ಟೆನಿಸ್: ಪೇಸ್-ಭೂಪತಿ ಚಾಂಪಿಯನ್

7

ಟೆನಿಸ್: ಪೇಸ್-ಭೂಪತಿ ಚಾಂಪಿಯನ್

Published:
Updated:
ಟೆನಿಸ್: ಪೇಸ್-ಭೂಪತಿ ಚಾಂಪಿಯನ್

ಮಿಯಾಮಿ (ಐಎಎನ್‌ಎಸ್): ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಇಲ್ಲಿ ನಡೆದ ಸೋನಿ ಎರಿಕ್ಸನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಚಾಂಪಿಯನ್ ಆದರು.ಕ್ರಾಂಡೋನ್ ಪಾರ್ಕ್ ಅಂಗಳದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಇಂಡಿಯನ್ ಎಕ್ಸಪ್ರೆಸ್ ಖ್ಯಾತಿಯ ಪೇಸ್-ಭೂಪತಿ ಜೋಡಿ 6-7, 6-2, 10-5ರಲ್ಲಿ ಎರಡನೇ ಶ್ರೇಯಾಂಕದ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ -ಕೆನಡಾದ ಡೇನಿಯಲ್ ನೆಸ್ಟರ್ ಜೋಡಿಯನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.ರೋಚಕ ಹಣಾಹಣಿಯಿಂದ ಕೂಡಿದ್ದ ಮೊದಲ ಸೆಟ್‌ನಲ್ಲಿ ಭಾರಿ ಹೋರಾಟ ತೋರಿದ ಪೇಸ್-ಭೂಪತಿ ಜೋಡಿ ಸೋಲು ಅನುಭವಿಸಬೇಕಾಯಿತು. ಆದರೆ ಎರಡನೇ ಸೆಟ್‌ನಲ್ಲಿ ಉತ್ತಮ ಲಯ ಕಂಡುಕೊಂಡ ಭಾರತದ ಆಟಗಾರರು ಮಿರ್ನಿ ಹಾಗೂ ನೆಸ್ಟರ್ ಜೋಡಿಯನ್ನು ಮಣಿಸಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡರು. ಒಂದು ಹಂತದಲ್ಲಿ 3-1ರಲ್ಲಿ ಮುಂದಿದ್ದ ಭಾರತದ ಜೋಡಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಮೂರನೇ ಸೆಟ್‌ನಲ್ಲಿಯೂ ಕರಾರುವಕ್ಕಾದ ಸರ್ವ್‌ಗಳ ಮೂಲಕ ಎದುರಾಳಿ ಆಟಗಾರರನ್ನು ಸುಲಭವಾಗಿ ಮಣಿಸಿದರು.ಕಳೆದ ವರ್ಷದ ಇದೇ ಟೂರ್ನಿಯಲ್ಲಿ ಲಿಯಾಂಡರ್ ಪೇಸ್ ಅರು ಲುಕಾಸ್ ಡ್ಲೌಹಿ ಜೊತೆಗೂಡಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆದರೆ ಮಹೇಶ್ ಭೂಪತಿಗೆ ಈ ಟೂರ್ನಿಯಲ್ಲಿ ಲಭಿಸಿದ ಮೊದಲ ಪ್ರಶಸ್ತಿ ಇದಾಗಿದೆ.‘ಕೊನೆಯ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಲಿಲ್ಲ ನಿಜ. ಅದೇ ರೀತಿ ಫೈನಲ್‌ನಲ್ಲಿ ಆಗಬಾರದು ಎನ್ನುವ ಉದ್ದೇಶದಿಂದ ಇಬ್ಬರೂ ಸೇರಿ ಹೋರಾಟ ನಡೆಸಿದೆವು. ಮೊದಲ ಸೆಟ್‌ನಲ್ಲಿಯೂ ಗೆಲ್ಲುವ ಅವಕಾಶವಿತ್ತು. ಆದರೆ ಬ್ರೇಕ್ ಪಾಯಿಂಟ್‌ಗಳ ಪ್ರಯೋಜನ ಪಡೆಯಲಿಲ್ಲ’ ಎಂದು ಲಿಯಾಂಡರ್ ಪೇಸ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.‘ಮೊದಲ ಸೆಟ್‌ನಲ್ಲಿ ಭಾರತದ ಆಟಗಾರರು ತೀವ್ರ ಪ್ರತಿರೋಧ ಒಡ್ಡಿದರು. ಆದರೂ ಚೆನ್ನಾಗಿ ಆಡಿ ಗೆಲುವು ಪಡೆದೆವು. ಆದರೆ ಉಳಿದ ಎರಡು ಸೆಟ್‌ಗಳಲ್ಲಿ ಪೇಸ್ ಹಾಗೂ ಭೂಪತಿ ಚೆನ್ನಾಗಿ ಆಡಿದರು ಎಂದ ನೆಸ್ಟರ್ ಹೇಳಿದರು.ಮಿಯಾಮಿ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಪೇಸ್ ಹಾಗೂ ಭೂಪತಿ ಜೋಡಿ 1630 ಪಾಯಿಂಟ್ ಗಳಿಸಿ ಟೀಮ್ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಒಟ್ಟು 2290 ಪಾಯಿಂಟ್ ಹೊಂದಿರುವ ಅಮೆರಿಕದ ಬಾಬ್ ಬ್ರಯಾನ್ ಹಾಗೂ ಮೈಕ್ ಬ್ರಯಾನ್ ಜೋಡಿ ಅಗ್ರಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry