ಗುರುವಾರ , ನವೆಂಬರ್ 21, 2019
21 °C

ಟೆಟ್ರಾಪ್ಯಾಕ್‌ನಲ್ಲಿ ಮದ್ಯ- ಇಲಾಖೆ ತೀರ್ಮಾನಕ್ಕೆ

Published:
Updated:

ಬೆಂಗಳೂರು: ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಪೊಟ್ಟಣ ಹಾಗೂ ಪೆಟ್ ಬಾಟಲಿಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಸಾಯಿದತ್ತ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ಇತ್ಯರ್ಥಪಡಿಸಿದೆ. ಈ ಮನವಿಯನ್ನು ಅಬಕಾರಿ ಇಲಾಖೆಯ ಮುಂದಿಡುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.ಮದ್ಯವನ್ನು ಟೆಟ್ರಾ ಪ್ಯಾಕ್, ಪೆಟ್ ಬಾಟಲಿಗಳಲ್ಲಿ ಮಾರಾಟ ಮಾಡುವುದಕ್ಕೆ ತ್ರಿಪುರ, ದೆಹಲಿ, ಕೇರಳ ರಾಜ್ಯಗಳು ನಿಷೇಧ ಹೇರಿವೆ. ಆದರೆ ಕರ್ನಾಟಕ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಟೆಟ್ರಾ ಪ್ಯಾಕ್‌ಗೆ ನಿಷೇಧ ಹೇರುವಂತೆ ತಾವು ಸರ್ಕಾರಕ್ಕೆ ಮನವಿ ಸಲ್ಲಿಸಿಲ್ಲ ಎಂದೂ ಅವರು ಹೇಳಿದರು.`ಈ ಸಂದರ್ಭಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲು ನಾವು ಬಯಸುವುದಿಲ್ಲ. ಟೆಟ್ರಾ ಪ್ಯಾಕ್‌ನಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ನಿಷೇಧ ಹೇರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ. ಅವರು ನಿಮ್ಮ ಕೋರಿಕೆಗೆ ಬೆಲೆಕೊಡದಿದ್ದರೆ, ನಮ್ಮಲ್ಲಿಗೆ ಬನ್ನಿ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮೌಖಿಕವಾಗಿ ಹೇಳಿತು.ಟೆಟ್ರಾ ಪ್ಯಾಕ್‌ನಲ್ಲಿ ಮಾರಾಟ ಮಾಡಲು ಅವಕಾಶ ನೀಡಿರುವ ಕಾರಣ, ಮದ್ಯದ ಕಳ್ಳಸಾಗಾಟಕ್ಕೆ ಇಂಬು ನೀಡಿದಂತೆ ಆಗಿದೆ. ಪ್ಲಾಸ್ಟಿಕ್ ಅಂಶಗಳಿರುವ ಈ ಪೊಟ್ಟಣಗಳಲ್ಲಿ ಮದ್ಯವನ್ನು ಸಂಗ್ರಹಿಸಿ ಇಡುವುದರಿಂದ, ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲ ಕೆಲವು ರಾಸಾಯನಿಕಗಳು ಮದ್ಯಕ್ಕೆ ಸೇರಿಕೊಳ್ಳುತ್ತವೆ. ಈ ಮದ್ಯ ಸೇವಿಸುವ ವ್ಯಕ್ತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.ತನಿಖಾಧಿಕಾರಿ ಲೋಪ ಪತ್ತೆಗೆ ಸಮಿತಿ: ಸರ್ಕಾರದ ಪ್ರಮಾಣಪತ್ರ

ಆರೋಪಿಯು ಖುಲಾಸೆಗೊಳ್ಳಲು ಪ್ರಕರಣದ ತನಿಖಾಧಿಕಾರಿಯ ಲೋಪ ಕಾರಣವೇ ಎಂಬುದನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ.ಆಯಾ ವಲಯಗಳ ಐಜಿಪಿ, ಹಿರಿಯ ಕಾನೂನು ಅಧಿಕಾರಿ ಮತ್ತಿತರರು ಈ ಸಮಿತಿಯ ಸದಸ್ಯರಾಗಿದ್ದಾರೆ. ಪರಿಶೀಲನೆಯ ನಂತರ, ಆರೋಪಿ ಖುಲಾಸೆಗೊಳ್ಳಲು ತನಿಖಾಧಿಕಾರಿಯೇ ಕಾರಣ ಎಂದು ಕಂಡುಬಂದರೆ, ಅಂಥ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಮಿತಿ ಶಿಫಾರಸು ಮಾಡಬಹುದು ಎಂದು ಸರ್ಕಾರ ಹೇಳಿದೆ.ನಗರದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇವನ್ನು ತಡೆಗಟ್ಟಲು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಕೋರಿ ವಕೀಲ ಎಂ.ಕೆ. ವಿಜಯ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್ ಜನರಲ್ ಎಸ್. ವಿಜಯ ಶಂಕರ್ ಈ ಹೇಳಿಕೆ ಸಲ್ಲಿಸಿದರು.ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡವರು ಸಮರ್ಥ ವಾದ ಮಂಡಿಸಲು ವಿಫಲವಾದರೆ, ಆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಎಡಿಜಿಪಿ (ಅಪರಾಧ ವಿಭಾಗ) ಅಧ್ಯಕ್ಷತೆಯ ಸಮಿತಿಯು ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಿ, ವಾದ ಮಂಡಿಸುವಲ್ಲಿ ನಿರ್ಲಕ್ಷ ತೋರುವ ಪ್ರಾಸಿಕ್ಯೂಟರ್‌ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.ಕರ್ನಾಟಕ ಪೊಲೀಸ್ ಕೈಪಿಡಿಯ ಅನ್ವಯ, ಪ್ರತಿ ಪೊಲೀಸ್ ಠಾಣೆಯಲ್ಲೂ ಕಾನೂನು ಸುವ್ಯವಸ್ಥೆ ಮತ್ತು ಕ್ರಿಮಿನಲ್ ಅಪರಾಧಗಳ ತನಿಖೆಗೆ ಪ್ರತ್ಯೇಕ ಸಬ್ ಇನ್‌ಸ್ಪೆಕ್ಟರ್‌ಗಳು ಇರುತ್ತಾರೆ. ಇವರಿಗೆ ಪ್ರತ್ಯೇಕ ಸಹಾಯಕರನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ತನಿಖಾಧಿಕಾರಿಗಳನ್ನು ಕೆಲವೊಮ್ಮೆ ಕಾನೂನು-ಸುವ್ಯವಸ್ಥೆ ಪಾಲನೆ, ಅತಿ ಗಣ್ಯರಿಗೆ ಭದ್ರತೆಯಂಥ ಅನ್ಯ ಕಾರ್ಯಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಅವರು ಪ್ರಕರಣಗಳ ತನಿಖೆಯ ಮೇಲೆ ಪೂರ್ಣ ಪ್ರಮಾಣದಲ್ಲಿ ಗಮನ ಕೇಂದ್ರೀಕರಿಸಲು ಆಗುತ್ತಿಲ್ಲ.ತನಿಖಾಧಿಕಾರಿಗಳು ವಿವಿಧ ಮಾದರಿಯ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳಲು ಅನುಕೂಲ ಆಗುವಂತೆ ಅವರಿಗೆ ವಿಶೇಷ ತರಬೇತಿಯ ಅಗತ್ಯ ಇದೆ ಎಂದು ಎ.ಜಿ ತಿಳಿಸಿದರು. ಸಾಕ್ಷಿದಾರರಿಗೆ ಭದ್ರತೆ ಒದಗಿಸುವ ಮಸೂದೆಯೊಂದು ಸಂಸತ್ತಿನ ಅನುಮೋದನೆಗೆ ಕಾಯುತ್ತಿದೆ. ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಅದೇ ಮಾದರಿಯ ಮಸೂದೆಯನ್ನು ಮಂಡಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಪ್ರತಿಕ್ರಿಯಿಸಿ (+)