ಶನಿವಾರ, ಅಕ್ಟೋಬರ್ 19, 2019
27 °C

ಟೆನಿಸ್: ಭೂಪತಿ-ರೋಹನ್‌ಗೆ ನಿರಾಸೆ

Published:
Updated:

ಚೆನ್ನೈ: ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತು.ಶನಿವಾರ ನಡೆದ ಪಂದ್ಯದಲ್ಲಿ ಇಸ್ರೇಲ್‌ನ ಜೊನಾಥನ್ ಎಲ್ರಿಚ್ ಮತ್ತು ಆ್ಯಂಡಿ ರಾಮ್ ಜೋಡಿ 4-6, 6-3, 10-8 ರಲ್ಲಿ ಭಾರತದ ಆಟಗಾರರನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಒಂದೂವರೆ ಗಂಟೆಯ ಹೋರಾಟದ ಬಳಿಕ ಭೂಪತಿ ಮತ್ತು ರೋಹನ್ ಎದುರಾಳಿಗಳಿಗೆ ಶರಣಾದರು.ರೋನಿಕ್- ತಿಪ್ಸರೆವಿಕ್ ಪೈಪೋಟಿ: ಕೆನಡಾದ ಮಿಲೋಸ್ ರೋನಿಕ್ ಮತ್ತು ಸರ್ಬಿಯದ ಜಾಂಕೊ ತಿಪ್ಸಾರೆವಿಕ್ ಅವರು ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದು, ಪ್ರಶಸ್ತಿಗಾಗಿ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ ರೋನಿಕ್ 6-4, 6-4 ರಲ್ಲಿ ಸ್ಪೇನ್‌ನ ನಿಕೊಲಸ್ ಅಲ್ಮಾರ್ಗೊ ವಿರುದ್ಧ ಜಯ ಪಡೆದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 31ನೇ ಸ್ಥಾನದಲ್ಲಿರುವ ರೋನಿಕ್ 72 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.ರೋನಿಕ್ ಬಿರುಸಿನ ಸರ್ವ್‌ಗಳ ಮೂಲಕ ಎದುರಾಳಿಯ ನಿದ್ದೆಗೆಡಿಸಿದರು. ಒಟ್ಟು 17 ಏಸ್‌ಗಳು ಅವರ ರ‌್ಯಾಕೆಟ್‌ನಿಂದ ಸಿಡಿದವು. ಕೆಲವೊಂದು ಸರ್ವ್‌ಗಳಲ್ಲಿ ಚೆಂಡು ಗಂಟೆಗೆ 200 ಕಿ.ಮೀ ವೇಗದಲ್ಲಿ ಎದುರಾಳಿಯ ಕೋರ್ಟ್‌ಗೆ ಅಪ್ಪಳಿಸಿತು. ಸ್ಪೇನ್‌ನ ಆಟಗಾರನ ಬಳಿ ಇದಕ್ಕೆ ತಕ್ಕ ಉತ್ತರ ಇರಲಿಲ್ಲ.ರೋನಿಕ್ ಸರ್ವ್‌ಗಳಲ್ಲಿ ಅಡಗಿರುವ ಶಕ್ತಿ ಏನೆಂಬುದು ಮೊದಲ ಸೆಟ್‌ನ ಎಂಟನೇ ಗೇಮ್‌ನಲ್ಲಿ ಅನಾವರಣಗೊಂಡಿತು. ಅವರು ಗಂಟೆಗೆ 215 ಕಿ.ಮೀ ವೇಗದಲ್ಲಿ ನಾಲ್ಕು ಏಸ್‌ಗಳನ್ನು ಸಿಡಿಸಿದರು. ಕೆನಡಾದ ಆಟಗಾರ ಯಾವುದೇ ಸೆಟ್ ಕಳೆದುಕೊಳ್ಳದೆ ಫೈನಲ್ ಪ್ರವೇಶಿಸಿದ್ದಾರೆ.`ನನ್ನ ಆಟದಲ್ಲಿ ಯಾವುದೇ ಲೋಪ ಇರಲಿಲ್ಲ. ರೋನಿಕ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರ ಸರ್ವ್‌ಗಳು ಅದ್ಭುತವಾಗಿದ್ದವು. ಹಾರ್ಡ್‌ಕೋರ್ಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಬಲ್ಲ ವಿಶ್ವದ ಕೆಲವೇ ಆಟಗಾರರಲ್ಲಿ ಅವರೂ ಒಬ್ಬರು~ ಎಂದು ಪಂದ್ಯದ ಬಳಿಕ ಅಲ್ಮಾರ್ಗೊ ಪ್ರತಿಕ್ರಿಯಿಸಿದರು.ಅಗ್ರಶ್ರೇಯಾಂಕ ಪಡೆದಿರುವ ತಿಪ್ಸಾರೆವಿಕ್ ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ 6-1, 6-4 ರಲ್ಲಿ ಜಪಾನ್‌ನ ಗೊ ಸೊಯೆದಾ ಅವರನ್ನು ಮಣಿಸಿದರು. ಸೊಯೆದಾ ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ ಎದರು ಅಚ್ಚರಿಯ ಗೆಲುವು ಪಡೆದಿದ್ದರು.ಆದರೆ ಸರ್ಬಿಯದ ಆಟಗಾರನ ಮುಂದೆ ಅವರು ಹೆಚ್ಚಿನ ಪ್ರತಿರೋಧ ತೋರಲು ವಿಫಲರಾದರು.

Post Comments (+)