ಟೆನಿಸ್‌ನಲ್ಲಿ ಹೊಸ ಆಶಯ

7

ಟೆನಿಸ್‌ನಲ್ಲಿ ಹೊಸ ಆಶಯ

Published:
Updated:

ದಾವಣಗೆರೆಯಲ್ಲಿ ಒಂದು ವಾರ ನಡೆದ ಐಟಿಎಫ್ ಟೆನಿಸ್‌ನಿಂದಾಗಿ ಜಿಲ್ಲೆಯ ಟೆನಿಸ್ ಚಟುವಟಿಕೆಗೆ ಮರುಜೀವ ಸಿಕ್ಕಂತಾಗಿದೆ. ಇಲ್ಲಿ 2002ರ ಎಟಿಪಿ ಟೂರ್ನಿಯ ಬಳಿಕ ನಡೆದ ಮೊದಲ ಅಂತರರಾಷ್ಟ್ರೀಯ ಟೂರ್ನಿ ಇದಾಗಿದೆ.ಜಿಲ್ಲೆಯಲ್ಲಿ 60 ಮತ್ತು 70ರ ದಶಕಗಳಲ್ಲಿ  ನಿರಂತರವಾಗಿ ಒಂದಿಲ್ಲಾ ಒಂದು ಟೆನಿಸ್ ಟೂರ್ನಿಗಳು ನಡೆಯುತ್ತಿದ್ದವು. ದಾವಣಗೆರೆ ಕ್ಲಬ್‌ನಲ್ಲಿ ನಡೆಯುತ್ತಿದ್ದ ಈ ಪಂದ್ಯಕ್ಕೆ ಟಿಕೆಟ್ ಪಡೆದು ಪ್ರೇಕ್ಷಕರು ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಜಿಲ್ಲಾ ಟೆನಿಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಎಸ್.ಎಂ. ಬ್ಯಾಡಗಿ. ಅಂದಿನ ಖ್ಯಾತ ಆಟಗಾರರಾದ ರಾಮನಾಥನ್ ಕೃಷ್ಣನ್, ಶಂಕರ್ ಕೃಷ್ಣನ್, ಕಪನಿಪತಿ, ಹೆನ್ರಿಕೊ ಪಿಪರ್ನೊ, ನಂದನ್‌ಬಾಲ್ ಮತ್ತಿತರರು ಇಲ್ಲಿ  ಆಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರು.ತಮಿಳುನಾಡಿನ ಮೋಹಿತ್ ಮಯೂರ್, ಶ್ರೀರಾಮ್ ಬಾಲಾಜಿ ಅವರ ಆಟವನ್ನು ಬೆರಗುಗಣ್ಣಿನಿಂದ ಸ್ಥಳೀಯ ಟೆನಿಸ್‌ಪ್ರಿಯರು ಆನಂದಿಸಿದರು. ಇಬ್ಬರೂ ಮಧ್ಯಮವರ್ಗದ ಕುಟುಂಬದಿಂದ ಬಂದ ಆಟಗಾರರು. ಅವರಿಗೆ ತಮಿಳುನಾಡು ಟೆನಿಸ್ ಸಂಸ್ಥೆ ಮತ್ತು ಉದ್ಯಮಿಗಳು ನಿರಂತರ ಪ್ರಾಯೋಜಕತ್ವ ಸಿಗುತ್ತಿದೆ. ಹೀಗಾಗಿ ಇವರು ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿ ಪಡೆಯಲು ಸಾಧ್ಯವಾಗಿದೆ. ಅಷ್ಟೇ ಪರಿಶ್ರಮ ಇಲ್ಲಿನವರು ಹಾಕುತ್ತಾರಾದರೂ ಉನ್ನತ ತರಬೇತಿಗೆ ಆರ್ಥಿಕ ನೆರವು ಬೇಕು. ಇದು ದುಬಾರಿ ಆಟ. ಒಳ್ಳೆಯ ಪ್ರಾಯೋಜಕರು ಸಿಕ್ಕಿದರೆ ಖಂಡಿತ ಅದೇ ರೀತಿಯ ಕ್ರೀಡಾಪಟುಗಳನ್ನು ಇಲ್ಲಿ ರೂಪಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಇಲ್ಲಿನ ಜಿಲ್ಲಾ ಟೆನಿಸ್ ಸಂಸ್ಥೆಯ ತರಬೇತುದಾರ ಮಹಾಂತೇಶ್.ಜಿಲ್ಲಾಡಳಿತದ ಆಸಕ್ತಿಯಿಂದ ಟೆನಿಸ್ ಕೋರ್ಟ್ ಮತ್ತೆ ಮರುಜೀವ ಪಡೆದಿದೆ. ಗುಣಮಟ್ಟದ ಬಗ್ಗೆ ಹಾಲೆಂಡ್‌ನ ಕೊಲಿನ್ ವಾನ್ ಬೀಮ್, ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ, ಭಾರತದ ಸನಮ್ ಸಿಂಗ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.2002ರಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣಗೊಂಡಿದ್ದ ದಾವಣಗೆರೆಯ ಟೆನಿಸ್ ಅಂಗಣ, ಬಳಿಕ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿತು. ಇದೇ ಅಂಗಣವನ್ನು ಕಬಡ್ಡಿ, ವಾಲಿಬಾಲ್, ರಸಮಂಜರಿ ಮತ್ತಿತರ ಚಟುವಟಿಕೆಗೆ ನೀಡಿದ ಪರಿಣಾಮ ಸಿಂಥೆಟಿಕ್ `ಹಾಸು' ಸಂಪೂರ್ಣ ಹಾಳಾಯಿತು.`ಅಂಗಣವನ್ನು ಜಿಲ್ಲಾ ಟೆನಿಸ್ ಸಂಸ್ಥೆಗೆ ಸಂಪೂರ್ಣ ವಹಿಸಬೇಕು. ಇಲ್ಲಿ ಯಾವುದೇ ಇತರ ಚಟುವಟಿಕೆಗೆ ಅವಕಾಶ ನೀಡಬಾರದು. ತಮಗೇ ನೀಡಿದಲ್ಲಿ ಪ್ರತಿ ವರ್ಷ ಐಟಿಎಫ್ ಪಂದ್ಯಗಳನ್ನು ನಡೆಸಲು ಸಿದ್ಧ. ಈ ಪಂದ್ಯಗಳನ್ನು ನಿರ್ವಹಿಸಿದ ರೀತಿ ನೋಡಿ ಪ್ರಾಯೋಜಕರೂ ಮುಂದೆ ಬರುತ್ತಿದ್ದಾರೆ. ಖಂಡಿತವಾಗಿಯೂ ಉಜ್ವಲ ಭವಿಷ್ಯವಿದೆ. ಈ ಪಂದ್ಯಗಳು ಹೊಸ ಆಟಗಾರರಿಗೆ, ಮಕ್ಕಳಿಗೆ ಸ್ಫೂರ್ತಿಯಾಗಲಿದೆ' ಎಂದು ಆಶಯ ವ್ಯಕ್ತಪಡಿಸಿದರು ಡಾ.ಬ್ಯಾಡಗಿ ಮತ್ತು ಜಂಟಿ ಕಾರ್ಯದರ್ಶಿ ಡಾ.ಸುಭಾಷ್ ಬೆನ್ನೂರು.

ಶರತ್ ಹೆಗ್ಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry