ಟೆನಿಸ್: ರ್ಯಾಂಕಿಂಗ್‌ನಲ್ಲಿ ಸೋಮ್‌ಗೆ 80ನೇ ಸ್ಥಾನ

7

ಟೆನಿಸ್: ರ್ಯಾಂಕಿಂಗ್‌ನಲ್ಲಿ ಸೋಮ್‌ಗೆ 80ನೇ ಸ್ಥಾನ

Published:
Updated:

ನವದೆಹಲಿ (ಪಿಟಿಐ): ಸೋಮ್‌ದೇವ್ ದೇವ್‌ವರ್ಮನ್ ಅವರು ನೂತನ ಎಟಿಪಿ ಟೆನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ 80ನೇ ಸ್ಥಾನ ಪಡೆದಿದ್ದಾರೆ.

ಭಾರತದ ಆಟಗಾರನಿಗೆ ವೃತ್ತಿಜೀವನದಲ್ಲಿ ಲಭಿಸಿದ ಅತ್ಯುತ್ತಮ ರ್ಯಾಂಕಿಂಗ್ ಇದು. ಈ ಹಿಂದಿನ ಪಟ್ಟಿಯಲ್ಲಿ 110ನೇ ಸ್ಥಾನದಲ್ಲಿದ್ದ ಅವರು 30 ಕ್ರಮಾಂಕದಷ್ಟು ಮೇಲಕ್ಕೇರಿದ್ದಾರೆ.

ಭಾನುವಾರ ಕೊನೆಗೊಂಡ ದಕ್ಷಿಣ ಆಫ್ರಿಕಾ ಓಪನ್ ಟೆನಿಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನ ಪಡೆದ ಕಾರಣ ಸೋಮ್ ರ್ಯಾಂಕಿಂಗ್‌ನಲ್ಲಿ ಮೇಲಕ್ಕೇರಿದ್ದಾರೆ.ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಸೋಮ್ 6-4, 3-6, 2-6 ರಲ್ಲಿ ಸ್ಥಳೀಯ ಆಟಗಾರ ಕೆವಿನ್ ಆ್ಯಂಡರ್‌ಸನ್ ಕೈಯಲ್ಲಿ ಸೋಲು ಅನುಭವಿಸಿದರು. ಮೊದಲ ಸೆಟ್ ಗೆದ್ದ ಭಾರತದ ಆಟಗಾರ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. ಈ ಪಂದ್ಯ      ಎರಡು ಗಂಟೆ 19 ನಿಮಿಷಗಳ   ಕಾಲ ನಡೆಯಿತು.ಅಗ್ರ 50ರೊಳಗಿನ ಸ್ಥಾನದ ಗುರಿ: ಈ ಋತುವಿನ ಕೊನೆಯ ವೇಳೆಗೆ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ 50ರ ಒಳಗೆ ಕಾಣಿಸಿಕೊಳ್ಳುವ ಗುರಿ ಹೊಂದಿರುವುದಾಗಿ ಸೋಮ್‌ದೇವ್ ಅವರು ತಿಳಿಸಿದರು.‘ದಕ್ಷಿಣ ಆಫ್ರಿಕಾ ಓಪನ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕಳೆದ ವಾರ ನಾನು ಚೆನ್ನಾಗಿ ಆಡಿದ್ದೇನೆ. ಇಂತಹ ವಾರಗಳು ಮುಂದೆಯೂ ಬರಲಿ’ ಎಂದು ಅವರು ಸೋಮವಾರ ನುಡಿದರು. ‘ಈ ವರ್ಷದ ಕೊನೆಗೆ 50 ರೊಳಗಿನ ಸ್ಥಾನ ಪಡೆಯುವ ವಿಶ್ವಾಸವಿದೆ’ ಎಂದರು.ದಕ್ಷಿಣ ಆಫ್ರಿಕಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದದ್ದು ನಿರಾಸೆ ಉಂಟುಮಾಡಿದೆ ಎಂದರು ಸೋಮ್. ‘ನಿಜವಾಗಿಯೂ ನನಗೆ ಅಲ್ಪ ನಿರಾಸೆಯಾಗಿದೆ. ಆದರೂ ನಾನು ಟೂರ್ನಿಯಲ್ಲಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಕಲಿತುಕೊಂಡೆ’ ಎಂದು ಹೇಳಿದರು.ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ಸಾನಿಯಾ ಮಿರ್ಜಾ ಅವರು ಸಿಂಗಲ್ಸ್ (135) ಮತ್ತು ಡಬಲ್ಸ್ (66) ವಿಭಾಗದಲ್ಲಿ ಹಿಂದಿನ ಸ್ಥಾನವನ್ನೇ ಉಳಿಸಿಕೊಂಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ (5) ಮತ್ತು ಲಿಯಾಂಡರ್ ಪೇಸ್ (6) ಅವರ ರ್ಯಾಂಕಿಂಗ್‌ನಲ್ಲಿ ಬದಲಾವಣೆ ಉಂಟಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry