ಟೆಕ್ಕಿಗಳ ಶಿಕ್ಷಣ ಸೇವೆ

7

ಟೆಕ್ಕಿಗಳ ಶಿಕ್ಷಣ ಸೇವೆ

Published:
Updated:
ಟೆಕ್ಕಿಗಳ ಶಿಕ್ಷಣ ಸೇವೆ

ಇವರು ದೂರದ ಉತ್ತರಾಖಂಡದಲ್ಲಿ ಭೀಕರ ಜಲಪ್ರಳಯದಿಂದ ನಿರಾಶ್ರಿತರಾದವರಿಗೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳುವವರು. ಸುನಾಮಿ ಸಂಭವಿಸಿ ಸಾವಿಗೀಡಾದವರ ಕುಟುಂಬಕ್ಕೆ ನೆರವು ನೀಡಿ ಕಣ್ಣೀರು ಒರೆಸುವವರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡುವವರೂ ಇವರೇ. ಹೀಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಅನೇಕ ಸಂದರ್ಭಗಳಲ್ಲಿ ನೆರವು ನೀಡುತ್ತಾ ಗಮನ ಸೆಳೆಯುತ್ತಿದೆ ‘ಜಿಇ ವಾಲಂಟಿಯರ್ಸ್ ತಂಡ’.ವೈಟ್‌ಫೀಲ್ಡ್‌ನಲ್ಲಿರುವ ಜಿಇ ಜಾನ್‌ ಎಫ್‌. ವೆಲ್ಷ್ ಟೆಕ್ನಾಲಜಿ ಸೆಂಟರ್‌ನ 400 ಎಂಜಿನಿಯರ್‌ಗಳ ತಂಡವೇ ‘ಜಿಇ ವಾಲಂಟಿಯರ್ಸ್’. ಈ ತಂಡದವರು ಕಂಪೆನಿ ಫಂಡ್ನಿಂದ ಹಾಗೂ ಸ್ವಂತ ಖರ್ಚಿನಿಂದ ಸಮಾಜಸೇವೆ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹೈದರಾಬಾದ್‌, ಚೆನ್ನೈ, ಮುಂಬೈ, ಕೋಲ್ಕತ್ತಾ ಹಾಗೂ ಬರೋಡಾ ನಗರಗಳಲ್ಲೂ ಜಿಇ ಕಂಪೆನಿಯ ವಾಲಂಟಿಯರ್ಸ್ ತಂಡ ಕಾರ್ಯನಿರ್ವಹಿಸುತ್ತಿದೆ. ತಂಡದ ಸದಸ್ಯರು ಶೈಕ್ಷಣಿಕ, ಆರೋಗ್ಯ, ಪರಿಸರ, ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನೆರವು ನೀಡುತ್ತಾರೆ. ವಾರಾಂತ್ಯದ ರಜೆ ಬಂದರೆ ಸಾಕು ಮನರಂಜನೆ, ಮೋಜಿಗೆ ಸಮಯ ಮೀಸಲಿಡುವ ಬಹುತೇಕ ಉದ್ಯೋಗಿಗಳ ನಡುವೆ ಇವರು ಭಿನ್ನವೆನಿಸುತ್ತಾರೆ.ತಂಡದ ನೆರವಿನಿಂದ ಪ್ರತಿವರ್ಷ ಸುಮಾರು 80 ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಇಷ್ಟೇ ಅಲ್ಲದೆ ವೃದ್ಧಾಶ್ರಮಗಳಿಗೆ ಹೋಗಿ ಅಲ್ಲಿನ ಸದಸ್ಯರೊಂದಿಗೆ ಸಮಯ ಮೀಸಲಿಡುತ್ತಾರೆ. ಅವರೊಂದಿಗೆ ಆಟವಾಡುವುದು, ಅವರ ಆರೋಗ್ಯ ತಪಾಸಣೆ ಮಾಡಿಸುವ ಕೆಲಸವನ್ನು ಟೆಕ್ಕಿಗಳು ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಚಾರಿಟಿ ಟ್ರಸ್ಟ್‌ಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮಕ್ಕಳಿಗೂ ಶಿಕ್ಷಣ ನೀಡುವ, ಆರೋಗ್ಯ ತಪಾಸಣೆ ಮಾಡಿಸುವ ಕೈಂಕರ್ಯವನ್ನು ತಂಡ ಮಾಡುತ್ತಿದೆ.‘ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉನ್ನತ ಶಿಕ್ಷಣದವರೆಗೂ ಆರ್ಥಿಕ ಸಹಾಯ ಮಾಡಲಾಗುತ್ತದೆ. ಪ್ರತಿದಿನ ಸಂಜೆ ಎರಡು ಗಂಟೆ ಕಂಪೆನಿಯಲ್ಲೇ ಮಕ್ಕಳಿಗೆ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನವನ್ನು ಬೋಧಿಸಲಾಗುತ್ತದೆ. ವೃದ್ಧಾಶ್ರಮಗಳ ವಯೋವೃದ್ಧರಿಗೆ ಪುಸಕ್ತಗಳನ್ನು ಓದುವ ಹವ್ಯಾಸ ಬೆಳೆಸುವುದು, ಆರೋಗ್ಯ ತಪಾಸಣೆ ಮಾಡಿಸುತ್ತೇವೆ. ನಮ್ಮ ಉದ್ದೇಶ ಒಂದೇ ಸಮಾಜ ಸೇವೆ’ ಎನ್ನುತ್ತಾರೆ ಜಿಇ ವಾಲಂಟಿಯರ್ಸ್ ತಂಡದ ಅಧ್ಯಕ್ಷ ಅಲೋಕ ನಂದ.ಕಂಪೆನಿ ಆರಂಭವಾದ ದಿನದಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಟೆಕ್ಕಿಗಳು. ಅಭಿವೃದ್ಧಿ ನೆಪದಲ್ಲಿ ಕಾಡು ನಾಶವಾಗುತ್ತಿರುವುದನ್ನು ಮನಗಂಡ ತಂಡ ಬಂಡಿಪುರ ಅಭಯಾರಣ್ಯದ 300 ಎಕರೆ ಜಾಗಕ್ಕೆ 60 ಸಾವಿರ ಗಿಡಗಳನ್ನು ನೀಡುವ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸಲು ಮುಂದಾಯಿತು. 2011ರಲ್ಲಿ ಬಳಸಿದ ಕಾಗದವನ್ನು ಮರುಬಳಕೆ ಮಾಡಿಕೊಂಡು 20 ಸಾವಿರ ನೋಟ್‌ಬುಕ್‌ಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಿದ್ದಾರೆ.

ಬಸವನಗುಡಿ, ನಲ್ಲೂರಹಳ್ಳಿ, ನಾಗರಬಾವಿ, ವೈಟ್‌ಫೀಲ್ಡ್‌ನ 11 ಶಾಲೆಗಳು ಸೇರಿದಂತೆ ಅನೇಕ ಸರ್ಕಾರಿ ಶಾಲೆಗಳಿಗೆ ತಂಡ ನೆರವು ನೀಡಿದೆ.

ಹಳ್ಳಿ ಪ್ರತಿಭೆಯ ಕನಸು ನನಸು

ನಲ್ಲೂರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮವಾಗಿ ಓದುತ್ತಿದ್ದ ಶ್ರುತಿ ಮನೆಯಲ್ಲಿ ಬಡತನ. ಪ್ರತಿಭಾವಂತೆ ಶ್ರುತಿಯ ಭವಿಷ್ಯಕ್ಕೆ ಬೆನ್ನೆಲುಬಾಗಿದ್ದು ಜಿಇ ವಾಲಂಟಿಯರ್ಸ್ ತಂಡ.‘ನನ್ನೂರು ತುಮಕೂರು ಜಿಲ್ಲೆ ಜಿ.ರಂಗನಹಳ್ಳಿ. ನಾನು ಎಂಜಿನಿಯರ್‌ ಆಗಬೇಕೆಂಬ ಕನಸು ಕಂಡಿದ್ದೆ.  ಮನೆಯಲ್ಲಿ ಬಡತನ. ಆದರೂ ಪ್ರಾಥಮಿಕ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದೆ. ಆಗ ಜಿಇ ವಾಲಂಟಿಯರ್ಸ್ ತಂಡ ನನ್ನನ್ನು ಆಯ್ಕೆ ಮಾಡಿತು. ಗಣಿತ, ವಿಜ್ಞಾನ, ಇಂಗ್ಲಿಷ್‌ ವಿಷಯಗಳ ತರಬೇತಿ ನೀಡಿದ್ದಲ್ಲದ ಹಣಕಾಸು ನೆರವು ನೀಡಿತು. ಅದರ ನೆರವಿನಿಂದ ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸಿದೆ. ಇದೀಗ ನಗರದ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  ಬಿ.ಇ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯವನ್ನು ಆಯ್ಕೆ ಮಾಡಿಕೊಂಡೆ. ತಂಡದ ನೆರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎನ್ನುತ್ತಾರೆ ಶ್ರುತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry