ಬುಧವಾರ, ನವೆಂಬರ್ 13, 2019
21 °C

ಟೆಟ್ರಾ ಪ್ಯಾಕ್‌ನಲ್ಲಿ ಮದ್ಯ ನಿಷೇಧಿಸಲು ಪಿಐಎಲ್

Published:
Updated:

ಬೆಂಗಳೂರು: ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಪೊಟ್ಟಣ ಹಾಗೂ ಪೆಟ್ ಬಾಟಲಿಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ, ಮದ್ಯವನ್ನು ಈ ರೀತಿ ಮಾರಾಟ ಮಾಡುವುದರಿಂದ ಯಾವ ಕಾನೂನಿನ ಉಲ್ಲಂಘನೆ ಆಗುತ್ತದೆ ಎಂಬುದನ್ನು ತಿಳಿಸುವಂತೆ ಸೂಚಿಸಿದೆ.`ಟೆಟ್ರಾ ಪ್ಯಾಕ್, ಪೆಟ್ ಬಾಟಲಿ ಮತ್ತು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಮದ್ಯ ಮಾರಾಟ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ಕೇರಳ, ದೆಹಲಿ ರಾಜ್ಯಗಳು ಅರಿತಿವೆ. ಮದ್ಯವನ್ನು ಗಾಜಿನ ಶೀಷೆಗಳಲ್ಲೇ ಮಾರಾಟ ಮಾಡಬೇಕು ಎಂದು ಆ ರಾಜ್ಯಗಳು ನಿಯಮ ರೂಪಿಸಿವೆ. ಇದೇ ಮಾದರಿಯ ನಿಯಮವನ್ನು ಕರ್ನಾಟಕದಲ್ಲೂ ಜಾರಿಗೆ ತರುವಂತೆ ನಿರ್ದೇಶನ ನೀಡಬೇಕು' ಎಂದು ಬೆಂಗಳೂರಿನ ಸಾಯಿದತ್ತ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.ಮದ್ಯವನ್ನು ಈ ರೀತಿಯ ಪೊಟ್ಟಣಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಿರುವ ಕಾರಣ, ಮದ್ಯದ ಕಳ್ಳಸಾಗಾಟಕ್ಕೆ ಇಂಬು ನೀಡಿದಂತೆ ಆಗಿದೆ. ಪ್ಲಾಸ್ಟಿಕ್ ಅಂಶಗಳಿರುವ ಈ ಪೊಟ್ಟಣಗಳಲ್ಲಿ ಮದ್ಯವನ್ನು ಸಂಗ್ರಹಿಸಿ ಇಡುವುದರಿಂದ, ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲ ಕೆಲವು ರಾಸಾಯನಿಕಗಳು ಮದ್ಯಕ್ಕೆ ಸೇರಿಕೊಳ್ಳುತ್ತವೆ. ಈ ಮದ್ಯ ಸೇವಿಸುವ ವ್ಯಕ್ತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಅರ್ಜಿದಾರರು ದೂರಿದ್ದಾರೆ.ಇಂಥ ಪೊಟ್ಟಣಗಳಲ್ಲಿ ಸಂಗ್ರಹಿಸಿಟ್ಟ ಮದ್ಯವು ತನ್ನ ತಾಜಾತನವನ್ನು ಅಲ್ಪ ಅವಧಿಯಲ್ಲೇ ಕಳೆದುಕೊಳ್ಳುತ್ತದೆ. ವೈನ್ ಆರು ತಿಂಗಳಲ್ಲೇ ಸೇವಿಸಲು ಅನರ್ಹವಾಗುತ್ತದೆ. ಇಂಥ ಮದ್ಯದಿಂದ ನಿರ್ನಾಳ ಗ್ರಂಥಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ, ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಈ ಮಾದರಿಯ ಪೊಟ್ಟಣಗಳು ಮಣ್ಣಿನಲ್ಲಿ ಸುಲಭವಾಗಿ ಕೊಳೆಯುವುದಿಲ್ಲ. ಇದರಿಂದ ಪರಿಸರ ಮಾಲಿನ್ಯ ಕೂಡ ಉಂಟಾಗುತ್ತದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)