ಟೀವಿ ಶೋನಲ್ಲಿ ಶಬಾನಾ

7

ಟೀವಿ ಶೋನಲ್ಲಿ ಶಬಾನಾ

Published:
Updated:

ದೇ ತಿಂಗಳು 62ಕ್ಕೆ ಕಾಲಿರಿಸಿರುವ ಕಲಾವಿದೆ ಶಬಾನಾ ಆಜ್ಮಿ ಮೊದಲ ಸಲ ಟೀವಿ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘24’ ಎಂಬ ಸರಣಿ ಧಾರಾವಾಹಿಯಲ್ಲಿ ಶಬಾನಾ ಕಾಣಿಸಿಕೊಳ್ಳಲಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದ ಮುಖ್ಯ ಅಧಿಕಾರಿ ಜೈಸಿಂಗ್‌ ರಾಠೋಡ್‌ ಜೀವನದ 24 ಗಂಟೆಗಳ ಕತೆಯನ್ನು 24 ಸರಣಿಯಲ್ಲಿ ನಿರೂಪಿಸಲಾಗಿದೆ. ಅಧಿಕಾರಿಯ ಪಾತ್ರವನ್ನು ಅನಿಲ್‌ ಕಪೂರ್‌ ನಿರ್ವಹಿಸುತ್ತಿದ್ದಾರೆ.ಶಬಾನಾ ಆಜ್ಮಿ, ಅನುಪಮ್‌ ಖೇರ್‌ ಜೊತೆಗೆ ಮಂದಿರಾ ಬೇಡಿ ಸಹ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಲ್‌ ಕಪೂರ್‌ ಹಾಗೂ ಶಬಾನಾ ಆಜ್ಮಿ ಇಬ್ಬರಿಗೂ ಇದು ಮೊದಲ ಟೀವಿ ಶೋ ಆಗಿದೆ. ಅನಿಲ್‌ ಕಪೂರ್‌ಗಾಗಿಯೇ ಈ ಶೋನಲ್ಲಿ ನಟಿಸಿದ್ದೇನೆ ಎಂದು ಶಬಾನಾ ಹೇಳಿದ್ದಾರೆ.ಇಂಥ ಪಾತ್ರವನ್ನು ಈವರೆಗೂ ನಾನು ಯಾವುದೇ ಸಿನಿಮಾದಲ್ಲಾಗಲೀ ನಾಟಕದಲ್ಲಾಗಲೀ ನಟಿಸಿಲ್ಲ. ಸಂಪೂರ್ಣವಾಗಿ ಭಿನ್ನವಾದ ಪಾತ್ರ. ಅಭಿಲಾಶಾ ಗ್ರೆವಾಲ ಎಂಬ ಈ ಪಾತ್ರ ನಿಜಕ್ಕೂ ಖುಷಿ ನೀಡಿತು. ನಿರ್ದೇಶಕ ಅಭಿನವ್‌ ದೇವ್‌ ಸಹಕರಿಸಿದ ರೀತಿ ಶ್ಲಾಘನೀಯವಾಗಿದೆ ಎಂದಿರುವ ಶಬಾನಾ, ಅನಿಲ್‌ ಕಪೂರ್‌ ಅವರನ್ನು ಮಾತ್ರ ಮುಕ್ತ ಕಂಠದಿಂದ ಹೊಗಳಿದ್ದಾರೆ.ಮೂವತ್ತು ವರ್ಷಗಳ ಸ್ನೇಹಿತ ಅನಿಲ್‌. ಮೂವತ್ತು ವರ್ಷಗಳ ಹಿಂದೆ ಅನಿಲ್‌ನೊಂದಿಗೆ ‘ಏಕ್‌ ಬಾರ್‌ ಕಹೊ’ ಚಿತ್ರದಲ್ಲಿ ನಟಿಸಿದ್ದೆ. ಅದೇ ಮೂವತ್ತು ವರ್ಷಗಳ ಶ್ರದ್ಧೆ, ಆಸಕ್ತಿ ಇಂದಿಗೂ ಅವನಲ್ಲಿ ಉಳಿದುಕೊಂಡು ಬಂದಿದೆ.  ಟೀವಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದರೆ ಅದಕ್ಕೆ ಕಾರಣ ಅನಿಲ್‌ ಕಪೂರ್‌, ಅನಿಲ್‌ ಕಪೂರ್‌ ಮತ್ತು ಅನಿಲ್‌ ಕಪೂರ್‌ ಮಾತ್ರ ಎಂದು ಹೇಳಿದ್ದಾರೆ.ಇದೇ ಸೆ.18ರಂದು 62ನೇ ವಸಂತಕ್ಕೆ ಕಾಲಿರಿಸಿರುವ ಶಬಾನಾ ಆಜ್ಮಿ ನಟಿಯಾಗಿ, ರಂಗ ಕಲಾವಿದೆಯಾಗಿ, ಚಳವಳಿಯಲ್ಲಿ ಪಾಲ್ಗೊಂಡ ಮಹಿಳೆ. ತಮ್ಮ ಜೀವನದಲ್ಲಿಯೇ ಖುಷಿ ನೀಡಿದ ಪಾತ್ರ ‘ಮಹೇಶ್‌ ಭಟ್‌’ ನಿರ್ದೇಶನದ ‘ಅರ್ಥ್’ ಚಿತ್ರದ್ದು ಎಂದು ಹೇಳುತ್ತಾರೆ. ವಿಶ್ವವನ್ನು ಬದಲಿಸುವ ಅಧಿಕಾರ ದೊರೆತರೆ ಏನು ಮಾಡಲಿಚ್ಛಿಸುವಿರಿ ಎಂಬ ಪ್ರಶ್ನೆಗೆ, ‘ಪಿತೃಪ್ರಧಾನ ವ್ಯವಸ್ಥೆಯನ್ನು ಬದಲಿಸುವೆ. ಮಹಿಳೆಯರ ಬಗ್ಗೆ, ಹೆಣ್ಣುಮಕ್ಕಳ ಭಾವನೆಗಳನ್ನು ಲಘುವಾಗಿ ಪರಿಗಣಿಸುವ ಹುಡುಗರ ಮನಃಸ್ಥಿತಿ ಬದಲಿಸುವೆ’ ಎನ್ನುತ್ತಾರೆ ಅವರು.ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ದೊರೆತಿದ್ದು ತಂದೆ ಕೈಫಿ ಆಜ್ಮಿ ಹಾಗೂ ತಾಯಿ, ರಂಗ ಕಲಾವಿದೆ ಶೌಕತ್‌ ಆಜ್ಮಿ ಅವರಿಂದ. ಚಿತ್ರರಂಗದಲ್ಲಿ ಕಾಲಿರಿಸಿದೊಡನೆ ದೊರೆತ ‘ಅಂಕುರ್‌’ ಚಿತ್ರವೂ ತಮ್ಮಲ್ಲಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವ ಮನೋಭಾವವನ್ನು ಗಟ್ಟಿಗೊಳಿಸಿತು. ಅದೇ ಕಾರಣದಿಂದಲೇ ಸಿನಿಮಾರಂಗದ ಯಶಸ್ಸಿನಲ್ಲಿ ಕೊಚ್ಚಿಹೋಗುವಂತೆ ಆಗಲಿಲ್ಲ ಎಂದು ಹೇಳುತ್ತಾರೆ. ಟೀವಿ ಶೋ ‘24’ ಅ.4ರಿಂದ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry