ಟೂರ್ನಿಗೆ ಎಲ್ಲ ಸಿದ್ಧತೆ ನಡೆದಿದೆ- ಕುಂಬ್ಳೆ

7

ಟೂರ್ನಿಗೆ ಎಲ್ಲ ಸಿದ್ಧತೆ ನಡೆದಿದೆ- ಕುಂಬ್ಳೆ

Published:
Updated:
ಟೂರ್ನಿಗೆ ಎಲ್ಲ ಸಿದ್ಧತೆ ನಡೆದಿದೆ- ಕುಂಬ್ಳೆ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದ ಎಲ್ಲ ಕೆಲಸ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ತಿಳಿಸಿದರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ನವೀಕರಣ ಕಾಮಗಾರಿಗಳ ಬಗ್ಗೆ ಸೋಮವಾರ ಮಾಧ್ಯಮದವರಿಗೆ ವಿವರಗಳನ್ನು ನೀಡಿದ ಕುಂಬ್ಳೆ, ‘ಫೆಬ್ರುವರಿ 9 ರ ಒಳಗಾಗಿ ಕ್ರೀಡಾಂಗಣ ಸಜ್ಜುಗೊಳ್ಳಲಿದೆ. ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಇನ್ನೆರಡು ದಿನಗಳಲ್ಲಿ ತಂಡದ ಆಟಗಾರರು ಇಲ್ಲಿಗೆ ಆಗಮಿಸುವರು’ ಎಂದು ಹೇಳಿದರು.‘ಇಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಗಳನ್ನು ನಾವು ವಿಶ್ವಕಪ್ ಟೂರ್ನಿಯ ಪಂದ್ಯಗಳಂತೆಯೇ ಪರಿಗಣಿಸಿದ್ದೇವೆ. ಅಭ್ಯಾಸ ಪಂದ್ಯಗಳು ಇರುವ ಕಾರಣ ನಿಗದಿತ ಅವಧಿಗಿಂತ ಮುನ್ನವೇ ನಮಗೆ ಸಜ್ಜಾಗಲು ಸಾಧ್ಯವಾಗಿದೆ’ ಎಂದು ಭಾರತ ತಂಡದ ಮಾಜಿ ನಾಯಕ ನುಡಿದರು.ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಅಭ್ಯಾಸ ಪಂದ್ಯ ಫೆಬ್ರುವರಿ 13 ರಂದು ನಡೆಯಲಿದೆ. ಇಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಫೆಬ್ರುವರಿ 27 ರಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಪೈಪೋಟಿ ನಡೆಸಲಿವೆ. ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಐಸಿಸಿ ಬೆಂಗಳೂರಿಗೆ ಸ್ಥಳಾಂತರಿಸಿದೆ.‘ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನದ್ದು ಮಹತ್ವದ ಪಂದ್ಯ. ಈ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಅನಿರೀಕ್ಷಿತವಾಗಿ ಲಭಿಸಿದೆ. ಆರಂಭದಲ್ಲಿ ಇದು ಅಲ್ಪ ಸವಾಲಿನಂತೆ ಕಂಡುಬಂದರೂ, ಈಗ ಪಂದ್ಯಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದಲ್ಲೂ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು ಎಂದು ಕುಂಬ್ಳೆ ಹೇಳಿದರು. ಇಂಗ್ಲೆಂಡ್ ತಂಡ ಆ್ಯಷಸ್ ಸರಣಿ ಗೆಲುವಿನ ಸಂಭ್ರಮದೊಂದಿಗೆ ಇಲ್ಲಿಗೆ ಆಗಮಿಸುತ್ತಿದೆ. ಮತ್ತೊಂದೆಡೆ ಆಸೀಸ್ ತಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 6-1 ಅಂತರದ ಜಯಭೇರಿ ಮೊಳಗಿಸಿದೆ.‘ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನೂ ಕಡೆಗಣಿಸುವಂತಿಲ್ಲ. ಆದರೆ ಆಟಗಾರರ ಪ್ರಸಕ್ತ ಫಾರ್ಮ್‌ನ್ನು ಗಮನಿಸಿದಾಗ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಇದು ಅತ್ಯುತ್ತಮ ಅವಕಾಶ’ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.ಕ್ರೀಡಾಂಗಣದ ಪ್ರೆಸ್ ಬಾಕ್ಸ್ ಒಳಗೊಂಡಂತೆ ವಿವಿಧ ಕಡೆ ನಡೆದಿರುವ ನವೀಕರಣ ಕಾಮಗಾರಿಗಳ ಬಗ್ಗೆ ಕುಂಬ್ಳೆ ಮಾಹಿತಿ ನೀಡಿದರು. ‘ನಮಗೆ ಸಮಯ ಒಳಗೊಂಡಂತೆ ಕೆಲವೊಂದು ಇತಿಮಿತಿಗಳಿದ್ದವು. ಇದರ ನಡುವೆಯೇ ನವೀಕರಣ ಕೆಲಸ ನಡೆದಿದೆ. ಪ್ರೆಸ್ ಬಾಕ್ಸ್ ಮತ್ತು ಕಾಮೆಂಟರಿ ಬಾಕ್ಸ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದರು.ಡ್ರೆಸಿಂಗ್ ಕೊಠಡಿಗೆ ಹೊಸ ರೂಪ: ಚಿನ್ನಸ್ವಾಮಿ ಕ್ರೀಡಾಂಗಣದ ಆಟಗಾರರ ಡ್ರೆಸಿಂಗ್ ಕೊಠಡಿಗೂ ಹೊಸ ರೂಪ ನೀಡಲಾಗಿದೆ. ಕೊಠಡಿಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. ಆದರೆ ಹೊಸ ರೂಪ ಪಡೆದಿದೆ. ‘ಡ್ರೆಸಿಂಗ್ ಕೊಠಡಿಯಲ್ಲಿ ಆಟಗಾರನಿಗೆ ಬೇಕಾದ ಅಗತ್ಯಗಳ ಕುರಿತ ಅರಿವು ನನಗಿದೆ. ಆಟಗಾರರಿಗೆ ಯಾವುದೇ ಕೊರತೆ ಕಂಡುಬರದಂತೆ ನೋಡಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry