ಟೆನಿಸ್: ಸಾನಿಯಾ-ವೆಸ್ನಿನಾಗೆ ಚಾಂಪಿಯನ್ ಪಟ್ಟ

7

ಟೆನಿಸ್: ಸಾನಿಯಾ-ವೆಸ್ನಿನಾಗೆ ಚಾಂಪಿಯನ್ ಪಟ್ಟ

Published:
Updated:
ಟೆನಿಸ್: ಸಾನಿಯಾ-ವೆಸ್ನಿನಾಗೆ ಚಾಂಪಿಯನ್ ಪಟ್ಟ

ಚಾರ್ಲ್‌ಸ್ಟನ್, ಅಮೆರಿಕ (ಐಎಎನ್‌ಎಸ್):  ಮೂರು ವಾರಗಳ ಹಿಂದೆ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಅವರು ಇಲ್ಲಿ ನಡೆದ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ  ಮತ್ತೆ ಪ್ರಶಸ್ತಿಯನ್ನು ಗೆದ್ದುಕೊಂಡರು.



ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಸಾನಿಯಾ-ವೆಸ್ನಿನಾ ಜೋಡಿ 6-4, 6-4ರಲ್ಲಿ ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್  ಹಾಗೂ ಮೇಘನ್ ಶಾಘ್ನಿಸ್ಸೆ ಜೋಡಿ ಎದುರು ಪ್ರಯಾಸದ ಗೆಲುವು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.



ಸಾನಿಯಾ ಹಾಗೂ ವೆಸ್ನಿನಾ ಅವರು ಡಬ್ಲ್ಯುಟಿಎ ಟೂರ್ನಿಯಲ್ಲಿ ಗೆಲ್ಲುತ್ತಿರುವ ಎರಡನೇ ಪ್ರಶಸ್ತಿ ಇದಾಗಿದೆ. ಕೆಲ ದಿನಗಳ ಹಿಂದೆ ನಡೆದ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.



ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ  ಸಾನಿಯಾ ಹಾಗೂ ವೆಸ್ನಿನಾ ಮೊದಲ ಸೆಟ್‌ನಲ್ಲಿ 5-1ರ ಮುನ್ನಡೆ ಹೊಂದಿದ್ದರು. ಆದರೆ ಚುರುಕಿನ ಆಟವಾಡಿದ ಸ್ಯಾಂಡ್ಸ್ ಹಾಗೂ ಮೇಘನ್ ಜೋಡಿ ಭಾರಿ ಪ್ರತಿರೋಧ ಒಡ್ಡಿತು. ಎರಡನೇ ಸೆಟ್‌ನಲ್ಲಿಯೂ ಮೊದಲು   4-0ರಲ್ಲಿ ಮುನ್ನಡೆ ಹೊಂದಿದ್ದ ಭಾರತ ಹಾಗೂ ರಷ್ಯಾದ ಆಟಗಾರ್ತಿಯರಿಗೆ ಸವಾಲು ಒಡ್ಡಿದ ಸ್ಯಾಂಡ್ಸ್ ಹಾಗೂ ಮೇಘನ್ 4-4ರಲ್ಲಿ ಸಮಬಲ ಸಾಧಿಸಿದರು. ಒಂದು ಹಂತದಲ್ಲಿ ಪಂದ್ಯ ಕೈ ಜಾರಿ ಹೋಗುವ ಆತಂಕದಲ್ಲಿದ್ದಾಗ ಸಾನಿಯಾ ಮತ್ತು ವೆಸ್ನಿನಾ ಚುರುಕಿನ ಆಟವಾಡಿ ಎದುರಾಳಿ ಆಟಗಾರ್ತಿಯರಿಗೆ ‘ಶಾಕ್’ ನೀಡಿದರು.



ಸಾನಿಯಾ ಹಾಗೂ ವೆಸ್ನಿನಾ ಜೊತೆಯಾಗಿ ಆಡಿದ ಐದನೇ ಟೂರ್ನಿ ಇದಾಗಿದೆ. ಟೆನಿಸ್ ವೃತ್ತಿ ಜೀವನದ ಡಬಲ್ಸ್ ವಿಭಾಗದಲ್ಲಿ ಸಾನಿಯಾಗೆ ಲಭಿಸುತ್ತಿರುವ 11ನೇ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ. ಎಲೆನಾ ಅವರಿಗೆ ಲಭಿಸಿದ ಐದನೇ ಪ್ರಶಸ್ತಿ ಇದು.



‘ವೆಸ್ನಿನಾ ನನಗೆ ಉತ್ತಮ ಬೆಂಬಲ ನೀಡಿದರು. ಇಬ್ಬರೂ ಉತ್ತಮ ಆಟವಾಡಿದೆವು. ಖಂಡಿತವಾಗಿಯೂ ಈ ಟೂರ್ನಿಯಿಂದ ನನ್ನ ಆಟದ ಗುಣಮಟ್ಟವನ್ನು ಸುಧಾರಿಸಿಕೊಂಡೆ, ಟೂರ್ನಿಯುದ್ದಕ್ಕೂ ನಮ್ಮಿಬ್ಬರ ನಡುವಿನ ಹೊಂದಾಣಿಕೆಯ ಆಟ ನಮಗೆ ಪ್ರಶಸ್ತಿ ತಂದುಕೊಟ್ಟಿತು, ಹಾಗೆಯೇ ಆತ್ಮ ವಿಶ್ವಾಸವನ್ನು ಹೆಚ್ಚಿಸಿತು’ ಎಂದು ಪಂದ್ಯದ ನಂತರ ಸಾನಿಯಾ  ಪ್ರತಿಕ್ರಿಯಿಸಿದರು. ‘ಸಾನಿಯಾ ಉತ್ತಮ ಆಟಗಾರ್ತಿ ಟೂರ್ನಿಯಲ್ಲಿ ನನಗೆ ಉತ್ತಮ ಸಾಥ್ ನೀಡಿದ್ದರಿಂದಲೇ ಪ್ರಶಸ್ತಿ ಒಲಿಯಿತು’ ಎಂದು ವೆಸ್ನಿನಾ ಚುಟುಕಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry