ಶುಕ್ರವಾರ, ನವೆಂಬರ್ 22, 2019
20 °C
ಆದರೆ ರೂ 2 ಶುಲ್ಕ ಕಟ್ಟಬೇಕು

`ಟೆಂಡರ್ಡ್ ಮತ'ಕ್ಕೂ ಅವಕಾಶ

Published:
Updated:

ಕೊಪ್ಪಳ: ಒಬ್ಬ ಮತದಾರ ತನ್ನ ಹಕ್ಕನ್ನು ಚಲಾಯಿಸಲು ಹೋಗುತ್ತಾನೆ. ಆದರೆ, ಅದಕ್ಕಿಂತ ಮುಂಚೆಯೇ ಬೇರೊಬ್ಬರು ತನ್ನ ಮತ ಚಲಾಯಿಸಿದ್ದಾರೆ ಎಂಬ ಅನುಮಾನ ಮತದಾರನಿಗೆ ಬಂದರೆ?ಇಂತಹ ಅನುಮಾನ ಬಂದಾಗ ಮತದಾರ ಆಕ್ಷೇಪ ಸಲ್ಲಿಸುವ ಜೊತೆಗೆ, `ಟೆಂಡರ್ಡ್ ಮತ'ವನ್ನು ಚಲಾಯಿಸುವ ಅವಕಾಶವನ್ನು ಹೊಂದಿರುತ್ತಾನೆ. ಹೀಗಾಗಿ, ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ವ್ಯಾಪಕವಾಗುತ್ತಿದೆಯಾದರೂ ಇಂತಹ ವಿಶೇಷ ಸಂದರ್ಭಗಳಲ್ಲಿ ಮತಪತ್ರಗಳಿಗೇ ಮೊರೆ ಹೋಗಲೇಬೇಕಾಗುತ್ತದೆ.

ಪ್ರಜಾಪ್ರತಿನಿಧಿ ಕಾಯ್ದೆಯ `ನಿಯಮ 49-ಪಿ' ಮತದಾರರಿಗೆ ಇಂತಹ ಅವಕಾಶವನ್ನು ಕಲ್ಪಿಸುತ್ತದೆ.ಮತದಾರನೊಬ್ಬ ಮತ ಹಾಕುವ ಮುನ್ನ ನೋಂದಣಿ ಪ್ರಕ್ರಿಯೆ ಪೂರೈಸುವ ಸಂದರ್ಭದಲ್ಲಿ ತನ್ನ ಸಾಂವಿಧಾನಿಕ ಹಕ್ಕನ್ನು ಬೇರೊಬ್ಬರು ಚಲಾಯಿಸಿದ್ದಾರೆ ಎಂಬ ಬಗ್ಗೆ ಸಂಶಯ ಬಂದರೆ, ತಕ್ಷಣ ಈ ವಿಷಯವನ್ನು ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು. ತಾನು ಮತ ಚಲಾಯಿಸಿಲ್ಲ, ಬದಲಾಗಿ ಬೇರೊಬ್ಬರು ಮತ ಹಾಕಿದ್ದಾರೆ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಲದೇ, ಗುರುತಿನ ಪತ್ರ ಹಾಜರುಪಡಿಸುವುದು ಸೇರಿದಂತೆ ಚುನಾವಣಾ ಕರ್ತವ್ಯದ ಅಧಿಕಾರಿಗಳ ಸಂದೇಹಗಳಿಗೆ ಸಮರ್ಪಕ ಉತ್ತರವನ್ನು ಸಹ ನೀಡಬೇಕು ಎಂದು ನಿಯಮ ಹೇಳುತ್ತದೆ.ಮತದಾರ ನೀಡುವ ಉತ್ತರ ಸಮರ್ಪಕ ಎಂಬುದು ಮನವರಿಕೆಯಾದ ನಂತರ, ಸದರಿ ಮತದಾರನಿಗೆ `ಮತ ಪತ್ರ'ವನ್ನು ನೀಡಲಾಗುತ್ತದೆ. ಅಲ್ಲದೇ, ನಮೂನೆ 17-ಬಿ ಯಲ್ಲಿ ಹೆಸರು ಭರ್ತಿ ಮಾಡಲಾಗುತ್ತದೆ.`ಸದರಿ ಮತ ಪತ್ರದಲ್ಲಿ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿ, ಮತಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ನೀಡಬೇಕು. ಈ ಮತ ಪತ್ರವನ್ನು ಇದೇ ಉದ್ದೇಶಕ್ಕಾಗಿ ತಯಾರಿಸಲಾಗಿರುವ ಲಕೋಟೆಯಲ್ಲಿರಿಸಿ, ಮೊಹರು ಹಾಕಲಾಗುತ್ತದೆ' ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವಿವರಿಸುತ್ತಾರೆ.`ಟೆಂಡರ್ಡ್ ಮತ' ಚಲಾಯಿಸುವ ಸಂದರ್ಭದಲ್ಲಿ ಮತದಾರ ನಗದು ರೂಪದಲ್ಲಿ ್ಙ 2 ಶುಲ್ಕವನ್ನು ನೀಡಬೇಕು ಎಂದು ಸ್ಪಷ್ಟಪಡಿಸಿದರು.

ಇಂತಹ ಮತಗಳನ್ನು ಎಣಿಕೆ ಸಂದರ್ಭದಲ್ಲಿ ಪರಿಗಣಿಸುವುದಿಲ್ಲ. ಆದರೆ, ಕೆಲವೇ ಮತಗಳ ಅಂತರದಿಂದ ಅಭ್ಯರ್ಥಿಯೊಬ್ಬ ಗೆದ್ದರೆ ಹಾಗೂ ಈ ಗೆಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ಈ `ಟೆಂಡರ್ಡ್ ಮತ'ಗಳನ್ನು ಪರಿಗಣಿಸಲಾಗುತ್ತದೆ ಎಂದೂ ವಿವರಿಸುತ್ತಾರೆ.ಅಂಧರಿಗೆ, ಅಂಗವಿಕಲರಿಗೆ ಕಾಯ್ದೆಯ ನೆರವು

ಅಂಧತ್ವ ಹಾಗೂ ಇತರ ದೈಹಿಕ ನ್ಯೂನತೆಯಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೇ ಇರುವ ಮತದಾರ ಈ ಕಾರ್ಯಕ್ಕಾಗಿ ಬೇರೊಬ್ಬ ವ್ಯಕ್ತಿಯ ನೆರವು ಪಡೆಯಲು ನಿಯಮ 49-ಎನ್ ಅವಕಾಶ ಕಲ್ಪಿಸುತ್ತದೆ. ಆದರೆ, ಒಬ್ಬ ವ್ಯಕ್ತಿ ಒಬ್ಬ ಮತದಾರನಿಗೆ ಮಾತ್ರ ನೆರವು ನೀಡಬೇಕು. ಅಲ್ಲದೇ, ಯಾರಿಗೆ ಮತ ಹಾಕಾಲಾಗಿದೆ ಎಂಬ ವಿಷಯವನ್ನು ಗೌಪ್ಯವಾಗಿರಿಸಬೇಕು. ಈ ಸಂಬಂಧದ ವಿವರಗಳನ್ನು ಅಧಿಕಾರಿಗಳು `ನಮೂನೆ 14-ಎ'ಯಲ್ಲಿ ದಾಖಲಿಸುವುದು ಸಹ ಕಡ್ಡಾಯ.

ಪ್ರತಿಕ್ರಿಯಿಸಿ (+)