ಟೆನಿಸ್‌: ರೋಹನ್‌- ಐಸಾಮ್‌ಗೆ ಜಯ

7

ಟೆನಿಸ್‌: ರೋಹನ್‌- ಐಸಾಮ್‌ಗೆ ಜಯ

Published:
Updated:

ಸಿಡ್ನಿ (ಪಿಟಿಐ): ರೋಹನ್‌ ಬೋಪಣ್ಣ ಮತ್ತು ಐಸಾಮ್‌ ಉಲ್‌ ಹಕ್‌ ಖುರೇಷಿ ಜೋಡಿ ಇಲ್ಲಿ ನಡೆಯುತ್ತಿರುವ ಎಟಿಪಿ ಅಪಿಯಾ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು.ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ- ಪಾಕಿಸ್ತಾನದ ಜೋಡಿ 7-6, 6-7, 10-3 ರಲ್ಲಿ ಹಾಲೆಂಡ್‌ನ ಜೀನ್‌ ಜೂಲಿಯನ್‌ ರೋಜರ್‌ ಮತ್ತು ರುಮೇನಿಯದ ಹೊರಿಯಾ ಟೆಕಾವ್‌ ವಿರುದ್ಧ ಜಯ ಪಡೆಯಿತು.ರೋಹನ್‌ ಮತ್ತು ಐಸಾಮ್‌ ಪ್ರಸಕ್ತ ಋತುವಿನಲ್ಲಿ ಒಂದಾಗಿ ಆಡಲು ನಿರ್ಧರಿಸಿದ್ದಾರೆ. ಮತ್ತೆ ಜೊತೆ ಯಾದ ಬಳಿಕ ಅವರಿಗೆ ದೊರೆತ ಮೊದಲ ಗೆಲುವು ಇದು. ಭಾರತ- ಪಾಕಿಸ್ತಾನ ಜೋಡಿ ಒಂದು ಗಂಟೆ 41 ನಿಮಿಷಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ರೋಹನ್‌ ಮತ್ತು ಐಸಾಮ್‌ ಮುಂದಿನ ಸುತ್ತಿನ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ನ ಟ್ರೀಟ್‌ ಹ್ಯೂ ಹಾಗೂ ಬ್ರಿಟನ್‌ನ ಡೊಮಿನಿಕ್‌ ಇಂಗ್ಲೊಟ್‌ ಅವರ ಸವಾಲನ್ನು ಎದುರಿಸಲಿದ್ದಾರೆ.ರೋಹನ್‌ ಮತ್ತು ಐಸಾಮ್‌ ಹೋದ ವಾರ ನಡೆದ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು.ಭಾರತದ ಲಿಯಾಂಡರ್‌ ಪೇಸ್‌ ಅವರು ಈ ಟೂರ್ನಿಯಲ್ಲಿ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಜೊತೆ ಕಣಕ್ಕಿಳಿದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಜೂಲಿಯನ್‌ ಬೆನೆಟು ಮತ್ತು ಎಡ್ವರ್ಡೊ ರೋಜರ್‌ ವಸೆಲಿನ್‌ ವಿರುದ್ಧ ಪೈಪೋಟಿ ನಡೆಸುವರು.ಸಫರೋವಾಗೆ ಜಯ: ಜೆಕ್‌ ಗಣರಾಜ್ಯದ ಲೂಸಿ ಸಫರೋವಾ ಅವರು ಸಿಡ್ನಿ ಇಂಟರ್‌ನ್ಯಾಷನಲ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಜಯ ಪಡೆದರು.ಮಂಗಳವಾರ ನಡೆದ ಪಂದ್ಯದಲ್ಲಿ ಸಫರೋವಾ 6-4, 7-5 ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೊಲಿನ್‌ ವೊಜ್‌ನಿಯಾಕಿಗೆ ಆಘಾತ ನೀಡಿದರು. ಅಮೆರಿಕದ ಬೆಥನಿ ಮಟೆಕ್‌ 7-5, 6-2 ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಅಗ್ನೀಸ್ಕಾ ರಡ್ವಾನ್‌ಸ್ಕಾ ವಿರುದ್ಧ ಅಚ್ಚರಿಯ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry