ಗುರುವಾರ , ಮೇ 6, 2021
23 °C

ಟೆನಿಸ್: ನಾಲ್ಕನೇ ಸುತ್ತಿಗೆ ನಡಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಅಮೋಘ ಪ್ರದರ್ಶನ ಮುಂದುವರಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ರಫೆಲ್ 7-6, 6-1, 7-5ರಲ್ಲಿ ಅರ್ಜೆಂಟೀನಾದ ಡೇವಿಡ್ ನೆಲ್ಬಂಡಿಯನ್ ಎದುರು ಗೆಲುವು ಸಾಧಿಸಿದರು.ಎರಡನೇ ಶ್ರೇಯಾಂಕದ ರಫೆಲ್‌ಗೆ ನೆಲ್ಬಂಡಿಯನ್ ಮೊದಲೇ ಸೆಟ್‌ನಲ್ಲಿಯೇ ಬೆವರಿಳಿಸಿದರು. ಹಾಗಾಗಿ ಈ ಸೆಟ್ ಟೈಬ್ರೇಕರ್ ಹಂತ ಕೂಡ ತಲುಪಿತ್ತು. ಆಕರ್ಷಕ ಏಸ್ ಸಿಡಿಸಿದ ಅರ್ಜೆಂಟೀನಾದ ಆಟಗಾರ ನಡಾಲ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು.ಆದರೆ ರಫೆಲ್ ಎರಡನೇ ಸೆಟ್‌ನಲ್ಲಿ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ನೀಡಿದರು. ಆ ಸೆಟ್‌ಅನ್ನು 6-1ರಲ್ಲಿ ಜಯಿಸಿದರು. ಮೂರನೇ ಸೆಟ್‌ನಲ್ಲಿ ಮತ್ತೆ ನೆಲ್ಬಂಡಿಯನ್ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಸ್ವಯಂಕೃತ ತಪ್ಪುಗಳು ಅವರ ಗೆಲುವಿನ ಹಾದಿಗೆ ಮುಳುವಾದವು. ಈ ಪಂದ್ಯ 2 ಗಂಟೆ 39 ನಿಮಿಷ ನಡೆಯಿತು.

ನಡಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಲುಕ್ಸೆನ್‌ಬರ್ಗ್‌ನ ಗೈಲ್ಸ್ ಮುಲ್ಲರ್ ಅವರ ಸವಾಲು ಎದುರಿಸಬೇಕಾಗಿದೆ.ನಾಲ್ಕನೇ ಶ್ರೇಯಾಂಕದ ಮರ‌್ರೆಗೆ ಅಷ್ಟೇನು ಸವಾಲು ಎದುರಾಗಲಿಲ್ಲ. ಅವರು 6-1, 6-4, 6-2ರಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೋಪೆಜ್ ಅವರನ್ನು ಮಣಿಸಿದರು.ಪುರುಷರ ವಿಭಾಗದ ಮೂರನೇ ಸುತ್ತಿನ ಇತರೆ ಪಂದ್ಯಗಳಲ್ಲಿ ಅಮೆರಿಕದ ಆ್ಯಂಡಿ ರಾಡಿಕ್ 6-1, 6-4, 7-6ರಲ್ಲಿ ಫ್ರಾನ್ಸ್‌ನ ಜುಲಿಯನ್ ಬೆನೆಟಿಯು ಎದುರೂ, ಅಮೆರಿಕದ ಜಾನ್ ಇಸ್ನೇರ್ 7-6, 6-4, 6-4ರಲ್ಲಿ ಅಮೆರಿಕದ ಅಲೆಕ್ಸ್ ಬೊಗೊಮೊಲವ್ ವಿರುದ್ಧವೂ, ಫ್ರಾನ್ಸ್‌ನ ಜೈಲ್ಸ್ ಸಿಮೊನ್ 4-6, 7-6, 6-2, 7-6ರಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮೇಲೂ, ಅಮೆರಿಕದ   ಡೊನಾಲ್ಡ್ ಯಂಗ್ 7-5, 6-4, 6-3ರಲ್ಲಿ ರಷ್ಯಾದ ಇಗೊರ್ ಕುನಿತ್ಸಿನ್ ಎದುರೂ ಹಾಗೂ ಸ್ಪೇನ್‌ನ ಡೇವಿಡ್ ಫೆರೆರೊ 6-1, 6-2, 7-6ರಲ್ಲಿ ಜರ್ಮನಿಯ ಫ್ಲೊರಿಯಾನ್ ಮೇಯರ್ ವಿರುದ್ಧವೂ ಗೆದ್ದರು.ಸ್ಟ್ರಾಸರ್-ಜೊನವೆರಾ ಮುಖಾಮುಖಿ: ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟ್ರಾಸರ್ ಹಾಗೂ ರಷ್ಯಾ ವೆರಾ ಜೊನರೆವಾ ಪೈಪೋಟಿ ನಡೆಸಲಿದ್ದಾರೆ.

ಒಂಬತ್ತನೇ ಶ್ರೇಯಾಂಕದ ಆಟಗಾರ್ತಿ ಸ್ಟ್ರಾಸರ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6-2, 6-7, 6-3ರಲ್ಲಿ ರಷ್ಯಾದ ಮರಿಯಾ ಕಿರಿಲೆಂಕೊ ಎದುರು ಗೆದ್ದು ಎಂಟರ ಘಟ್ಟ ಪ್ರವೇಶಿಸಿದರು.ಮೊದಲ ಹಾಗೂ ಮೂರನೇ ಸೆಟ್‌ನಲ್ಲಿ ಅಷ್ಟೊಂದು ಪೈಪೋಟಿ ಕಾಣಲಿಲ್ಲ. ಆದರೆ ಟೈ ಬ್ರೇಕರ್ ಹಂತ ತಲುಪಿದ ಎರಡನೇ ಸೆಟ್ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ವೀಕ್ಷಿಸುವಂತೆ ಮಾಡಿತು. ಈ ಸೆಟ್ 84 ನಿಮಿಷ ನಡೆಯಿತು. ಟೈ ಬ್ರೇಕರ್‌ನಲ್ಲಿ ಕಿರಿಲೆಂಕೊ 17-15ರಲ್ಲಿ ಗೆದ್ದರು.ಎರಡನೇ ಶ್ರೇಯಾಂಕದ ವೇರಾ ಜೊನರೆವಾ 6-2, 6-2 ಜರ್ಮನಿಯ ಸಬಿನೆಲ್ ಲಿಸಿಕಿ ಎದುರು ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಮಹಿಳೆಯರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಇಟಲಿಯ ಫ್ಲೆವಿಯಾ ಪೆನೆಟಾ 6-4, 7-6ರಲ್ಲಿ ಚೀನಾದ ಶಾಯಿ ಪೆಂಗ್ ಎದುರೂ, ಜರ್ಮನಿಯ ಏಂಜೆಲಿಕ್ ಕರ್ಬರ್ 6-4, 6-3ರಲ್ಲಿ ಮೊನಿಕಾ ನಿಕುಲೆಸ್ ವಿರುದ್ಧವೂ ಗೆದ್ದು ಎಂಟರ ಘಟ್ಟದಲ್ಲಿ ಆಡಲು ಅರ್ಹತೆ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.