ಟೆಕ್ಕಿಗಳ ಪಾರ್ಕ್‌ನಲ್ಲಿ ಡಾಬಾ ಊಟ

7

ಟೆಕ್ಕಿಗಳ ಪಾರ್ಕ್‌ನಲ್ಲಿ ಡಾಬಾ ಊಟ

Published:
Updated:
ಟೆಕ್ಕಿಗಳ ಪಾರ್ಕ್‌ನಲ್ಲಿ ಡಾಬಾ ಊಟ

`ಅಮ್ಮ ಮಾಡೋ ಅಡುಗೆಯಲ್ಲಿ ಹಳಸಲು ಇರೋದಿಲ್ಲ. ಹೋಟೆಲ್‌ಗೆ ಹೋದರೆ ಫ್ರೀಜರ್‌ನಲ್ಲಿಟ್ಟ ಸಾಮಗ್ರಿಗಳಿಂದ ತಯಾರಿಸಿದ ಆಹಾರ ಪದಾರ್ಥಗಳೇ ಸಿಗೋದು. ಹಣೆಪಟ್ಟಿ ಮಾತ್ರ `ಈಗಷ್ಟೇ ಸಿದ್ಧಪಡಿಸಿದ ತಾಜಾ ಆಹಾರ~ ಎಂಬುದು. ಅದಕ್ಕೆ ನಾವು ಥೇಟ್ ಡಾಬಾ ಶೈಲಿಯಲ್ಲಿ ತಾಜಾ ಮೆನು ಸಿದ್ಧಪಡಿಸಿ ಬಡಿಸೋದು~ ಅಂತ ಬಾಯಿತುಂಬಾ ನಗುತ್ತಾ ಹೇಳಿದರು ಬಾಣಸಿಗ ಪ್ರೇಮ್.“ಹೋದ ಸಲ ಕರಾವಳಿ ಖಾದ್ಯೋತ್ಸವಕ್ಕೆ ಗ್ರಾಹಕರ ಸ್ಪಂದನ ಅದ್ಭುತವಾಗಿತ್ತು. ಅರರೆ... ಊಟ ಮಾಡಿ. ಬಿಸಿ ಆರಿದರೆ ಮತ್ತೆ ಹೋಟೆಲ್ ಊಟದಂತೆ ಆಗಿಬಿಡುತ್ತೆ... ಈ ಸಲ `ಹೈವೇ ಡಾಬಾ ಫುಡ್ ಫೆಸ್ಟಿವಲ್~ಗೂ ಅದೇ ರೀತಿ ಸ್ಪಂದಿಸುತ್ತಾರೆ ಅಂತ ನಂಬಿದ್ದೇವೆ. ನಮ್ಮಲ್ಲಿ ಒಮ್ಮೆ ಊಟ ಮಾಡಿದ್ರೆ ಕುಟುಂಬಸಮೇತ ಮತ್ತೆ ಬಂದೇ ಬರ‌್ತಾರೆ... ಆಂ? ಹ್ಹಹ್ಹಹ್ಹ...” ತಮ್ಮ ವಿಶ್ವಾಸಕ್ಕೆ ತಾವೇ ಮತ್ತೆ ನಕ್ಕರು.ನಗರ ಹೊರವಲಯದ ಬೆಳ್ಳಂದೂರು ಮುಖ್ಯರಸ್ತೆಯಲ್ಲಿರುವ ಹೋಟೆಲ್ ಐಬಿಸ್‌ನಲ್ಲಿ ನಡೆದಿರುವ `ಹೈವೇ ಡಾಬಾ ಫುಡ್ ಫೆಸ್ಟಿವಲ್~ ಬಗ್ಗೆ ಬಾಯಲ್ಲಿ ನೀರೂರುವಂತೆ ಅವರು ವಿವರಿಸುತ್ತಾ ಹೋದರು.`ಸ್ಟಾರ್ಟರ್ ಹೇಗಿತ್ತು? ದಾಲ್ ಪಾಲಕ್ ಶೊರ್ಬಾ ಅಂತ. ಹೆಸರಿನಂತೆ ರುಚಿಯಲ್ಲೂ ವಿಭಿನ್ನ ಸೂಪ್ ಅಲ್ವಾ? ಡಾಬಾ ಅಂದಾಕ್ಷಣ ಪಂಜಾಬ್ ನೆನಪಾದರೂ ನಮ್ಮ ಆಹಾರೋತ್ಸವದಲ್ಲಿ ಉತ್ತರ ಭಾರತದ ಖಾದ್ಯಗಳು ಒಳಗೊಂಡಿವೆ. ಇದು ನೋಡಿ ಹರಭರ ಕಬಾಬ್ ಮತ್ತು ಪನೀರ್ ಟಿಕ್ಕಾ. ಓ... ತಂದೂರಿ ಚಿಕನ್ ಬಂತು. ಇಂಥ ಚಿಕನ್ ತಿನ್ಬೇಕಾದ್ರೆ ಇಲ್ಲೇ ಬರ‌್ಬೇಕು.ಈ ಹೋಟೆಲ್ ಶುರುವಾಗುವುದಕ್ಕೂ ಒಂದು ವರ್ಷ ಮುಂಚೆ ನಾವು ದಿನಾಲೂ ಒಂದೊಂದು ಬಗೆಯ ಖಾದ್ಯಗಳನ್ನೂ ಹತ್ತಾರು ಪ್ರಾದೇಶಿಕ ಶೈಲಿಯಲ್ಲಿ ಅಂದರೆ ವಿಭಿನ್ನ ಮಸಾಲೆ ಬೆರೆಸಿ ತಯಾರಿಸುತ್ತಿದ್ದೆವು.ಹೊಸ ರುಚಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ- ಆರ್‌ಎನ್‌ಡಿ! ಕೊನೆಗೆ ಒಂದು ರುಚಿಯನ್ನು ನಮ್ಮ ಬ್ರಾಂಡ್ ಆಗಿ ಆರಿಸಿಕೊಳ್ಳುತ್ತಿದ್ದೆವು. ಹಾಗೆ ಸಂಶೋಧಿಸಿದ ಸವಿಯೇ ಆಹಾರೋತ್ಸವಗಳಲ್ಲಿ ಜನರಿಂದ ಭೇಷ್ ಅನಿಸಿಕೊಳ್ಳೋದು ಗೊತ್ತಾ? ಇದು ಮುರ್ಗ್ ಮಖಾನಿ, ಅದು ತವಾ ಮಟನ್ ಬಿರಿಯಾನಿ. ರಾಯ್ತದ ಜೊತೆ ತಿನ್ನಬೇಕು. ನಾವು ಬಾಸುಮತಿಯ ಅನ್ನವನ್ನು ಡೀಪ್ ಫ್ರೈ ಮಾಡುತ್ತೇವೆ. ಕಲರ್‌ಫುಲ್ ಬಿರಿಯಾನಿ ಅಲ್ವಾ? ನನಗೆ ಇಷ್ಟ. ನಿಮಗೆ ಇಷ್ಟವಾಯ್ತಾ?~`ನೀವು ಪಂಜಾಬ್‌ನಲ್ಲಿ ಬಡವರ ಮನೆಗೆ ಹೋದರೂ ಊಟಕ್ಕೆ ಮುಂಚೆ ಬೆಲ್ಲ ಮತ್ತು ತುಪ್ಪ ತಪ್ಪದೇ ಕೊಡುತ್ತಾರೆ. ಬಡವರ ಸ್ಟಾರ್ಟರ್ ಅಂತೀರಾ? ಆದರೆ ಶ್ರೀಮಂತರ ಊಟದಲ್ಲೂ ಇದು ಕಡ್ಡಾಯ. ಇಲ್ನೋಡಿ ನಾವೂ ಇಟ್ಟಿದ್ದೇವೆ. ಅದನ್ನು ಚಪ್ಪರಿಸಿ ಸ್ವಲ್ಪ ನೀರು ಕುಡಿದರೆ ಬಾಯಿ ರುಚಿ ಹೆಚ್ಚುತ್ತೆ. ಆ್ಯಪಿಟೈಸರ್.ರೋಟಿಗಳು ಉತ್ತರ ಭಾರತದ ವಿಶೇಷ ಖಾದ್ಯ. ಪಂಜಾಬ್, ಉತ್ತರ ಪ್ರದೇಶ ಮುಂತಾದೆಡೆಯ ಬಗೆಬಗೆ ರೋಟಿಗಳೂ, ನಾನ್‌ಗಳೂ ಈ ಆಹಾರೋತ್ಸವದಲ್ಲಿ ಇರುತ್ತವೆ. ಮಕ್ಕಿ ದಾ ರೋಟಿ ಇಲ್ಲದಿದ್ದರೆ ಪಂಜಾಬಿ ಊಟ ಅಪೂರ್ಣ ಬಿಡಿ. ದಾಲ್ ಫ್ರೈ, ಪನೀರ್ ಪಸಂದ್, ಪಿಂಡಿ ಚೋಲೆ, ದಾಲ್ ಮಖಾನಿ, ಸಾರ್ಸನ್ ಕಾ ಸಾಗು...ಕೊನೆಯಲ್ಲಿ ಡೆಸರ್ಟ್ ಅಂತ ಗಜ್ಜರ್ ಕಾ ಹಲ್ವಾ- ಕ್ಯಾರೆಟ್ ಹಲ್ವಾ- ಕೊಡ್ತೇವೆ. ಹೀಗೆ ಒಂದೆರಡಲ್ಲ. ಖುದ್ದು ಬಂದರೇನೆ ಹೈವೇ ಡಾಬಾ ಆಹಾರೋತ್ಸವದ ವೈಶಿಷ್ಟ್ಯ ಏನು ಅಂತ ನಿಮಗೆ ಗೊತ್ತಾಗೋದು~ ಅಂತ ಆಜಾನುಬಾಹು ಪ್ರೇಮ್ ಮಾತು ಮುಗಿಸಿದರು.

 ಅಂದಹಾಗೆ, ಈ ಆಹಾರೋತ್ಸವ ಆಗಸ್ಟ್ ಐದರವರೆಗೆ ನಡೆಯಲಿದ್ದು, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅನ್ವಯ.ಸ್ಥಳ: ಹೋಟೆಲ್ ಐಬಿಸ್, ಬೆಂಗಳೂರು ಟೆಕ್ ಪಾರ್ಕ್, ಬೆಳ್ಳಂದೂರು ಮುಖ್ಯರಸ್ತೆ (ಮಾರತ್‌ಹಳ್ಳಿ-ಸರ್ಜಾಪುರ ಹೊರವರ್ತುಲ ರಸ್ತೆ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry