ಬುಧವಾರ, ನವೆಂಬರ್ 13, 2019
18 °C
15ಕ್ಕೂ ಅಧಿಕ ಮಂದಿ ಸಾವು , 180ಜನರಿಗೆ ಗಾಯ

ಟೆಕ್ಸಾಸ್ ರಸಗೊಬ್ಬರ ಘಟಕದಲ್ಲಿ ಸ್ಫೋಟ

Published:
Updated:

ಹ್ಯೂಸ್ಟನ್ (ಪಿಟಿಐ): ಬಾಸ್ಟನ್ ಸ್ಫೋಟದ ಕಹಿನೆನಪು ಮಾಸುವ ಮೊದಲೇ ಬುಧವಾರ ರಾತ್ರಿ ಅಮೆರಿಕದ ಟೆಕ್ಸಾಸ್‌ನ ವೆಸ್ಟ್ ನಗರದ ರಸಗೊಬ್ಬರ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಸಾವು ನೋವಿನ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ ಪ್ರಾಥಮಿಕ ವರದಿಗಳ ಪ್ರಕಾರ ಕನಿಷ್ಠ 15ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 180ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಯಿಂದ ಹಲವು ಕಟ್ಟಡಗಳು ಸಂಪೂರ್ಣ ಹಾನಿಗೊಳಗಾಗಿವೆ.`ಅಣುಬಾಂಬ್ ರೀತಿಯಲ್ಲೇ ಸ್ಫೋಟ ಸಂಭವಿಸಿದೆ' ಎಂದು ವೆಸ್ಟ್ ನಗರದ ಮೇಯರ್ ಟಾಮಿ ಮಸ್ಕಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕೆಲ ಸ್ಥಳೀಯ ಮಾಧ್ಯಮಗಳ ಪ್ರಕಾರ ಮೃತಪಟ್ಟವರ ಸಂಖ್ಯೆ ಸುಮಾರು 15 ಎನ್ನಲಾಗಿದೆ. ಸ್ಫೋಟ ಸಂಭವಿಸಿದ ಘಟಕದ ಬಳಿ ಇರುವ ನರ್ಸಿಂಗ್ ಹೊಂನಲ್ಲಿದ್ದ 130 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಘಟನೆಯಲ್ಲಿ  15 ಜನ ಮೃತಪಟ್ಟಿದ್ದಾರೆ ಎಂದು ವೆಸ್ಟ್ ತುರ್ತು ಸೇವಾ ವಿಭಾಗದ ನಿರ್ದೇಶಕ ಡಾ. ಜಾರ್ಜ್ ಸ್ಮಿತ್ ತಿಳಿಸಿದ್ದರೆ, ಸಾರ್ವಜನಿಕ ರಕ್ಷಣಾ ಇಲಾಖೆಯ ವಕ್ತಾರ ಡಿ.ಎಲ್. ವಿಲ್ಸನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೃತರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದರು.ಹೇಗಾಯ್ತು?: ರಸಗೊಬ್ಬರ ಘಟಕ ಜನವಸತಿ ಪ್ರದೇಶದಲ್ಲಿರುವುದು ಸಾವುನೋವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಸ್ಫೋಟಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ ಬಾಸ್ಟನ್ ಘಟನೆಯ ಬೆನ್ನಹಿಂದೆಯೇ ಈ ಸ್ಫೋಟ ನಡೆದಿರುವುದು ಅಮೆರಿಕದ ಆತಂಕವನ್ನು ಹೆಚ್ಚಿಸಿದೆ.ಆರಂಭದಲ್ಲಿ ಘಟಕದ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ರಸಗೊಬ್ಬರದ ಘಟಕ ಪೂರ್ಣ ನಾಶಗೊಂಡಿದ್ದು ಸಮೀಪದಲ್ಲಿದ್ದ ನರ್ಸಿಂಗ್ ಹೋಂಗೆ ಹೆಚ್ಚಿನ ಹಾನಿಯಾಗಿದೆ. ಸುತ್ತಲಿನ ಸುಮಾರು 60ರಿಂದ 80 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಅಧಿಕಾರಿಗಳು ಮನೆಮನೆಗೂ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.1995ರಲ್ಲಿ ಒಕ್ಲಾಹೊಮ ನಗರದಲ್ಲಿ ನಡೆದ ಸ್ಫೋಟ ಸಂದರ್ಭದಲ್ಲಿ ಮುರ‌್ರಾ ಫೆಡರಲ್ ಕಟ್ಟಡ ಧ್ವಂಸಗೊಂಡ ರೀತಿಯಲ್ಲೇ ಈಗಲೂ ಅದೇ ಮಾದರಿಯ ಹಾನಿಯಾಗಿದೆ ಎಂದು ಪಾಲಿಕೆ ಸದಸ್ಯ ಅಲ್ ವ್ಯಾನೆಕ್ ತಿಳಿಸಿದರು.ಸ್ಫೋಟದ ಸುತ್ತಮುತ್ತಲಿನ ಪ್ರದೇಶ ಯುದ್ಧ ಪೀಡಿತ ಇರಾಕ್‌ನಂತೆ ಕಾಣುತ್ತಿದ್ದು, ಆಸ್ತಿಪಾಸ್ತಿಯ ಹಾನಿಯ ಅಂದಾಜನ್ನು ಮಾಡಲಾಗುತ್ತಿದೆ.

ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರೂ ಜನ ಬಾಗಿಲು ತೆಗೆಯದಂತೆ ಸೂಚನೆ ನೀಡಲಾಗಿದೆ.ಕೆಲ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೊಸದಾಗಿ ಸ್ಫೋಟ ಸಂಭವಿಸುವ ಇಲ್ಲವೆ ಘಟಕದಿಂದ ಅಮೋನಿಯ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ    ಈ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಸಗೊಬ್ಬರದಲ್ಲಿ ಬಳಕೆಯಾಗುವ ಆನ್‌ಹೈಡ್ರೊಸ್ ಅಮೋನಿಯ ಸೋರಿಕೆಯಾದಲ್ಲಿ ಮನುಷ್ಯರು ಇದರ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ತೀವ್ರ ಸುಟ್ಟಗಾಯ ಇಲ್ಲವೆ ಸಾವು ಸಂಭವಿಸುವ ಅಪಾಯವೂ ಇದೆ  ಎಂದು ಟೆಕ್ಸಾಸ್ ರಾಜ್ಯದ ಸೆನೆಟರ್ ಬ್ರೇನ್ ಬರ್ಡ್‌ವೆಲ್  ತಿಳಿಸಿದರು.

ಪ್ರತಿಕ್ರಿಯಿಸಿ (+)