ಶನಿವಾರ, ಜನವರಿ 18, 2020
27 °C
ಯುಪಿಒಆರ್‌ ಜಾರಿಗೆ ಸಿದ್ಧತೆ

ಟೆಂಡರ್ ಪ್ರಕ್ರಿಯೆ ಅಂತಿಮ

ಪಿ.ಎಂ.ರಘುನಂದನ್/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಪ್ರದೇಶಗಳಲ್ಲಿನ ಖಾಸಗಿ ಸ್ಥಿರಾಸ್ತಿಗಳ ಮಾಲೀಕತ್ವವನ್ನು ಖಚಿತಪಡಿಸುವ ‘ನಗರ ಆಸ್ತಿ ಮಾಲೀಕತ್ವ ದಾಖಲೆ’ (ಯುಪಿಒಆರ್‌) ಯೋಜನೆಯ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದ್ದು, ಬೆಂಗಳೂರಿನಲ್ಲಿ ಶೀಘ್ರದಲ್ಲೇ ಯೋಜನೆಗೆ ಚಾಲನೆ ದೊರೆಯಲಿದೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 50 ವಾರ್ಡುಗಳಲ್ಲಿ (ಹಳೆಯ ಬೆಂಗಳೂರು ಪ್ರದೇಶ) ಈ ಯೋಜನೆ ಆರಂಭದಲ್ಲಿ ಜಾರಿಗೆ ಬರಲಿದೆ. ಭೂಮಾಪನ ಮತ್ತು ಭೂ ದಾಖಲೆಗಳ ನಿರ್ದೇಶನಾಲಯವು ಟೆಂಡರು ಪ್ರಕ್ರಿಯೆ ನಡೆಸಿದ್ದು, ಹೈದರಾಬಾದ್‌ ಮೂಲದ ಇನ್ಫೋಟೆಕ್‌ ಮತ್ತು ಬೆಂಗಳೂರಿನ ಅಲ್ಕಾನ್‌ ಕಂಪೆನಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.‘ಟೆಂಡರು ಪ್ರಕ್ರಿಯೆಯ ವಿವರಗಳನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎರಡೂ ಕಂಪೆನಿಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಉಲ್ಲೇಖಿಸಿವೆ. ಸರ್ಕಾರದಿಂದ ಅನುಮತಿ ಪಡೆದ ಬಳಿಕ ಈ ಕಂಪೆನಿಗಳಿಗೆ ಯೋಜನೆಯ ಗುತ್ತಿಗೆಯನ್ನು ವಹಿಸಲಾಗುವುದು’ ಎಂದು ಭೂ­ಮಾಪನ ಮತ್ತು ಭೂ ದಾಖಲೆಗಳ ನಿರ್ದೇಶ­ನಾಲಯದ ಆಯುಕ್ತ ವಿ.ಪೊನ್ನುರಾಜ್ ತಿಳಿಸಿದರು.ಯುಪಿಒಆರ್ ಯೋಜನೆ ಅನುಷ್ಠಾನಕ್ಕೆ ಮೂರನೇ ಬಾರಿ ಟೆಂಡರ್ ನಡೆಯುತ್ತಿದೆ. ಹಿಂದಿನ ಎರಡು ಟೆಂಡರು ಪ್ರಕ್ರಿಯೆಯಲ್ಲಿ ಯಾರೂ ಬಿಡ್‌ ಸಲ್ಲಿಸಿರಲಿಲ್ಲ. ನಂತರ ಟೆಂಡರು ಷರತ್ತುಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ ಸರ್ಕಾರ, ಮೂರನೇ ಬಾರಿ ಟೆಂಡರು ಪ್ರಕ್ರಿಯೆ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.ಈ ಯೋಜನೆಯಡಿ ನಗರ ಪ್ರದೇಶದ ಎಲ್ಲ ಸ್ಥಿರಾಸ್ತಿಗಳ ಸರ್ವೆ, ನಕ್ಷೆ ಮೂಲಕ ಗುರುತಿಸುವುದು ಮತ್ತು ವಿಸ್ತೀರ್ಣದ ಅಳತೆ ಮಾಡಲಾಗುತ್ತದೆ. ಹಳೆಯ ಗ್ರಾಮಗಳ ನಕ್ಷೆಗಳು ಮತ್ತು ಕಂದಾಯ ದಾಖಲೆಗಳ ಆಧಾರದಲ್ಲಿ ಮಾಲೀಕತ್ವದ  ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಸ್ಥಿರಾಸ್ತಿಗಳ ಇತಿಹಾಸ ಮತ್ತು ಮಾಲೀಕತ್ವ ಬದಲಾವಣೆಯ ವಿವರವನ್ನೂ ಕಲೆಹಾಕಲಾಗುತ್ತದೆ.ಮಾಲೀಕತ್ವದ ಕುರಿತು ಪರಿಶೀಲನೆ ನಡೆಸಿದ ಬಳಿಕ ನಿರ್ದೇಶನಾಲಯವು, ಖಾಸಗಿ ಆಸ್ತಿಗಳ ಮಾಲೀಕರಿಗೆ ಆಸ್ತಿ ಹಕ್ಕು ದಾಖಲೆಗಳನ್ನು ನೀಡುತ್ತದೆ. ಇದಕ್ಕೆ ಶುಲ್ಕವನ್ನೂ ಪಡೆಯಲಾಗುತ್ತದೆ. ವಿವಾದಿತ ಆಸ್ತಿಗಳಿಗೆ ಆಸ್ತಿ ಹಕ್ಕು ದಾಖಲೆ ವಿತರಿಸುವುದಿಲ್ಲ. ಪ್ರಸ್ತುತ, ಆಸ್ತಿಗಳ ಹಕ್ಕು ದೃಢಪಡಿಸುವ ಯಾವುದೇ ದಾಖಲೆಗಳು ಲಭ್ಯವಿಲ್ಲ. ಕ್ರಯಪತ್ರ ಮತ್ತು ಖಾತಾ­ಗಳನ್ನೇ ಆಸ್ತಿಗಳ ಮಾಲೀಕತ್ವ ಋಜುವಾತುಪಡಿಸುವ ದಾಖಲೆಗಳನ್ನಾಗಿಯೂ ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಸರ್ಕಾರಿ ಜಮೀನುಗಳ ಒತ್ತುವರಿ ಪ್ರಕರಣಗಳ ಪತ್ತೆಗೂ ಈ ಯೋಜನೆ ನೆರವಾಗಲಿದೆ. ಮೈಸೂರು ನಗರದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ­ಗೊಳಿಸಲಾಗಿತ್ತು. ಬಳ್ಳಾರಿ, ಶಿವಮೊಗ್ಗ, ಮಂಗ­ಳೂರು ಮತ್ತು ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಅನುಷ್ಠಾನ ಪ್ರಗತಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.ತಲಾ 25 ವಾರ್ಡ್‌: ಎರಡೂ ಕಂಪೆನಿಗಳಿಗೆ ತಲಾ 25 ವಾರ್ಡುಗಳಲ್ಲಿ ಯೋಜನೆ ಅನುಷ್ಠಾನದ ಗುತ್ತಿಗೆ ನೀಡಲಾಗುತ್ತದೆ. ಯೋಜನೆಗೆ ₨ 13 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಸಿದ್ಧಪಡಿಸಿದ್ದು, ಯೋಜನೆ ಅನುಷ್ಠಾನದಲ್ಲಿನ ಪ್ರಗತಿ ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಪೊನ್ನುರಾಜ್‌ ವಿವರಿಸಿದರು.‘ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಮೂರು ವರ್ಷಗಳ ಕಾಲ ನಿರ್ವಹಣೆ ಮಾಡುವುದೂ ಗುತ್ತಿಗೆಯಲ್ಲಿ ಸೇರಿರುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬಿಬಿಎಂಪಿಯ ಉಳಿದ ವಾರ್ಡು­ಗಳು, ರಾಜ್ಯದ ಎಲ್ಲ ನಗರ ಮತ್ತು ಪಟ್ಟಣ ಪ್ರದೇಶ­ಗಳಿಗೆ ವಿಸ್ತರಿಸಲಾಗುವುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)