು ಪವನ್ ತಿಳಿಸುತ್ತಾರೆ.ಡಿಟಿಎಚ್ ಮೂಲಕ ಸಿನಿಮಾ ಬಿಡುಗಡೆ ಮಾಡುವುದರಿಂದ ಪೈರಸಿ ಕಡಿಮೆಯಾಗಲಿದೆ. ಆದರೆ ಯಾವ ಬಗೆಯ ಚಿತ್ರಗಳು ಡಿಟಿಎಚ್‌ನಲ್ಲಿ ನೋಡಬಹುದು, ಯಾವುದು ಅಸಾಧ್ಯ ಎನ್ನುವುದು ನಿರ್ಮಾಪಕರಿಗೆ ತಿಳಿದಿರಬೇಕು. ಏಕೆಂದರೆ `ವಿಶ್ವರೂಪಂ' ಚಿತ್ರದ ಟ್ರೈಲರ್ ನೋಡಿದರೆ ಅದು ಚಿತ್ರಮಂದಿರದ ಬೃಹತ್ ಪರದೆಯಲ್ಲೇ ನೋಡಬೇಕಾದ ಸಿನಿಮಾ ಎಂದೆನಿಸುತ್ತದೆ. ಅಂಥ ಸ್ಪೆಷಲ್ ಎಫೆಕ್ಟ್ಸ್ ಇರುವ ಚಿತ್ರಗಳನ್ನು ಅಲ್ಲಿಯೇ ನೋಡಿದರೆ ಚೆನ್ನ. ಪ್ರೇಮಕಥೆ ಅಥವಾ ಬೇರೆ ರೀತಿಯ ಚಿತ್ರಗಳನ್ನು ಡಿಟಿಎಚ್ ಮೂಲಕ ನೋಡಬಹುದು. ಹೀಗಾಗಿ ಇಲ್ಲಿ ನಿರ್ಮಾಪಕರದ್ದು ಜವಾಬ್ದಾರಿ ದೊಡ್ಡದು' ಎಂದು ಅವರು ಅಭಿಪ್ರಾಯಪಟ್ಟರು.ಡಿಟಿಎಚ್‌ನ ಮುಂದುವರಿದ ಭಾಗವಾಗಿರುವ ಅಂತರ್ಜಾಲದಲ್ಲಿ ಸಿನಿಮಾ ವೀಕ್ಷಣೆಯು ಸಾಕಷ್ಟು ಅನುಕೂಲಗಳನ್ನು ಹೊಂದಿದೆ. ಹಲವು ಡಿಟಿಎಚ್‌ಗಳು ಆನ್ ಡಿಮಾಂಡ್ ಮೂಲಕ ಹಣಕೊಟ್ಟು ತರಿಸಿಕೊಳ್ಳುವ ಸಿನಿಮಾಗಳನ್ನು ಒಂದು ದಿನದಲ್ಲಿ ಕೆಲವೇ ಕೆಲವು ಅಥವಾ ಒಂದು ಬಾರಿ ಮಾತ್ರ ವೀಕ್ಷಿಸಬಹುದಾಗಿದೆ (ವಿಶ್ವರೂಪಂ ಸಿನಿಮಾ 9ರಿಂದ 12ರವರೆಗೆ ದಿನಕ್ಕೆ ಒಂದು ಬಾರಿ ಮಾತ್ರ ಪ್ರದರ್ಶನಗಲಿದೆ ಎಂದು ಹೇಳಲಾಗಿತ್ತು). ಮಧ್ಯದಲ್ಲಿ ವಿದ್ಯುತ್ ಕೈಕೊಟ್ಟಲ್ಲಿ ಅದನ್ನು ಡಿಮ್ಯಾಂಡ್ ಮಾಡಿದ ವೀಕ್ಷಕರಿಗೆ ನಷ್ಟವೇ ಸರಿ. ಆದರೆ ಅಂತರ್ಜಾಲ ಸೇವೆಯಲ್ಲಿ ಈ ಬಗೆಯ ನಷ್ಟವಾಗದು. ಹೀಗಾಗಿ ತಂತ್ರಜ್ಞಾನ ಬೆಳೆದಂತೆ ಬಳಕೆದಾರರಿಗೆ ಹೊಸ ಬಗೆಯ ಸೌಲಭ್ಯಗಳು ದೊರಕುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry