ಟೆನಿಸ್: ಸೆಮಿಫೈನಲ್‌ಗೆ ಅಂಕಿತಾ, ಪ್ರಾರ್ಥನಾ

7

ಟೆನಿಸ್: ಸೆಮಿಫೈನಲ್‌ಗೆ ಅಂಕಿತಾ, ಪ್ರಾರ್ಥನಾ

Published:
Updated:

ಬೀದರ್: ಐದನೇ ಶ್ರೇಯಾಂಕದ ಆಟಗಾರ್ತಿ ಅಂಕಿತಾ ರೈನಾ ಮತ್ತು ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಪ್ರಾರ್ಥನಾ ತೋಂಬ್ರೆ ಇಲ್ಲಿ ನಡೆಯುತ್ತಿರುವ ಐಟಿಎಫ್ ಬೀದರ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಭರವಸೆಯ ಆಟವಾಡಿದ ಇಬ್ಬರೂ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿಗಳನ್ನು ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಉಪಾಂತ್ಯ ಹಂತ ಪ್ರವೇಶಿಸಿದರು.ಪ್ರಾರ್ಥನಾ ಕೊರಿಯಾದ ಜೂ ಯುನ್ ಕಿಮ್ ಅವರ ವಿರುದ್ಧ 6-0 ಮತ್ತು 6-2 ಸೆಟ್‌ಗಳಿಂದ ಜಯಗಳಿಸಿದರೆ; ಅಂಕಿತಾ ರೈನಾ ಥಾಯ್ಲೆಂಡ್‌ನ ವರುಣ್ಯಾ ವೊಂಗ್‌ಟೀನ್ ವಿರುದ್ಧ 6-4, 7-6 (2) ಸೆಟ್‌ಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾದರು.ಆರಂಭದಿಂದಲೇ ದಾಳಿಗಿಳಿದ ಪ್ರಾರ್ಥನಾ  ಕಿಮ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಇವರ ಆಟದಲ್ಲಿ ಕೆಲ ಉತ್ತಮ ಸರ್ವ್‌ಗಳು ಮೂಡಿಬಂದವು. ಹೊಡೆತಗಳಲ್ಲಿ ನಿಖರತೆ ಕಾಪಾಡಿಕೊಂಡರು.

ಪ್ರಬಲ ಎದುರಾಳಿ ಇದ್ದರೂ ಅಂಕಿತಾ ರೈನಾ ಉತ್ತಮ ಆಟ ಪ್ರದರ್ಶಿಸಿದರು.ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಕಂಡುಬಂದರೂ ಅಂತಿಮವಾಗಿ ಸೆಟ್‌ನ್ನು 6-4 ರಿಂದ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಇದರಿಂದ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್ ಮೊರೆಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಅಂಕಿತಾ 7-2 ರಲ್ಲಿ ಮುನ್ನಡೆ ಸಾಧಿಸಿ ಸೆಟ್ ಗೆದ್ದುಕೊಂಡರು.ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಯುಮಿ ಮಿಯಾಜಕಿ   ಥಾಯ್ಲೆಂಡ್‌ನ ವಾನಾಸುಕ್ ವಿರುದ್ಧ 6-2, 7-5 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್‌ಗೆ ಮುನ್ನಡೆದರು. ಹಾಂಕಾಂಗ್‌ನ  ವಿಂಗ್ ಯೂ ವೆನಿಸ್ ಚಾನ್ ಅವರು ನಿಧಿ ಚಿಲುಮಿಲಾ ವಿರುದ್ಧ 6-2, 1-6, 6-1 ರಲ್ಲಿ ಜಯ ಸಾಧಿಸಿದರು.ಶುಕ್ರವಾರದ ಪಂದ್ಯದಲ್ಲಿ ಅಂಕಿತಾ ರೈನಾ ಅವರು ಹಾಂಗ್‌ಕಾಂಗ್‌ನ ವಿಂಗ ಯೂ ವೆನಿಸ್ ಚಾನ್ ಅವರನ್ನು ಎದುರಿಸಿದರೆ; ಪ್ರಾರ್ಥನಾ ಅವರು ಮಿಯಾಜಾಕಿ ಅವರನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry